Site icon Vistara News

Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Viral Video

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟರಮಟ್ಟಿಗೆ ಇದೆ ಎಂದರೆ ಅದಕ್ಕೆ ನಿದರ್ಶನ ಎಂಬಂತೆ ಮುಂಬಯಿಯಲ್ಲಿ ನಡೆದ ಈ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ. ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಆಯೋಜಿಸಿದ್ದ ವಾಕ್-ಇನ್ ಸಂದರ್ಶನಕ್ಕಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಮಂಗಳವಾರ ಮುಂಬೈನ ಕಲಿನಾ ಪ್ರದೇಶದಲ್ಲಿ ಜಮಾಯಿಸಿದಾಗ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿವಿಧ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡ ‘ಹ್ಯಾಂಡಿಮ್ಯಾನ್’ ಉದ್ಯೋಗಕ್ಕಾಗಿ ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಕಂಪನಿಯು ಲೋಡರ್‌ ಮತ್ತು ರಿಪೇರಿ ಕೆಲಸ ಮಾಡುವ ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಅವರು ತಿಳಿಸಿದ ಖಾಲಿ ಹುದ್ದೆಗಳ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಅರ್ಜಿದಾರರು ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಕೇವಲ 600 ಲೋಡರ್ ಹುದ್ದೆಗಳಿಗೆ ಸ್ಪರ್ಧಿಸಲು 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರಿಂದ ನೇಮಕಾತಿ ಕಚೇರಿಯ ಹೊರಗೆ ಅನಿಯಂತ್ರಿತ ಪರಿಸ್ಥಿತಿ ಉಂಟಾಗಿತ್ತು. ಈ ಜನಸಮೂಹವನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ಸಂಘಟಕರು ಅರ್ಜಿದಾರರಿಗೆ ತಮ್ಮ ಸ್ವವಿವರಗಳನ್ನು ಸಲ್ಲಿಸಿ ಇಲ್ಲಿಂದ ಕೂಡಲೇ ಹೊರಗೆ ಹೋಗುವಂತೆ ವಿನಂತಿಸಿಕೊಳ್ಳಬೇಕಾಯಿತು.

ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ರಾಷ್ಟ್ರದ ನಿರುದ್ಯೋಗ ಸಮಸ್ಯೆಗಳ ಸ್ಪಷ್ಟ ಚಿತ್ರಣವೆಂದು ಅನೇಕರು ಟೀಕಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ದೇಶದಲ್ಲಿ ಉದ್ಯೋಗ ಮತ್ತು ಆರ್ಥಿಕ ನೀತಿಗಳನ್ನು ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಟೀಕಿಸಲು ಈ ಘಟನೆಯನ್ನು ಬಳಸಿಕೊಂಡಿವೆ ಎನ್ನಲಾಗಿದೆ.

ಏರ್ ಇಂಡಿಯಾದ ಅಧಿಕೃತ ಅಧಿಸೂಚನೆಯಲ್ಲಿ ಜುಲೈ 12ರಿಂದ ಜುಲೈ 16ರವರೆಗೆ ವಿವಿಧ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನಗಳನ್ನು ಘೋಷಿಸಿತ್ತು. ಹಾಗೇ ಅವರು ಮತ್ತೊಂದು ಅಧಿಸೂಚನೆ ಹೊರಡಿಸಿದ್ದು, ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 14ರವರೆಗೆ ವಿಸ್ತರಿಸಿತ್ತು. ನೇಮಕಾತಿಯಲ್ಲಿ ಹಿರಿಯ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸ್ಥಾನ ಮತ್ತು ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸ್ಥಾನಗಳನ್ನು ಒಳಗೊಂಡಿದ್ದು, ಕ್ರಮವಾಗಿ 343 ಮತ್ತು 706 ಹುದ್ದೆಗಳು ಖಾಲಿ ಇವೆ. ಒಬಿಸಿ, ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳಿಗೆ ನಿರ್ದಿಷ್ಟ ಮೀಸಲಾತಿಗಳೊಂದಿಗೆ ಹಿರಿಯ ಹುದ್ದೆಗಳಿಗೆ ಗರಿಷ್ಠ 33 ಮತ್ತು ಸಾಮಾನ್ಯ ಹುದ್ದೆಗಳಿಗೆ 28 ವರ್ಷ ವಯೋಮಿತಿ ಇರುತ್ತದೆ ಎಂಬುದಾಗಿ ತಿಳಿಸಿತ್ತು.

ಇದನ್ನೂ ಓದಿ: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

ಈ ಘಟನೆಯೊಂದೇ ಅಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಇತ್ತೀಚೆಗೆ, ಗುಜರಾತ್‍ನ ಭರೂಚ್‍ನಲ್ಲಿ ನಡೆದ ಘಟನೆಯು ಸಾಕ್ಷಿಯಾಗಿದೆ. ಇಲ್ಲಿ ಕೇವಲ 10 ಹೋಟೆಲ್ ಉದ್ಯೋಗ ಸ್ಥಾನಗಳಿಗೆ 1,800 ಅರ್ಜಿದಾರರು ಆಗಮಿಸುತ್ತಿರುವುದನ್ನು ವೀಡಿಯೊಯೊಂದರಲ್ಲಿ ತೋರಿಸಲಾಗಿದೆ. ಒಟ್ಟಾರೆ ಈ ಘಟನೆಗಳನ್ನು ಕಮಡಾಗ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಜನರನ್ನು ತುಂಬಾ ಕಾಡುತ್ತಿದೆ ಎನ್ನಬಹುದು.

Exit mobile version