Site icon Vistara News

Viral Video: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

Viral Video

ಕೋಲ್ಕತ್ತಾ: ಜಗತ್ತಿನಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡಬೇಕು ಎನ್ನುತ್ತಾರೆ. ಯಾಕೆಂದರೆ ತಾಯಿ, ಸಹೋದರಿ, ಪತ್ನಿ, ಮಗಳಾಗಿ ಮಹಿಳೆ ಪುರುಷರ ಪಾಲಿನ ದೀಪವಾಗುತ್ತಾಳೆ, ಅವರ ಬದುಕಿಗೆ ಸ್ಫೂರ್ತಿಯಾಗುತ್ತಾಳೆ ಮಹಿಳೆ. ಹಾಗಾಗಿ ಕಾನೂನುಗಳಲ್ಲಿ ಪುರುಷರಂತೆ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಆದರೆ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಇತ್ತೀಚೆಗೆ ಮಹಿಳೆಯರಿಗೆ ಘೋರ ಅವಮಾನ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಇತ್ತೀಚೆಗೆ ಕೊಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸ್ವಾಮಿ ಜ್ಞಾನವತ್ಸಲ್ಯ ಹಾಗೂ ಸಮ್ಮೇಳನದ ಸಂಘಟಕರು ಮಹಿಳೆಯರಿಗೆ ಅವಮಾನ ಮಾಡಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕೊಲ್ಕತ್ತಾದಲ್ಲಿ ಸಿಎ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಸ್ವಾಮಿ ಜ್ಞಾನವತ್ಸಲ್ಯ ಅವರನ್ನು ಆಹ್ವಾನಿಸಲಾಗಿತ್ತು. ಆ ವೇಳೆ ಅಲ್ಲಿ ಹಲವು ಮಹಿಳೆಯರು ಹಾಗೂ ಪುರುಷರು ನೆರೆದಿದ್ದರು. ಆದರೆ ಐಸಿಎಐ ಅಧ್ಯಕ್ಷ ರಂಜಿತ್ ಕುಮಾರ್ ಅಗರ್ವಾಲ್ ಅವರು ಭಾಷಣದ ವೇಳೆ ಸಭಾಂಗಣದ ಮೊದಲ ಐದು ಸಾಲುಗಳಲ್ಲಿ ಯಾವುದೇ ಮಹಿಳೆ ಅಥವಾ ಹುಡುಗಿಯರು ಇರಬಾರದು. ಒಂದು ವೇಳೆ ಷರತ್ತು ಪಾಲಿಸದಿದ್ದರೆ ಸ್ವಾಮೀಜಿ ವೇದಿಕೆ ಬಿಟ್ಟು ಹೋಗಲಿದ್ದಾರೆ ಎಂದು ಹೇಳಿದ್ದಾರೆ.

ಅವರು ಯಾವ ಸಮಯದಲ್ಲಾದರೂ ಬರಬಹುದು. ಹಾಗಾಗಿ ಯಾವುದೇ ಹುಡುಗಿಯರು, ಮಹಿಳಾ ಸ್ವಯಂಸೇವಕರು ಮುಂದೆ ಬರಬಾರದು. ಎಲ್ಲರೂ ಹಿಂದೆ ಹೋಗುವಂತೆ ತಿಳಿಸಲಾಗಿದೆ. ಆಗ ಎಲ್ಲಾ ಮಹಿಳೆಯರು ಹಿಂದಿನ ಸಾಲಿಗೆ ತೆರಳಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಸಖತ್ ವೈರಲ್ ಆಗಿದೆ. ಮಹಿಳೆಯರ ಬಗ್ಗೆ ತಾರತಮ್ಯ ತೋರಿದ ಸ್ವಾಮಿ ಜ್ಞಾನವತ್ಸಲ್ಯ ಮತ್ತು ಸಮ್ಮೇಳನದ ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಕೌಂಟೆಂಟ್ ವೃತ್ತಿಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ನಮ್ಮ ಹೆಮ್ಮೆಯ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ(ಐಸಿಎಐ)ಯ ತನ್ನ ವೇದಿಕೆಗೆ ಸಮಾನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸುತ್ತದೆ ಎಂದರೆ ನಾಚಿಕೆಗೇಡಿನ ವಿಚಾರ ಎಂದು ಹಲವರು ಟೀಕೆ ಮಾಡಿದ್ದಾರೆ.

ಅಲ್ಲದೇ ‘2047ರ ವೇಳೆಗೆ ಭಾರತ ವಿಕಾಸ ಹೊಂದುತ್ತದೆ ಎಂಬ ಸ್ವಾಮೀಜಿಯ ಧೋರಣೆ ನೇರವೇರುವುದಿಲ್ಲ’ ಎಂದು ಒಬ್ಬರು ಬರೆದಿದ್ದಾರೆ. ಹಾಗೇ ಮತ್ತೊಬ್ಬರು ‘ಸಿಎಂ ಮಮತಾ ಬ್ಯಾನರ್ಜಿ ಅವರು ಈ ಸಮ್ಮೇಳನದಲ್ಲಿ ಉಪಸ್ಥಿತರಿದ್ದರೆ ನೀವು ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ‘ಇಂತಹ ತಪ್ಪನ್ನು ಮಾಡಿದ ಪ್ರತಿಯೊಬ್ಬರನ್ನೂ ವಜಾಗೊಳಿಸಬೇಕು’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಏಳುಮಲ್ಲಿಗೆ ತೂಕದ ಚೆಲುವೆ ಪರಿಣಿತಿ ಚೋಪ್ರಾ ಸಿಕ್ಕಾಪಟ್ಟೆ ದಪ್ಪಗಾಗಿದ್ದು ಯಾಕೆ?

ಈ ಘಟನೆಗೆ ಸಂಬಂಧಿಸಿದಂತೆ ಸ್ವಾಮಿ ಜ್ಞಾನವತ್ಸಲ್ಯ ಹಾಗೂ ಐಸಿಎಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಅವಮಾನ, ಅಗೌರವ ತೋರಿದ್ದಕ್ಕೆ ಟೀಕೆ ವ್ಯಕ್ತವಾಗುತ್ತಿದೆ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡುವ ತತ್ವಗಳನ್ನು ಎತ್ತಿ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

Exit mobile version