ಇತ್ತೀಚಿನ ದಿನಗಳಲ್ಲಿ ಗೂಳಿಗಳು, ಹಸುಗಳು ಮುಂತಾದ ಪ್ರಾಣಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುವಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಭಾರತದಲ್ಲಿ ಎಮ್ಮೆ ಮತ್ತು ಹಸುವಿನ ದಾಳಿಗೆ ಮಹಿಳೆಯರು ಗಾಯಗೊಂಡಿದ್ದರು. ಇದೀಗ ಪಾಕಿಸ್ತಾನದಲ್ಲಿ ಟಿವಿ ವರದಿಗಾರ್ತಿಯೊಬ್ಬಳು ಗೂಳಿ ದಾಳಿಗೆ ಒಳಗಾಗಿದ್ದಾಳೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವಿಡಿಯೊದಲ್ಲಿ ಪಾಕಿಸ್ತಾನದ ಟಿವಿ ವರದಿಗಾರ್ತಿ ಲೈವ್ ಪ್ರಸಾರದ ವೇಳೆ ಗೂಳಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ಅಲ್ಲಿದ್ದ ಗೂಳಿ ಮಾಲೀಕರ ಬಳಿ ಅವುಗಳ ದರಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ಆಗ ಹಿಂದಿನಿಂದ ಬಂದ ಗೂಳಿಯೊಂದು ಆಕೆಯನ್ನು ಗುದ್ದಿದೆ. ಇದರಿಂದ ಆಕೆ ಕಿರುಚುತ್ತಾ ಓಡಿದ್ದಾಳೆ. ಅವಳ ಕೈಯಲ್ಲಿದ್ದ ಮೈಕ್ ಗೂಳಿಯ ಕೊಂಬಿನಲ್ಲಿ ಸಿಲುಕಿಕೊಂಡಿದ್ದು, ನಂತರ ಅದನ್ನು ಒಬ್ಬ ವ್ಯಕ್ತಿಯೊಬ್ಬರು ತೆಗೆದು ಕೊಟ್ಟಿದ್ದಾರೆ.
Bull Hits Reporter during Live tv Coverage in Pakistan
— Ghar Ke Kalesh (@gharkekalesh) July 2, 2024
pic.twitter.com/eP23iFXykv
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಇದಕ್ಕೆ 2,89,000ಕ್ಕೂ ಹೆಚ್ಚು ವೀವ್ಸ್ ಬಂದಿದೆ. ಈ ವೀಡಿಯೊ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅನಿರೀಕ್ಷಿತ ಘಟನೆಯಾಗಿದ್ದು, ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ವರದಿಗಾರ್ತಿ ಸಂಯಮ ಕಾಪಾಡಿಕೊಂಡಿದ್ದಕ್ಕೆ ನೆಟ್ಟಿಜನ್ ಒಬ್ಬರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇನ್ನೊಬ್ಬರು ಇಷ್ಟಾದರೂ ಕ್ಯಾಮೆರಾ ಮ್ಯಾನ್ ಸಹಾಯಕ್ಕೆ ಬರಲಿಲ್ಲವೆಂದು ಆತನ ಬಗ್ಗೆ ಟೀಕೆ ಮಾಡಿದ್ದಾರೆ. ಈ ವಿಡಿಯೊದಲ್ಲಿ ಮಾಹಿತಿ ಸಿಗುತ್ತದೆ ಎಂದು ನೋಡಿದರೆ ಅಲ್ಲಿ ದೊಡ್ಡ ತಿರುವು ಎದುರಾಗಿದೆ ಎಂದು ಇನ್ನೊಬ್ಬ ನೆಟ್ಟಿಜನ್ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ
ಗೂಳಿಗಳ ಆಕ್ರಮಣ ಪ್ರಕರಣ ಇತ್ತೀಚೆಗೆ ಕೆಲವು ಕಡೆ ಕಂಡುಬರುತ್ತಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಗೂಳಿಯೊಂದು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಾಲಕ್ಷ್ಮಿ ಲೇಔಟ್ ಈಜುಕೊಳ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಪ್ರದರ್ಶನಕ್ಕಾಗಿ ಅಲಂಕರಿಸಿದ್ದ ಗೂಳಿ ಬೈಕ್ ಸವಾರನ ಮೇಲೆ ದಾಳಿ ಮಾಡಿದೆ. ಗೂಳಿಯ ಹೊಡೆತದಿಂದ ವ್ಯಕ್ತಿ ಟ್ರಕ್‌ನ ಚಕ್ರಗಳ ಅಡಿಯಲ್ಲಿ ಬಿದ್ದಿದ್ದರು. ಅದೃಷ್ಟವಶಾತ್, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರು. ಹಾಗೇ ಈ ಹಿಂದೆ ಜೂನ್ 16ರಂದು ಗುಜರಾತ್ ನ ಮೊದಸಾದಲ್ಲಿ ಬೈಕ್ ನಲ್ಲಿ ಪತಿಯ ಜೊತೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬೀಡಾಡಿ ಹಸುವೊಂದು ಬೆನ್ನಟ್ಟಿ ಗುದ್ದಿತ್ತು. ಆಕೆಗೆ ಗಂಭೀರ ಗಾಯಗಳಾಗಿದ್ದವು.