ಆಗ್ರಾ: ಕೈಗೆ ಬೇಡಿ ಹಾಕಿದ ಎಂದ ಮೇಲೆ ಅವರು ಕೈದಿಯಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಕೈದಿ ಜೈಲಿನಲ್ಲಿರಬೇಕು. ಅವರನ್ನು ಮನಬಂದಂತೆ ಹೊರಗಡೆ ಬಿಡುವ ಹಾಗಿಲ್ಲ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳನ್ನು ಕರೆದುಕೊಂಡು ಬರುವಂತಿಲ್ಲ. ಆದರೆ ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‍ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ತಾಜ್ ಮಹಲ್ ಬಳಿ ರಕ್ಷಣೆಗೆ ನಿಯೋಜಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಆರೀಬ್ ಅಹ್ಮದ್ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊ ಹಳೆಯದು ಎಂದು ತಿಳಿಸಿದ್ದಾರೆ. ಅಲ್ಲದೇ ಕೈದಿಯ ಜೊತೆಗಿದ್ದ ಪೊಲೀಸ್ ಅಧಿಕಾರಿಯನ್ನು ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಹಿಮಾಚಲ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಮತ್ತು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ತಾಜ್ ಮಹಲ್‍ನಿಂದ 500 ಮೀಟರ್ ದೂರದಲ್ಲಿ ಬಿಳಿ ಪೊಲೀಸ್ ಜೀಪ್ ನಿಲ್ಲಿಸಲಾಗಿತ್ತು ಮತ್ತು ಅಲ್ಲಿ ರಕ್ಷಣೆಗೆ ನಿಯೋಜಿಸಲಾದ ಸ್ಥಳೀಯ ಪೊಲೀಸರು ಹಿಮಾಚಲ ಪ್ರದೇಶದ ಅಧಿಕಾರಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಡುವಂತೆ ಕೇಳಿಕೊಂಡರು. ಇದರ ನಂತರ, ಒಬ್ಬ ಅಧಿಕಾರಿ ಕೈದಿಯೊಂದಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಎಎಸ್ಐ ಸಿಬ್ಬಂದಿ ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್ ವಾಚ್!
ಸ್ಥಳೀಯರು ಈ ಘಟನೆಯನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದು, ಇದರಲ್ಲಿ ಕೈಕೋಳ ಧರಿಸಿದ ಕೈದಿ ಮತ್ತು ಅವರ ಬೆಂಗಾವಲಿಗೆ ಇದ್ದ ಅಧಿಕಾರಿಯನ್ನು ತೋರಿಸಿದ್ದಾರೆ. ಅಲ್ಲದೇ ವಿಡಿಯೊ ತೆಗೆಯದಂತೆ ಅಧಿಕಾರಿಗಳು ಆಕ್ಷೇಪ ಮಾಡುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.