Site icon Vistara News

Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

Yogi Adithyanath

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿಯವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಉತ್ತರಾಖಂಡದ ಹೃಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಮುಖ್ಯಮಂತ್ರಿಗಳು ಭಾನುವಾರದಂದು ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಾಯಿಯ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅವರು ಸುಮಾರು 20 ನಿಮಿಷಗಳ ಕಾಲ ತಮ್ಮ ತಾಯಿಯ ಜೊತೆ ಸಮಯ ಕಳೆದಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳ ಜೊತೆ ಉತ್ತರಾಖಂಡದ ಆರೋಗ್ಯ ಸಚಿವ ಧನ್ ಸಿಂಗ್ ರಾವತ್ ಮತ್ತು ಹರಿದ್ವಾರ ಸಂಸದ ತ್ರಿವೇಂದ್ರ ಸಿಂಗ್ ಜೊತೆಗಿದ್ದರು ಎನ್ನಲಾಗಿದೆ. ಹಾಗೇ ಶನಿವಾರದಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೂಡ ಮುಖ್ಯಮಂತ್ರಿ ಯೋಗಿಯವರ ತಾಯಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದು ಮುಖ್ಯಮಂತ್ರಿಯವರು ಎರಡು ವರ್ಷಗಳ ಬಳಿಕ ತಮ್ಮ ತಾಯಿಯನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿರುವುದಾಗಿದೆ. ಅವರ ತಾಯಿ ಸಾವಿತ್ರಿ ದೇವಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿಂದೆ ಅವರು ಕಣ್ಣಿನ ಸೋಂಕಿಗೂ ಕೂಡ ಒಳಗಾಗಿದ್ದರು ಎಂಬುದಾಗಿ ತಿಳಿದುಬಂದಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೂಲತಃ ಉತ್ತರಾಖಂಡದವರಾಗಿದ್ದು, ಅವರ ಕುಟುಂಬದವರು ಪೌರಿ ಗಢವಾಲ್ ನ ಪಚೌರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಮುಖ್ಯಮಂತ್ರಿಗಳು ಈ ಹಿಂದೆ 2022ರಲ್ಲಿ ತಮ್ಮ ಕುಟುಂಬದವರಿರುವ ಗ್ರಾಮಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದಿದ್ದರು.

ಇದನ್ನೂ ಓದಿ: Head Shave: ಪೋಷಕರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ದಲಿತ ಹುಡುಗನ ತಲೆ ಬೋಳಿಸಿದರು!

ಮುಖ್ಯಮಂತ್ರಿ ಯೋಗಿ ಅವರು ತಮ್ಮ ತಾಯಿಯನ್ನು ಭೇಟಿ ಬಳಿಕ ರುದ್ರಪ್ರಯಾಗ ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಹಾಗೇ ಗಾಯಾಳುಗಳು ಹಾಗೂ ವೈದ್ಯರ ಜೊತೆ ಮಾತುಕತೆ ನಡೆಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ರಾಜ್ಯ ಸರ್ಕಾರದ ಕಡೆಯಿಂದ ಭರವಸೆ ನೀಡಿದ್ದಾರೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಶನಿವಾರ 26 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೊವೊಂದು ಆಳವಾದ ಕಣಿವೆಗೆ ಬಿದ್ದ ಪರಿಣಾಮ ಕನಿಷ್ಠ 14 ಮಂದಿ ಸಾವನಪ್ಪಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಉತ್ತರಾಖಂಡ ಸರ್ಕಾರ ಆದೇಶಿಸಿತ್ತು.

Exit mobile version