Site icon Vistara News

Viral Video: ಯುವಕನಿಗೆ ಜಾಡಿಸಿ ಒದ್ದ ಜಿಮ್‌ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ

Viral Video


ನವದೆಹಲಿ: ದೆಹಲಿಯಲ್ಲಿ 28 ವರ್ಷದ ಜಿಮ್ ಮಾಲೀಕನನ್ನು ಚಾಕುವಿನಿಂದ 50ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಲಾಗಿದ್ದು, ಅವರ ಭೀಕರ ಕೊಲೆಯ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅವರು ಕೊಲೆಯಾದ ಕೆಲವು ದಿನಗಳ ನಂತರ, ಪೊಲೀಸ್ ತನಿಖೆಯ ವೇಳೆ ಅವರ ಕೊಲೆಯ ಸಿಸಿಟಿವಿ ದೃಶ್ಯ ಬಹಿರಂಗವಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಈಶಾನ್ಯ ದೆಹಲಿಯ ಭಜನ್ಪುರ ಪ್ರದೇಶದ ಗಾಮ್ರಿ ಎಕ್ಸ್ಟೆನ್ಷನಲ್ಲಿರುವ ಸುಮಿತ್ ಚೌಧರಿ ಅಲಿಯಾಸ್ ಪ್ರೇಮ್ ಅವರ ಮನೆಯ ಹೊರಗೆ ಅವರ ಮೇಲೆ ದಾಳಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅವರು ತಮ್ಮ ಮನೆಯ ಹೊರಗೆ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಿಂತಿದ್ದರು. ಆಗ ಜಿಮ್‌ ಮಾಲೀಕ ಬೆಂಚ್‌ ಮೇಲೆ ಕೂತಿದ್ದ ವ್ಯಕ್ತಿಗೆ ಜಾಡಿಸಿ ಒದೆಯುತ್ತಾರೆ. ಆಗ ಇನ್ನೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಜಿಮ್‌ ಮಾಲೀಕನ ಹೊಟ್ಟೆಗೆ ನಿರಂತರವಾಗಿ ಚಾಕುವಿನಿಂದ ಕ್ರೂರವಾಗಿ ಇರಿದಿದ್ದಾನೆ. ಹಲವಾರು ಬಾರಿ ಇರಿತಕ್ಕೊಳಗಾದ ನಂತರ ಜಿಮ್‌ ಮಾಲೀಕ ಚರಂಡಿಗೆ ಬಿದ್ದಿದ್ದಾರೆ. ಕ್ರೂರ ಹತ್ಯೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಒದೆಸಿಕೊಂಡ ವ್ಯಕ್ತಿ ಸುಮ್ಮನೆ ಅಲ್ಲಿ ನೋಡುತ್ತ ನಿಂತಿದ್ದ. ಈ ಮಧ್ಯೆ ನಾಯಿಯೊಂದು ಹಂತಕನ ಬಳಿ ಬಂದು ಬೊಗಳುತ್ತ ಜಿಮ್‌ ಮಾಲೀಕನ ರಕ್ಷಣೆಗೆ ಬಂದಿದ್ದೂ ಗಮನ ಸೆಳೆದಿದೆ.

ಪೊಲೀಸರ ಪ್ರಕಾರ, ಆರೋಪಿ ಸುಮಿತ್ ಅವರ ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ಆರೋಪಿ ಅನೇಕ ಬಾರಿ ಇರಿದಿದ್ದಾನೆ. ಅವರ ಮುಖದ ಮೇಲೆ 21ಕ್ಕೂ ಹೆಚ್ಚು ಇರಿತದ ಗಾಯಗಳಿವೆ. ಒಟ್ಟು 50ಕ್ಕೂ ಹೆಚ್ಚು ಬಾರಿ ಇರಿಯಲಾಗಿದೆ ಎಂದು ತಿಳಿಸಿದರು. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ಕೊಲೆ ಯತ್ನ ಪ್ರಕರಣದಲ್ಲಿ ಸುಮಿತ್ ದೋಷಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ. ಸಿಸಿಟಿವಿ ಪುರಾವೆಗಳ ಆಧಾರದ ಮೇಲೆ ಘಟನೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೊವನ್ನು ಹಂಚಿಕೊಂಡ ಎಎಪಿ ಶಾಸಕ ಸೌರಭ್ ಭಾರದ್ವಾಜ್, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ನಗರದ ಜನರು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ” ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಮತ್ತು ದೆಹಲಿ ಪೊಲೀಸರು ಲೆಫ್ಟಿನೆಂಟ್ ಗವರ್ನರ್ ಸಾಹೇಬ್ ಮತ್ತು ಕೇಂದ್ರ ಸರ್ಕಾರದ ಕೈಯಲ್ಲಿದ್ದಾರೆ.

ಇದನ್ನೂ ಓದಿ: ಮಕ್ಕಳ ಕೈಯಲ್ಲೂ ಚಾಕು-ಚೂರಿ! ಎಂಥ ಕಾಲ ಬಂತು! ಈ ವಿಡಿಯೊ ನೋಡಿ

ದೆಹಲಿಯ ಚುನಾಯಿತ ಸರ್ಕಾರದ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಸಾಹೇಬ್ ಪ್ರತಿ ವಾರ ದೀರ್ಘ ಧರ್ಮೋಪದೇಶಗಳನ್ನು ನೀಡುತ್ತಾರೆ. ಆದರೆ ಅವರ ಸ್ವಂತ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ದೆಹಲಿಯಲ್ಲಿ ಅಪರಾಧಿಗಳು ಮತ್ತು ದುಷ್ಕರ್ಮಿಗಳ ಭಂಡ ಸ್ಥೈರ್ಯ ಹೆಚ್ಚಾಗಿದೆ. ಅವರಿಗೆ ಕಾನೂನು ಮತ್ತು ಪೊಲೀಸರ ಬಗ್ಗೆ ಭಯವಿಲ್ಲದಂತಾಗಿದೆ. ಹಾಗಾಗಿ ದೆಹಲಿಯ ಜನರು ಭಯಭೀತರಾಗಿ ಬದುಕುತ್ತಿದ್ದಾರೆ. ಎಲ್ಲರ ಸುರಕ್ಷತೆ ದೇವರ ದಯೆಯಲ್ಲಿದೆ’ ಎಂದು ಭಾರದ್ವಾಜ್ ಬರೆದಿದ್ದಾರೆ.

Exit mobile version