Site icon Vistara News

Viral Video: ಸಿಬ್ಬಂದಿಗೆ ಗನ್ ತೋರಿಸಿ ಆಭರಣ ಅಂಗಡಿ ದರೋಡೆ ಮಾಡಿದ ಹೆಲ್ಮೆಟ್‌ಧಾರಿಗಳು; ವಿಡಿಯೊ ನೋಡಿ

Viral Video


ಚಿನ್ನದ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಲೂಟಿ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಮನೆಗಳಲ್ಲಿ, ಆಭರಣ ಅಂಗಡಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಚಿನ್ನವನ್ನು ಲೂಟಿ ಮಾಡುತ್ತಿದ್ದಾರೆ. ಅದಕ್ಕಾಗಿ ಜನರ ಪ್ರಾಣವನ್ನು ಕೂಡ ತೆಗೆಯುತ್ತಿದ್ದಾರೆ. ಇದೀಗ ಅಂತಹದೊಂದು ದರೋಡೆ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನವೀ ಮುಂಬೈನಲ್ಲಿ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ಆಭರಣ ಮಳಿಗೆಯನ್ನು ಲೂಟಿ ಮಾಡಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಜುಲೈ 28ರ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆದರೆ ಅದರ ವಿಡಿಯೊ ಜುಲೈ 29 ರಂದು ಆನ್‍ಲೈನ್‍ನಲ್ಲಿ ಕಾಣಿಸಿಕೊಂಡಿದೆ. 2 ನಿಮಿಷ 20 ಸೆಕೆಂಡುಗಳ ಈ ವಿಡಿಯೊ ಕ್ಲಿಪ್‍ನಲ್ಲಿ ಹೆಲ್ಮೆಟ್ ಧರಿಸಿದ ಮೂವರು ವ್ಯಕ್ತಿಗಳು ಆಭರಣದ ಅಂಗಡಿಗೆ ಪ್ರವೇಶಿಸಿ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ, ನಂತರ ದರೋಡೆಕೋರರು ಆಭರಣಗಳನ್ನು ದೋಚಿದ್ದಲ್ಲದೆ, ಆಭರಣ ಅಂಗಡಿಯ ಸಿಬ್ಬಂದಿಯೊಬ್ಬರು ಅಲಾರಂ ಆನ್ ಮಾಡಲು ಪ್ರಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಗಡಿಯನ್ನು ಲೂಟಿ ಮಾಡಿದ ನಂತರ, ಸಿಬ್ಬಂದಿ ಅಲಾರಂ ಆನ್ ಮಾಡುವ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದ್ದಂತೆ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಆರೋಪಿಗಳು ಆಭರಣ ಅಂಗಡಿಯಿಂದ 11 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಲೂಟಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ನವೀ ಮುಂಬೈ ಪೊಲೀಸರ ತಂಡವು ಸ್ಥಳಕ್ಕೆ ತಲುಪಿ ತನಿಖೆಯನ್ನು ಪ್ರಾರಂಭಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ದರೋಡೆಕೋರರು ರಾತ್ರಿ 10.30 ರ ಸುಮಾರಿಗೆ ಬಿಎಂ ಜ್ಯುವೆಲ್ಲರ್ ಗೆ ನುಗ್ಗಿದ್ದಾರೆ. ಮತ್ತು ಅಲ್ಲಿ ಅನೇಕ ಬಾರಿ ಗುಂಡು ಹಾರಿಸಿದ್ದಾರೆ. ಕೆಲವು ಕ್ಷಣಗಳ ನಂತರ, ಅವರು ಬೈಕ್‍ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ, ಮತ್ತು ಸ್ಥಳೀಯರು ಅವರನ್ನು ಬೆನ್ನಟ್ಟಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

ಘಟನೆಯ ಬಗ್ಗೆ ಮಾತನಾಡಿದ ನವೀ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು, “ಕಪ್ಪು ಬಟ್ಟೆ ಮತ್ತು ರಿವಾಲ್ವರ್‌ಗಳನ್ನು ಹೊಂದಿದ್ದ ಮೂವರು ಅಂಗಡಿಗೆ ಪ್ರವೇಶಿಸಿ, ಸಿಬ್ಬಂದಿಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿ 11.80 ಲಕ್ಷ ರೂ.ಮೌಲ್ಯದ ಆಭರಣಗಳನ್ನು ಲೂಟಿ ಮಾಡಿದ್ದಾರೆ. ಮೂರು ನಿಮಿಷಗಳಲ್ಲಿ, ಅವರು ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಿದರು, ಆದರೆ ಯಾರೂ ಗಾಯಗೊಂಡಿಲ್ಲ. ಡಕಾಯಿತಿ ಮತ್ತು ಇತರ ಅಪರಾಧಗಳಿಗಾಗಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Exit mobile version