Site icon Vistara News

Viral Video: ರಜೆಯಲ್ಲೂ ಮಗುವಿನ ಹೋಮ್‌ ವರ್ಕ್ ನೋಡಿ ಸಿಟ್ಟಾದ ತಾಯಿ ಮಾಡಿದ್ದೇನು? ವಿಡಿಯೊ ನೋಡಿ!

Viral Video

ಹಿಂದೆಲ್ಲ ಮಕ್ಕಳ ಶಾಲಾ ಹೋಮ್‌ ವರ್ಕ್ ಬಗ್ಗೆ ಪೋಷಕರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಶಾಲೆಯ ಹೋಮ್‌ ವರ್ಕ್‍ಗೆ ಮಕ್ಕಳಿಗಿಂತ ತಾಯಂದಿರೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಮಕ್ಕಳು ಶಾಲೆಯ ಹೋಮ್‌ ವರ್ಕ್ ಮಾಡಲು ಹೆಚ್ಚಾಗಿ ತಾಯಿಯ ಮೇಲೆ ಅವಲಂಬಿತರಾಗುತ್ತಾರೆ. ಹಾಗಾಗಿ ಮನೆಗೆಲಸದ ಜೊತೆಗೆ ಮಕ್ಕಳ ಶಾಲೆಯ ಹೋಮ್ ವರ್ಕ್ ಮಾಡಿಸುವುದರಲ್ಲಿ ತಾಯಂದಿರಿಗೆ ಸಾಕು ಸಾಕಾಗಿ ಹೋಗುತ್ತದೆ. ಹಾಗಾಗಿ ಹಲವು ತಾಯಂದಿರು ಮಕ್ಕಳಿಗೆ ಯಾವಾಗ ಬೇಸಿಗೆ ರಜೆ ಸಿಗುತ್ತದೆ, ತಮಗೆ ಯಾವಾಗ ಈ ಕೆಲಸದಿಂದ ಫ್ರೀಡಂ ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ಈ ರಜಾದಿನಗಳಲ್ಲಿಯೂ ಮಕ್ಕಳಿಗೆ ಶಾಲೆಯಲ್ಲಿ ಹೋಮ್‌ ವರ್ಕ್ ನೀಡಿದರೆ ತಾಯಂದಿರು ಕೋಪಗೊಳ್ಳುವುದು ಸಹಜ. ಅಂತಹದೊಂದು ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಮಕ್ಕಳಿಗೆ ರಜಾ ದಿನಗಳಲ್ಲಿ ಶಿಕ್ಷಕರು ಹೋಮ್ ವರ್ಕ್ ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ತಾಯಿ ಮಗುವಿಗೆ ಶಾಲೆಯಲ್ಲಿ ಶಿಕ್ಷಕರು ನೀಡಿದ ಹೋಮ್ ವರ್ಕ್ ನೋಡಿ ಸಿಟ್ಟಾಗಿದ್ದಾರೆ. ಆಕೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೊಂದನ್ನು ಮಾಡಿ ಶಿಕ್ಷಕರು ಹಾಗೂ ಶಿಕ್ಷಣ ವ್ಯವಸ್ಥೆಯ ವಿರುದ್ಧ ತನ್ನ ಹತಾಶೆಯ ಹೊರಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೊದಲ್ಲಿ ಮಹಿಳೆಯೊಬ್ಬರು ಶಿಕ್ಷಕರು ಮಕ್ಕಳಿಗೆ ಮಾಡಲು ಕಷ್ಟಕರವಾದ ಹೋಮ್ ವರ್ಕ್ ಅನ್ನು ನೀಡುತ್ತಾರೆ. ಅದಕ್ಕೆ ನಿಮ್ಮ ಪೋಷಕರ ಸಹಾಯ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಅದರ ಬದಲು ಶಿಕ್ಷಕರು ಮಕ್ಕಳಿಗೆ ಅವರಿಗೆ ಮಾಡಲು ಸಾಧ್ಯವಾಗುವಂತಹ ಹೋಂವರ್ಕ್ ಅನ್ನು ನೀಡಿ. ಇದರಿಂದ ಅವರು ಪೋಷಕರ ಮೇಲೆ ಅವಲಂಬಿತವಾಗದೆ ಅವರೇ ಅದನ್ನು ಪೂರ್ಣಗೊಳಿಸುತ್ತಾರೆ. ಇದರಿಂದ ಪೋಷಕರಿಗೆ ಹೊರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

Viral Video

ಇದನ್ನೂ ಓದಿ: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

ಈ ವಿಡಿಯೊವನ್ನು ಜೂನ್ 30ರಂದು ಹಂಚಿಕೊಳ್ಳಲಾಗಿದ್ದು, ಇದಕ್ಕೆ “ಶಿಕ್ಷಣ ವ್ಯವಸ್ಥೆಯು ಪೋಷಕರನ್ನು ಶೋಷಿಸುತ್ತಿದೆ” ಎಂಬರ್ಥದ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೊಗೆ 10 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ತಾಯಿಯ ಈ ಮನವಿಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಇದರಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕೆಲವರು ಮಾತನಾಡಿದರೆ, ಕೆಲವು ಪೋಷಕರು ತಮ್ಮ ಮಕ್ಕಳಿಗೆ ರಜಾ ದಿನಗಳಲ್ಲಿ ನೀಡಿದ ಹೋಂವರ್ಕ್ ಗಳ ಬಗ್ಗೆ ವಿವರಣೆ ನೀಡಿದ್ದಾರೆ. ಹಾಗೂ ಇನ್ನು ಕೆಲವರು ಈ ಹೋಮ್ ವರ್ಕ್‌ನಿಂದ ಮಕ್ಕಳು ತಮ್ಮ ಕಲಿಕೆಯ ಅಭ್ಯಾಸದಲ್ಲೇ ತೊಡಗಿರುತ್ತಾರೆ. ಇದರಿಂದ ಅವರು ತಮ್ಮ ಪೋಷಕರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version