ಲಕ್ನೋ : ಆಸ್ಪತ್ರೆಗೆ ಎಲ್ಲರೂ ಅನಾರೋಗ್ಯಕ್ಕೆ ಚಿಕಿತ್ಸೆಗೆಂದು ಹೋಗುತ್ತಾರೆ. ಆದರೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ಬಂದ ರೋಗಿಯ ಹೆಣ್ಣು ಮಕ್ಕಳಿಗೆ ಐಸಿಯುನಲ್ಲಿ ಮದುವೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಉತ್ತರ ಪ್ರದೇಶದ ಲಕ್ನೋದ ಎರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಲಕ್ನೋ ನಿವಾಸಿಯಾದ ಮೊಹಮ್ಮದ್ ಇಕ್ಬಾಲ್ (51) ಅವರು ದಾಖಲಾಗಿದ್ದರು. ಆದರೆ ಇನ್ನೂ ಕೆಲವೇ ದಿನಗಳಲ್ಲಿ ಅವರ ಹೆಣ್ಣುಮಕ್ಕಳ ಮದುವೆ ಇತ್ತು. ಇಕ್ಬಾಲ್ ಅವರು ತೀವ್ರ ಎದೆ ನೋವಿನಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಮಕ್ಕಳ ಮದುವೆಯ ವೇಳೆ ಅವರನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ನಿರಾಕರಿಸಿದರು. ಹಾಗಾಗಿ ಅವರ ಮಕ್ಕಳ ಮದುವೆ ನೋಡಬೇಕೆಂಬ ಬಯಕೆಯನ್ನು ಈಡೇರಿಸಲು ಆಸ್ಪತ್ರೆಯ ವೈದ್ಯರ ಬೆಂಬಲದೊಂದಿಗೆ ಅವರಿದ್ದ ಐಸಿಯುನಲ್ಲಿಯೇ ಅವರ ಮಕ್ಕಳಿಗೆ ಮದುವೆ ಮಾಡಲಾಯಿತು!
Unique marriage took place with simplicity and rituals in the ICU of Era Hospital, #Lucknow !
— Nuzba Amen Sheakh (@nuzzu52103) June 16, 2024
Father admitted in ICU got his daughters married in front of hi. pic.twitter.com/rFJIhRCpsK
ಇಕ್ಬಾಲ್ ಸಂಬಂಧಿಕರು ಆತ ಇಲ್ಲದೇ ಮಕ್ಕಳ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಇಕ್ಬಾಲ್ ಮದುವೆಗೆ ಬರಲು ಸಾಧ್ಯವಾಗದ ಕಾರಣ ಆಸ್ಪತ್ರೆಯಲ್ಲಿಯೇ ಸರಳವಾಗಿ ಮದುವೆಯಾಗಲು ಅವಕಾಶ ನೀಡುವಂತೆ ವೈದ್ಯರ ಬಳಿ ಮನವಿ ಮಾಡಿದ್ದರು. ಸಾಕಷ್ಟು ಚರ್ಚೆಯ ಬಳಿಕ ವೈದ್ಯರು ಮದುವೆಗೆ ಅನುಮತಿ ನೀಡಿದ ಕಾರಣ ಅವರ ಮಕ್ಕಳ ಮದುವೆ ಅವರ ಕಣ್ಣುಮುಂದೆಯೇ ನಡೆದಿದೆ. ಇಕ್ಬಾಲ್ ಮೊದಲ ಮಗಳು ಐಸಿಯುನಲ್ಲಿ ಗುರುವಾರ ಮದುವೆಯಾದರೆ, ಅವರ ಎರಡನೇ ಮಗಳು ಮರುದಿನ ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೇ ಈ ಅದ್ಭುತ ಕ್ಷಣವನ್ನು ಆಸ್ಪತ್ರೆಯಲ್ಲಿ ನಡೆಸುವ ಮುನ್ನ ಆಸ್ಪತ್ರೆಯ ಸಿಬ್ಬಂದಿ ಮತ್ತು ಆಡಳಿತ ವರ್ಗ, ಇತರರ ರೋಗಗಳಿಗೆ ಸಮಸ್ಯೆಯಾಗುವುದನ್ನು ತಡೆಯಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದಾರೆ. ಮತ್ತು ಮಾನವೀಯತೆಯಿಂದ ಈ ಮದುವೆಗೆ ಐದು ಜನರಿಗೆ ಭಾಗವಹಿಸಲು ಅವಕಾಶ ನೀಡಿದ್ದರು ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ ಇಕ್ಬಾಲ್ ಮಕ್ಕಳ ಮದುವೆ ಜೂನ್ 22ರಂದು ಮುಂಬೈನಲ್ಲಿ ನಿಗದಿಯಾಗಿತ್ತು.
ಇದನ್ನೂ ಓದಿ: Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!
“ನಮ್ಮ ತಂದೆ ನಮ್ಮ ಜಗತ್ತು. ಮತ್ತು ಅವರ ಆಶೀರ್ವಾದವಿಲ್ಲದೆ ಮದುವೆಯಾಗಲು ನಮಗೆ ಇಷ್ಟವಿಲ್ಲ. ಇದಕ್ಕೆ ಅವಕಾಶ ಮಾಡಿಕೊಟ್ಟ ಆಸ್ಪತ್ರೆಯ ಆಡಳಿತ ವರ್ಗಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ತಂದೆ ವೆಂಟಿಲೇಟರ್ ಸಹಾಯದಿಂದ ಪ್ರಜ್ಞೆಯಲ್ಲಿದ್ದರು. ನಮ್ಮ ಮದುವೆ ನೋಡಿ ಅವರ ಕಣ್ಣು ತೃಪ್ತಿಯಿಂದ ತುಂಬಿದವು” ಎಂದು ಇಕ್ಬಾಲ್ ಮಕ್ಕಳು ಹೇಳಿದ್ದಾರೆ.