Site icon Vistara News

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Viral Video

ಮುಂಬೈ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಲು ಮನೆ, ಅಂಗಡಿಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಕೆಲವು ಕಳ್ಳರು ಹೆದರುತ್ತಾರೆ. ಯಾಕೆಂದರೆ ಇದರಿಂದ ದೇವರ ಶಾಪಕ್ಕೆ ಗುರಿಯಾಗಿ ಆಪತ್ತಾಗಬಹುದೆಂಬ ಭಯವಿರುತ್ತದೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಲು ದೇವಸ್ಥಾನಕ್ಕೆ ನುಗ್ಗಿದಲ್ಲದೇ ಸೀದಾ ದೇವರ ಬೆಳ್ಳಿ ಕಿರೀಟಕ್ಕೆ ಕೈ ಹಾಕಿದ್ದಾನೆ. ಆತನ ಕಳ್ಳತನದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮುಂಬೈನ ಬೋರಿವಲಿಯ ದತ್ತಪ್ಡಾ ಪ್ರದೇಶದ ವಿಠ್ಠಲ ದೇವಸ್ಥಾನದಲ್ಲಿ ಈ ಕಳ್ಳತನದ ಘಟನೆ ನಡೆದಿದ್ದು, ದೇವಸ್ಥಾನದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಭಕ್ತನಾಗಿ ದೇವಾಲಯಕ್ಕೆ ಪ್ರವೇಶಿಸಿ ದೇವರ ತಲೆಯಲ್ಲಿರುವ ಬೆಳ್ಳಿಯ ಕಿರೀಟಕ್ಕೆ ಕನ್ನ ಹಾಕಿದ್ದಾನೆ. ಕದ್ದು ಓಡಿಹೋಗುವ ಮೊದಲು ಅದನ್ನು ಚೀಲದಲ್ಲಿ ಇರಿಸಿ, ದೇವರ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸುತ್ತಾ ಕ್ಷಮೆಯಾಚಿಸುವುದು ಕಂಡು ಬಂದಿದೆ. ವೈರಲ್ ಆಗಿರುವ ಸಿಸಿಟಿವಿ ವಿಡಿಯೊದಲ್ಲಿ, ಜುಲೈ 17ರ ಬುಧವಾರ ಬೆಳಗ್ಗೆ 10:07ರ ಸುಮಾರಿಗೆ ವ್ಯಕ್ತಿ ದೇವಾಲಯವನ್ನು ಪ್ರವೇಶಿಸುವುದನ್ನು ಕಾಣಬಹುದು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಹಲವು ಕಡೆ ದೇವಸ್ಥಾನದಲ್ಲಿ ಕಳ್ಳರು ದರೋಡೆ ಮಾಡಿದ್ದಾರೆ. ನವಿ ಮುಂಬೈನ ಐರೋಲಿ ಪ್ರದೇಶದ ದತ್ ಮಂದಿರದಲ್ಲಿ ಫೆಬ್ರವರಿ 21 ಮತ್ತು ಫೆಬ್ರವರಿ 22 ರ ಮಧ್ಯರಾತ್ರಿ ಕಳ್ಳರು ದೇವಾಲಯಕ್ಕೆ ನುಗ್ಗಿ ಆವರಣದಲ್ಲಿರುವ ದೇಣಿಗೆ ಪೆಟ್ಟಿಗೆಯಿಂದ 20,000 ರೂ.ಗಳನ್ನು ಕದ್ದ ನಂತರ ನವೀ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ಅಲ್ಲದೇ ಜೂನ್ 20ರಂದು ಗರ್ಲದಿನ್ನೆ ಮಂಡಲದ ಕೋಟಂಕ ಗ್ರಾಮದ ಬಳಿಯ ಗುಂಟಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ದೇವಾಲಯದ ಬೀಗಗಳನ್ನು ಮುರಿದು 16 ಕೆಜಿ ಬೆಳ್ಳಿ ಆಭರಣಗಳು, 8 ತೊಲ ಚಿನ್ನದ ಆಭರಣಗಳು ಮತ್ತು 13 ಲಕ್ಷ ರೂ.ಮೌಲ್ಯದ ಎರಡು ಹುಂಡಿಗಳನ್ನು ಮುರಿದು 15,000 ರೂ. ನಗದು ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಂತರರಾಜ್ಯ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದರು.

Exit mobile version