ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಈಗ ವಿಶ್ವವನ್ನೇ ಕಾಡುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇದೀಗ ಒಂದು ಆಶಾಕಿರಣ ಗೋಚರಿಸಿದೆ. ಅದೂ ನಮ್ಮ ಬೆಂಗಳೂರಿನಲ್ಲಿ. ನದಿ ಅಥವಾ ನೆಲದೊಳಗಿನ ಜಲ ಸಂಪನ್ಮೂಲ ಬಳಸಿಕೊಳ್ಳದೆ ಗಾಳಿಯಿಂದ ಶುದ್ಧ ಕುಡಿಯುವ ನೀರನ್ನು (Water From Air) ಉತ್ಪಾದಿಸುವ ವಿಶೇಷ ಬಾಟಲಿಗಳನ್ನು (Bottles) ಬೆಂಗಳೂರು ಸ್ಟಾರ್ಟ್‌ಅಪ್ (Bengaluru Startup) ಕಂಪನಿಯೊಂದು ಪರಿಚಯಿಸಿದೆ. ಜಾಗತಿಕವಾಗಿ ಕುಡಿಯುವ ನೀರಿನ ಸಮಸ್ಯೆಗೆ ಇದು ಸೂಕ್ತ ಪರಿಹಾರವಾಗುವ ಭರವಸೆ ಮೂಡಿಸಿದೆ.
ಬೆಂಗಳೂರಿನ ಉರವು ಲ್ಯಾಬ್ (Uravu Labs) ಗಾಳಿಯಿಂದ ನೀರನ್ನು ಉತ್ಪಾದಿಸುವ ವಿಶೇಷ ಬಾಟಲಿಗಳನ್ನು ಪರಿಚಯಿಸಿದ್ದು, ಈ ಕುರಿತು ಲ್ಯಾಬ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಸ್ವಪ್ನಿಲ್ ಶ್ರೀವಾಸ್ತವ್ ಸಂದರ್ಶನವೊಂದರಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗಾಳಿಯಿಂದ ನೀರಿನ ಉತ್ಪಾದನೆ ಹೇಗೆ?
ಉರವುನ ಕೋರ್ ತಂತ್ರಜ್ಞಾನವು ಶುಷ್ಕ ವಸ್ತುಗಳಿಂದ ಪ್ರೇರಿತವಾದ ವಿಶಿಷ್ಟ ಪ್ರಕ್ರಿಯೆಯನ್ನು ಬಳಸಿಕೊಂಡು ಗಾಳಿಯಿಂದ ನೀರನ್ನು ಹೊರತೆಗೆಯುತ್ತದೆ.
ಸುತ್ತಲಿನ ಗಾಳಿಯಿಂದ ತೇವಾಂಶವನ್ನು ಹೀರಿಕೊಳ್ಳುವ ವಸ್ತುವನ್ನು ಬಳಸಿ ಅದರಲ್ಲಿ ಸಂಗ್ರಹಿಸಿ ಆವಿಯನ್ನು ಬಿಡುಗಡೆ ಮಾಡಲು ಬಿಸಿ ಮಾಡಲಾಗುತ್ತದೆ. ಈ ಆವಿಯನ್ನು ಘನೀಕರಿಸಿ ನಿಯಂತ್ರಿತ ತಾಪಮಾನದಲ್ಲಿ ತಂಪಾಗಿಸಿ ಶುದ್ಧ ಕುಡಿಯುವ ನೀರನ್ನು ಪಡೆಯಲಾಗುತ್ತದೆ.
ಇದನ್ನೂ ಓದಿ: karnataka Weather : ಬೆಂಗಳೂರು ಸೇರಿ ಹಲವೆಡೆ ಸುಡುತ್ತಿದೆ ಉರಿ ಬಿಸಿಲು; ಮತ್ಯಾವಾಗ ಮಳೆ
ಯಾಕಾಗಿ ಈ ಯೋಜನೆ?
ಜನಸಂಖ್ಯೆಯ ಬೆಳವಣಿಗೆ, ಅಂತರ್ಜಲದ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡಿರುವ ನೀರಿನ ಕೊರತೆಯನ್ನು ನಿವಾರಿಸುವುದು ಈಗ ವಿಶ್ವಾದ್ಯಂತ ಇರುವ ಬಹುದೊಡ್ಡ ಸವಾಲು. ಅದರಲ್ಲೂ ಭಾರತದಲ್ಲಿ ನೀರಿನ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಉರವು ತಂತ್ರಜ್ಞಾನ ಇದನ್ನು ಪ್ರಯೋಗ ಮಾಡಿದೆ.
ಹೇಗಿದೆ ಪ್ರಗತಿ?
ಉರವು ಲ್ಯಾಬ್ಸ್ ನಲ್ಲಿ ತಯಾರಿಸಲಾದ ಈ ಬಾಟಲುಗಳು ಗಾಜಿನದ್ದಾಗಿದೆ. ಇದರಲ್ಲಿರುವ ನವೀನ ರಿವರ್ಸ್ ಲಾಜಿಸ್ಟಿಕ್ಸ್ ಮಾದರಿಯು ಗಾಜಿನ ಬಾಟಲಿಗಳನ್ನು ಸ್ವಚ್ಛಗೊಳಿಸಲು, ಮರುಪೂರಣಗೊಳಿಸಲು ಮತ್ತು ಮರುಬಳಕೆಗಾಗಿ ಉಪಯುಕ್ತವಾಗಿದೆ. ಈ ಮಾದರಿಯ ಬಾಟಲಿಗಳನ್ನು ಕೋಕ್ ಅಥವಾ ಪೆಪ್ಸಿಯಂತಹ ಪಾನೀಯ ಕಂಪನಿಗಳು ಮಾತ್ರ ಬಳಸುತ್ತವೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಲಭ್ಯ
ಉತ್ತಮ ರುಚಿ ಮತ್ತು ಪರಿಸರ ಸ್ನೇಹಿ ಕಾಳಜಿಯನ್ನು ಹೊಂದಿರುವ ಉರವು ಈ ಬಾಟಲುಗಳಲ್ಲಿ ಗ್ರಾಹಕರಿಗೆ ಅವರ ಆಯ್ಕೆಯ ಭರವಸೆ ನೀಡುತ್ತಿದೆ. ಕಳೆದ 8 ತಿಂಗಳಿನಿಂದ ಬೆಂಗಳೂರಿನಲ್ಲಿ ಸುಮಾರು 3.5 ಲಕ್ಷ ಬಾಟಲಿಗಳನ್ನು ಮಾರಾಟ ಮಾಡಲಾಗಿದೆ. ಮಾರುಕಟ್ಟೆಗೆ ಇದನ್ನು ತರುವಾಗ, ವಿತರಣಾ ಜಾಲಗಳೊಂದಿಗೆ ಪಾಲುದಾರಿಕೆ ಮಾಡುವಾಗ ನೀರಿನ ಹೊರತೆಗೆಯುವಿಕೆ ಮತ್ತು ಪ್ಯಾಕೇಜಿಂಗ್‌ನ ಬ್ಯಾಕೆಂಡ್ ಕಾರ್ಯಾಚರಣೆಗಳ ಬಗ್ಗೆಯೂ ಸಂಪೂರ್ಣವಾಗಿ ವಿವರಿಸಲಾಗುತ್ತದೆ ಎಂದು ಹೇಳಿರುವ ಶ್ರೀವಾಸ್ತವ್, ಗ್ರಾಹಕರ ನಂಬಿಕೆಯನ್ನು ಗಳಿಸುವುದು ಮುಖ್ಯ ಎಂದಿದ್ದಾರೆ.
ಔಜಸ್ಯ ಎಂಬ ಲೇಬಲ್‌ನೊಂದಿಗೆ ‘ಫ್ರಮ್ ಏರ್’ ಟ್ರೇಡ್‌ಮಾರ್ಕ್ ಆಗಿ ಬರುವ ಬಾಟಲ್ ಗಳಲ್ಲಿ ಉರವು ಕಂಪನಿ ರಚಿಸಿದ್ದು ಎಂಬ ಉಲ್ಲೇಖವಿದೆ. ಈ ತಂತ್ರವು ಇಂಟೆಲ್‌ನಂತಹ ಪ್ರಸಿದ್ಧ ಬ್ರ್ಯಾಂಡ್‌ಗಳ ವಿಧಾನವನ್ನು ಹೋಲುತ್ತದೆ ಎಂದು ಅವರು ಹೇಳಿದರು.
ಉದ್ಯೋಗ ಭರವಸೆ
ಪ್ರಸ್ತುತ 70 ಮಂದಿ ಇದರಲ್ಲಿ ತೊಡಗಿಕೊಂಡಿದ್ದು, ಮುಂದೆ ಉರವು ಲ್ಯಾಬ್ಸ್, ವಿಸ್ತರಣೆ ಮತ್ತು ನಾವೀನ್ಯತೆಗಾಗಿ ಹೊಸ ಯೋಜನೆಗಳನ್ನು ಹಾಕಲಾಗುತ್ತಿದೆ. ಪ್ರಸ್ತುತ ಅಬುಧಾಬಿಯಲ್ಲಿ ಹೈಡ್ರೋಪೋನಿಕ್ಸ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಉರವು, ಅಲ್ಲಿ ದೊಡ್ಡ ದೊಡ್ಡ ಫಾರ್ಮ್‌ಗಳಿಂದ ನೀರನ್ನು ಹೊರತೆಗೆಯುವ ತಂತ್ರಜ್ಞಾನವನ್ನು ತಮ್ಮ ದೈನಂದಿನ ಅಗತ್ಯಗಳಿಗಾಗಿ ಬಳಸಿಕೊಳ್ಳುವುದನ್ನು ಪರಿಚಯಿಸಲಾಗುತ್ತಿದೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.
ಮುಂದೇನು?
ಉರವು ಡೇಟಾ ಸೆಂಟರ್‌ಗಳಿಗಾಗಿ ಅಪ್ಲಿಕೇಶನ್‌ಗಳನ್ನು ಅನ್ವೇಷಿಸುತ್ತಿದ್ದು, ಒಂದು ಮೆಗಾವ್ಯಾಟ್ ಡೇಟಾ ಸೆಂಟರ್‌ಗೆ ಸಾಮಾನ್ಯವಾಗಿ ದಿನಕ್ಕೆ ಸುಮಾರು 80,000 ಲೀಟರ್ ನೀರು ಬೇಕಾಗುತ್ತದೆ. ಉರವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಡೇಟಾ ಕೇಂದ್ರಗಳು ತಮ್ಮ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಶೇ. 90ರಷ್ಟು, ಸಮುದಾಯದ ನೀರಿನ ಮೂಲಗಳು ಮತ್ತು ಅಂತರ್ಜಲ ಜಲಾಶಯಗಳ ಮೇಲಿನ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಗಾಳಿಯಿಂದ ನೀರಿನ ತಂತ್ರಜ್ಞಾನವನ್ನು ಕೈಗೆಟುಕುವಂತೆ ಮಾಡುವುದು ಉರವು ಕಂಪನಿಯ ಅಂತಿಮ ಉದ್ದೇಶವಾಗಿದೆ ಎಂದು ಹೇಳಿರುವ ಶ್ರೀವಾಸ್ತವ್, ನೀರು ಭೂಮಿಯ ಮೇಲೆ ಹೆಚ್ಚು ಬಳಸುವ ವಸ್ತು. ಇದು ಭೌತಿಕ ಪ್ರಮಾಣದಲ್ಲಿ ಮತ್ತು ಗುಣಮಟ್ಟದ ಅಂಶಗಳಲ್ಲಿ ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
ಎಷ್ಟು ವೆಚ್ಚ?
ಸಾಮಾನ್ಯವಾಗಿ ಶುದ್ಧೀಕರಣ ಪ್ರಕ್ರಿಯೆಗಳು ಮತ್ತು ಮೂಲದ ಗುಣಮಟ್ಟವನ್ನು ಅವಲಂಬಿಸಿ ನೀರಿನ ವೆಚ್ಚವು ಲೀಟರ್‌ಗೆ 20ರಿಂದ 60 ಪೈಸೆಗಳವರೆಗೆ ಇರುತ್ತದೆ. ಉರವು ಲ್ಯಾಬ್‌ಗಳಲ್ಲಿ ನೀರಿನ ಉತ್ಪಾದನೆಯ ವೆಚ್ಚ ಪ್ರತಿ ಲೀಟರ್‌ಗೆ ಸುಮಾರು 4 ರಿಂದ 5 ರೂಪಾಯಿಗಳು ಎಂದು
ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.
ನೀರಿನ ಕೊರತೆ ಇದ್ದಾಗ ಜನರು ನೀರಿಗಾಗಿ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಗಾಳಿಯಿಂದ ನೀರಿನಂತಹ ಸ್ಥಿರ ತಂತ್ರಜ್ಞಾನದಲ್ಲಿ ಪ್ರತಿ ಲೀಟರ್ ನೀರಿಗೆ ಆರಂಭದಲ್ಲಿ ದುಬಾರಿಯಂತೆ ಕಂಡರೂ ನೀರಿನ ಬಿಕ್ಕಟ್ಟಿನ ಸಮಯದಲ್ಲಿ ದುಬಾರಿಯಾಗುವ ನೀರಿನ ಮೌಲ್ಯವನ್ನು ಗಮನಿಸಿದರೆ ಇದು ದುಬಾರಿಯಲ್ಲ. ಈ ತಂತ್ರಜ್ಞಾನ ಸರಳವಾದಂತೆ ಈ ಮಾದರಿಯ ನೀರು ಉತ್ಪಾದನೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.