Site icon Vistara News

Viral Video: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ

Viral Video


ಮುಂಬೈ: ಮುಂಬೈನ ಅಟಲ್ ಸೇತು ಎಂದೂ ಕರೆಯಲ್ಪಡುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‍ನಿಂದ ಜಿಗಿಯಲು ಪ್ರಯತ್ನಿಸಿದ ಮಹಿಳೆಯನ್ನು ಕ್ಯಾಬ್ ಚಾಲಕ ಮತ್ತು ಪೊಲೀಸ್ ಸಿಬ್ಬಂದಿ ಶುಕ್ರವಾರ ಸಂಜೆ ರಕ್ಷಿಸಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕ ಮತ್ತು ಪೊಲೀಸರು ಮಹಿಳೆಯನ್ನು ಸುರಕ್ಷಿತವಾಗಿ ಎಳೆದೊಯ್ಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video)ಆಗಿದೆ.

ಮಹಿಳೆಯನ್ನು 56 ವರ್ಷದ ರೀಮಾ ಮುಖೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಮುಂಬೈನ ಈಶಾನ್ಯ ಉಪನಗರವಾದ ಮುಲುಂಡ್ ನಿವಾಸಿ ಎಂಬುದಾಗಿ ತಿಳಿದುಬಂದಿದೆ. ವಿಡಿಯೊದಲ್ಲಿ, ಆಕೆ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿದ್ದಳು. ನಂತರ ಅವಳು ನದಿ ಹಾರಲು ಪ್ರಯತ್ನಿಸುತ್ತಾಳೆ. ಆಗ ಆಕೆಯ ಕಾರಿನ ಡ್ರೈವರ್ ಸಮಯಕ್ಕೆ ಸರಿಯಾಗಿ ಅವಳ ಕೈ ಹಿಡಿದುಕೊಂಡಿದ್ದಾನೆ. ನಂತರ ಗಸ್ತು ವಾಹನವು ಸ್ಥಳಕ್ಕೆ ಸರಿಯಾಗಿ ಬಂದು ಡ್ರೈವರ್‌ಗೆ ಅವಳನ್ನು ಹಿಡಿದು ಮೇಲೆಳೆಯಲು ಸಹಾಯ ಮಾಡಿದ್ದಾರೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಡ್ರೈವರ್ ಹಾಗೂ ಪೊಲೀಸರು ಸಾಹಸ ಮಾಡಿ ಆಕೆಯನ್ನು ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ.

“ಎಂಟಿಎಚ್ಎಲ್ ಅಟಲ್ ಸೇತುವಿನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ರಕ್ಷಿಸಲು ಕರ್ತವ್ಯದಲ್ಲಿದ್ದ ಅಧಿಕಾರಿಗಳಾದ ಲಲಿತ್ ಶಿರ್ಸಾತ್, ಕಿರಣ್ ಮಹ್ತ್ರೆ, ಯಶ್ ಸೋನಾವಾನೆ ಮತ್ತು ಮಯೂರ್ ಪಾಟೀಲ್ ಅವರು ತಕ್ಷಣ ಪ್ರತಿಕ್ರಿಯಿಸಿ ಹಳಿಯ ಮೇಲೆ ಹಾರಿ ಆಕೆಯನ್ನು ರಕ್ಷಿಸಿದ್ದಾರೆ” ಎಂದು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಜೀವನವು ನಮಗೆ ಸಿಕ್ಕ ಉಡುಗೊರೆ ಅದನ್ನು ಗೌರವಿಸಿ ಮತ್ತು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಅದನ್ನು ಕಳೆದುಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಪ್ರೀತಿಪಾತ್ರರಿಂದ ದೂರವಾಗಬೇಡಿ ಎಂದು ಮುಂಬೈ ಪೊಲೀಸ್ ಆಯುಕ್ತರು ಪೋಸ್ಟ್ ಮಾಡಿ ನಾಗರಿಕರಲ್ಲಿ ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ: ಅಪಹರಣಕಾರನಿಂದ ಪುಟ್ಟ ಮಗುವನ್ನು ರಕ್ಷಿಸಿದ ಸಾಕು ನಾಯಿ! ನಾಯಿಯ ಸಾಹಸದ ವಿಡಿಯೊ ನೋಡಿ

ಕಳೆದ ತಿಂಗಳು 38 ವರ್ಷದ ವ್ಯಕ್ತಿಯೊಬ್ಬರು ಸೇತುವೆಯಿಂದ ಜಿಗಿದು ಸಾವನ್ನಪ್ಪಿದ್ದರು. ಡೊಂಬಿವ್ಲಿ ನಿವಾಸಿಯಾಗಿದ್ದ ಎಂಜಿನಿಯರ್ ಕೆ.ಶ್ರೀನಿವಾಸ್ ಅವರು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‍ನ ನವಾ ಶೇವಾ ಎಂಡ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಕಾರನ್ನು ಪಾರ್ಕಿಂಗ್ ಮಾಡುತ್ತಿರುವುದನ್ನು ಸೇತುವೆಯ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ ಎನ್ನಲಾಗಿದೆ.

Exit mobile version