Site icon Vistara News

Viral Video: ಮನೆಯ ಹೊರಗೆ ತಾಯಿಯ ಜೊತೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!

Viral Video

ನೋಯ್ಡಾ : ಚಿಕ್ಕಮಕ್ಕಳು ಆಟವಾಡುತ್ತಿರುವಾಗ ಪೋಷಕರು ಅವರ ಗಮನಕೊಡುವ ಬದಲು ಮೊಬೈಲ್ ನೋಡುವುದರಲ್ಲಿ, ಬೇರೆಯವರ ಜೊತೆ ಮಾತನಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ಆದರೆ ಚಿಕ್ಕಮಕ್ಕಳು ಹೊರಗಡೆ ಅಥವಾ ಮನೆಯ ಒಳಗಡೆ ಆಟವಾಡುವಾಗ ಪೋಷಕರು ಮಕ್ಕಳ ಬಗ್ಗೆ ಗಮನಕೊಡುತ್ತಿರಬೇಕು. ಇಲ್ಲವಾದರೆ ಇದರಿಂದ ಅಪಾಯ ಸಂಭವಿಸಬಹುದು. ಆದರೆ ಕೆಲವೊಮ್ಮೆ ಮಕ್ಕಳು ಪಾಪ ತಮ್ಮ ಪಾಡಿಗೆ ಮನೆಯ ಬಳಿ ಆಟವಾಡುತ್ತಿದ್ದರೂ ಅವರದಲ್ಲದ ತಪ್ಪಿಗೆ ಬಲಿಪಶು ಆಗುತ್ತಿದ್ದಾರೆ. ಚಾಲಕರ ಬೇಜವಾಬ್ದಾರಿ ಚಾಲನೆ ಇದಕ್ಕೆ ಕಾರಣ. ಅಂತಹದೊಂದು ಘಟನೆ ಇದೀಗ ನೋಯ್ಡಾದಲ್ಲಿ ಸಂಭವಿಸಿದ್ದು, ವಿಡಿಯೋ ವೈರಲ್ (Viral Video )ಆಗಿದೆ.

ನೋಯ್ಡಾದ ಸೆಕ್ಟರ್ 63 ರ ಬಿ ಬ್ಲಾಕ್‌ನಲ್ಲಿ ಶುಕ್ರವಾರ ಸಂಜೆ ತಾಯಿಯೊಂದಿಗೆ ಮನೆಯ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ರಸ್ತೆಯ ಹೊರಗೆ ಕುಳಿತು ಆಟವಾಡುತ್ತಿದ್ದಾಗ ಬಿಳಿ ಬಣ್ಣದ ಕಾರು ಬಂದು ಮಗುವಿನ ಮೇಲೆ ಹರಿದಿದೆ. ಮಗುವಿನ ತಾಯಿ ತಕ್ಷಣ ತನ್ನ ಮಗುವನ್ನು ಎತ್ತಿಕೊಂಡು ಗೋಳಾಡುತ್ತಾ ಆಸ್ಪತ್ರೆಯ ಕಡೆಗೆ ಹೋಗಿದ್ದಾಳೆ.

ವರದಿಗಳ ಪ್ರಕಾರ, ಗಾಯಗೊಂಡ ಬಾಲಕಿಯನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ವಿಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ರಿಂಕಿ ಎಂದು ಗುರುತಿಸಲಾಗಿದ್ದು, ಅವರು ಕನೌಜಿಯಾ ಎಂಬ ವ್ಯಕ್ತಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಘಟನೆಯ ಬಗ್ಗೆ ಸೆಕ್ಟರ್ -63 ಠಾಣೆಯ ಪೊಲೀಸರು ಸೋಶಿಯಲ್ ಮೀಡಿಯಾಗಳ ಮೂಲಕ ಮಾಹಿತಿ ಪಡೆದರು. ಘಟನೆಯ ಬಗ್ಗೆ ತಕ್ಷಣ ಗಮನ ಹರಿಸಿದ ಪೊಲೀಸರು ಗಂಭೀರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ವಾಹನವನ್ನು ಗುರುತಿಸಲಾಗಿದೆ. ಆರೋಪಿ ಕಾರು ಚಾಲಕನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಬಾಲಕಿಯ ಸರಿಯಾದ ಚಿಕಿತ್ಸೆಗಾಗಿ ಆಸ್ಪತ್ರೆಯ ಆಡಳಿತವನ್ನು ಸಂಪರ್ಕಿಸಲಾಗಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

ಇಂತಹದೊಂದು ಘಟನೆ ಈ ವರ್ಷದ ಏಪ್ರಿಲ್ ನಲ್ಲಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನ ಅಗರ ಗ್ರಾಮದಲ್ಲಿ ನಡೆದಿದ್ದು, ಮನೆಯ ಮುಂದೆ ನಿಂತಿದ್ದ ಒಂದೂವರೆ ವರ್ಷದ ಮಗುವಿಗೆ ತಂದೆಯ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿತ್ತು. ಮಗುವಿನ ಕುಟುಂಬದವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಗು ತನ್ನ ಹೆತ್ತವರೊಂದಿಗೆ ಸಂಜೆ ಚನ್ನಪಟ್ಟಣದಿಂದ ಹಿಂದಿರುಗಿತ್ತು.ಆಕೆಯ ತಂದೆ ವಾಹನದಿಂದ ಸಾಮಾನುಗಳನ್ನು ಹೊರತೆಗೆದು, ಕಾರು ಪಾರ್ಕಿಂಗ್ ಮಾಡುತ್ತಿದ್ದಾಗ ಮಗು ವಾಹನದ ಹಿಂಭಾಗದ ಚಕ್ರದ ಅಡಿಯಲ್ಲಿ ಬಂದು ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾಗಿ ಸಾವನಪ್ಪಿದೆ.

Exit mobile version