Site icon Vistara News

12 Tips for Better Life: ನಿಮ್ಮ ಬದುಕು ಬದಲಾಗಬೇಕೇ?; ಈ 12 ಸೂತ್ರಗಳನ್ನು ಶಿಸ್ತಾಗಿ ಪಾಲಿಸಿ!

ಕೆಲವೊಮ್ಮೆ ನಮ್ಮ ಅಭ್ಯಾಸಗಳನ್ನು (12 Tips for Better Life) ಎಷ್ಟು ಪ್ರಯತ್ನಿಸಿದರೂ ಬಿಡಲು ಸಾಧ್ಯವಾಗುವುದಿಲ್ಲ. ಬೆಳಗ್ಗೆ ಬೇಗ ಏಳಬೇಕೆಂದುಕೊಳ್ಳುತ್ತೇವೆ. ಆದರೆ, ನಾಲ್ಕು ದಿನ ಮಾಡಿ, ಆಗುವುದಿಲ್ಲ ಎಂದು ಕೈಬಿಡುತ್ತೇವೆ. ಒಳ್ಳೆಯ ಆಹಾರಾಭ್ಯಾಸಗಳನ್ನು ಆರಂಭಿಸುತ್ತೇವೆ. ಆದರೆ, ನಾಲ್ಕೇ ದಿನಕ್ಕೆ ಬೋರಾಗಿ, ಹೊರಗೆ ಹೋಗಿ ತಿನ್ನುತ್ತೇವೆ. ಇವೆಲ್ಲ ಕೇವಲ ಉದಾಹರಣೆಯಷ್ಟೆ. ಇಂತಹ ಹಲವು ವಿಚಾರಗಳು ಎಲ್ಲರ ಬದುಕಿನಲ್ಲಿ ನಡೆದೇ ಇರುತ್ತದೆ.
ಆದರೆ, ನಮ್ಮ ಅಭ್ಯಾಸಗಳನ್ನು ಬಿಟ್ಟು ಹೊಸ ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳಲು ನಮಗೆ ನಲುವತ್ತು ದಿನಗಳು ಸಾಕು ಎನ್ನುತ್ತಾರೆ ನಮ್ಮ ಹಿರಿಯರು. ಇದನ್ನು ವೇದಗಳ ಕಾಲದಿಂದಲೂ ಒಪ್ಪುತ್ತಾರೆ. ಬನ್ನಿ, ನಿಮ್ಮ ಅಭ್ಯಾಸಗಳನ್ನು ಬದಿಗಿರಿಸಿ, ಹೊಸ ಆರೋಗ್ಯಕರ ಜೀವನಕ್ರಮವನ್ನು ಶಿಸ್ತಾಗಿ ಹೀಗೆ ೪೦ ದಿನ ಮಾಡಿ. ಅವೇ ನಿಮ್ಮ ಶಾಶ್ವತ ಜೀವನಕ್ರಮವಾಗಿ ಬದಲಾಗುತ್ತದೆ. ನಿಮ್ಮ ಬದುಕೇ ಇದರಿಂದ ಬದಲಾಗುತ್ತದೆ!

dinner

ಬೆಳಗ್ಗೆ ಆರು ಗಂಟೆಯ ಮೊದಲೇ ಏಳುವುದು

ಬೆಳಗ್ಗೆ ಆರು ಗಂಟೆಯ ನಂತರ ದೇಹದಲ್ಲಿ ಕಫ ಪ್ರಕೃತಿಯು ಹೆಚ್ಚಾಗುತ್ತದೆ. ಇದರಿಂದ ಆಲಸ್ಯ ಹೆಚ್ಚಾಗುತ್ತದೆ. ತಡವಾದಷ್ಟೂ ದೇಹಕ್ಕೆ ಆಲಸ್ಯ ಹೆಚ್ಚು. ಹಾಗಾಗಿ ಇಡೀ ದಿನ ಉಲ್ಲಾಸದಿಂದಿರಲು, ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಬೇಗ ಏಳುವುದು ಒಳ್ಳೆಯದು.

ಹತ್ತು ನಿಮಿಷ ಧ್ಯಾನ

ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದ ಮೇಲೆ ಕನಿಷ್ಟ ಹತ್ತು ನಿಮಿಷ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಷ್ಟೇ ಬ್ಯುಸಿಯಾಗಿದ್ದರೂ, ಒಂದಿಷ್ಟು ಸಮಯ ಇದಕ್ಕಾಗಿ ಮೀಸಲಿಡಿ. ನಿಧಾನವಾಗಿ ದೀರ್ಘವಾಗಿ ಉಸಿರಾಡುವ ಅಭ್ಯಾಸಕ್ಕಾಗಿ ಐದು ನಿಮಿಷ ಇಟ್ಟುಕೊಳ್ಳಿ. ನಂತರ, ವ್ಯಾಯಾಮಕ್ಕೆಂದು ಕನಿಷ್ಟ ಹತ್ತು ನಿಮಿಷವಾದರೂ ಇಟ್ಟುಕೊಳ್ಳಿ.

ಬೆಳಗಿನ ತಿಂಡಿಯ ಮೊದಲು ಫೋನ್‌ ಮುಟ್ಟಬೇಡಿ

ಬೆಳಗ್ಗೆ ಏಳುವಾಗಲೇ ಫೋನ್‌ ಚೆಕ್‌ ಮಾಡವುದು ನಮಗೆಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ಇದನ್ನು ಬಿಡಿ. ಎದ್ದು ನಿತ್ಯಕರ್ಮಗಳನ್ನು ಮಾಡಿ, ಸಾವಕಾಶವಾಗಿ ಕೂತು ತಿಂಡಿ ತಿನ್ನಿ. ಇಡೀ ದಿನ ಏನೇನು ಮಾಡಬೇಕೆಂಬುದನ್ನು ಮನಸ್ಸಿನಲ್ಲೊಮ್ಮೆ ಲೆಕ್ಕ ಹಾಕಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿ.

ಒಂದು ಲೋಟ ಬಿಸಿ ನೀರು

ಬೆಳಗಿನ ತಿಂಡಿಗೆ ಅರ್ಧ ಗಂಟೆ ಮೊದಲು ಒಂದು ಲೋಟ ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿ. ಇದು ನಿಮ್ಮ ದೇಹವನ್ನು ಹೈಡ್ರೇಟ್‌ ಮಾಡುವುದಲ್ಲದೆ, ದೇಹದ ಕಶ್ಮಲಗಳನ್ನು ಹೊರಕ್ಕೆ ಕಳಿಸುತ್ತದೆ. ಜೊತೆಗೆ ಜೀರ್ಣಕಾರಿ ಅಂಗಾಂಗಗಳನ್ನು ಕೆಲಸಕ್ಕೆ ರೆಡಿ ಮಾಡುತ್ತದೆ.

ಊಟ ಬಿಡಬೇಡಿ

ಊಟವನ್ನು ಸ್ಕಿಪ್‌ ಮಾಡಬೇಡಿ. ಮೂರು ಹೊತ್ತು ಉಣ್ಣಿ. ಊಟ ಬಿಡುವುದರಿಂದ ನಿಮ್ಮ ಜೀರ್ಣಕ್ರಿಯೆಯ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನಿನ ಏರುಪೇರಾಗಿ ಮಾನಸಿಕವಾಗಿಯೂ ನೀವು ಕುಗ್ಗುತ್ತೀರಿ.

ಮಧ್ಯಾಹ್ನ ಹೊಟ್ಟೆ ತುಂಬ ಊಟ

ಮಧ್ಯಾಹ್ನದೂಟವನ್ನು ಹೊಟ್ಟೆ ತುಂಬ ಉಣ್ಣಿ. ಮಧ್ಯಾಹ್ನದ ಹೊತ್ತು ನಿಮ್ಮ ಜಠರಾಗ್ನಿಯು ಅತ್ಯಂತ ಚುರುಕಾಗಿರುವುದರಿಂದ ಮಾಡಿದ ಊಟ ಕರಗುತ್ತದೆ. ಪೋಷಕಾಂಶಗಳು ಸಮರ್ಪಕವಾಗಿ ದೇಹ ಸೇರುತ್ತದೆ.

ದೇಹಕ್ಕೆ ಎಣ್ಣೆ

ಸಮಯ ಮಾಡಿಕೊಂಡು ಸ್ನಾನಕ್ಕೆ 10 ನಿಮಿಷ ಮೊದಲು ದೇಹಕ್ಕೆ ಎಣ್ಣೆ ಲೇಪಿಸಿಕೊಳ್ಳಿ. ಆಯುರ್ವೇದದಲ್ಲಿ ಇದನ್ನು ತೈಲ ಅಭ್ಯಂಗ ಎನ್ನುತ್ತಾರೆ. ನಂತರ ಸ್ನಾನ ಮಾಡಿ. ನಿಮ್ಮ ಚರ್ಮ ಹೊಳಪಾಗುವುದಲ್ಲದೆ, ಆರೋಗ್ಯವೂ ಹೆಚ್ಚುತ್ತದೆ.

ಓದಿಗೆ ಸಮಯ

ಪ್ರತಿನಿತ್ಯವೂ ಓದಿಗಾಗಿ ಕೊಂಚ ಸಮಯ ಮೀಸಲಿಡಿ. ನಿಮ್ಮಿಷ್ಟದ ಪುಸ್ತಕಕ್ಕಾಗಿ, ಜ್ಞಾನವೃದ್ಧಿಗೆ ಅರ್ಧಗಂಟೆಯಾದರೂ ಇಡಿ.

ಹೂದೋಟಗಳ ಆರೈಕೆ

ಮನೆಯಲ್ಲಿ ಹೂದೋಟವಿದ್ದರೆ, ಗಿಡಗಳನ್ನು ಬೆಳೆಸಿದ್ದರೆ ಅವುಗಳ ಆರೈಕೆಗಾಗಿ ಹದಿನೈದು ನಿಮಿಷವಾದರೂ ಇಟ್ಟುಕೊಳ್ಳಿ. ಸಸ್ಯಗಳ ಜೊತೆಗಿನ ಒಡನಾಡ, ನೆಮ್ಮದಿಯನ್ನು, ಸಂತೋಷವನ್ನು ಇಮ್ಮಡಿಸುತ್ತದೆ. ಒತ್ತಡ ಕಡಿಮೆ ಮಾಡುತ್ತದೆ.

ಟೈಮ್‌ಟೇಬಲ್‌ ಇರಲಿ

ಪ್ರತಿನಿತ್ಯವೂ ನಿಮ್ಮ ದಿನ ಹೀಗೆಯೇ ಇರಬೇಕೆಂಬ ಟೈಮ್‌ಟೇಬಲ್‌ ಇರಲಿ. ಅದನ್ನು ಶಿಸ್ತಾಗಿ ಪಾಲಿಸಲು ಪ್ರಯತ್ನಿಸಿ. ನಿಮ್ಮ ಗುರಿಯನ್ನು ನಿತ್ಯವೂ ನೆನಪು ಮಾಡಿಕೊಳ್ಳುತ್ತಿರಿ. ಆ ನಿಟ್ಟಿನಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಸಾಗಲಿ.

ರಾತ್ರಿಯೂಟ ಬೇಗ ಆಗಲಿ

ಆದಷ್ಟೂ ಬೇಗ ರಾತ್ರಿಯೂಟ ಮಾಡುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಎಂಟು ಗಂಟೆಯ ಮೊದಲೇ ಊಟ ಮುಗಿಸಿದರೆ ಒಳ್ಳೆಯದು. ನಂತರ ಮಲಗುವ ಒಂದು ಗಂಟೆಯ ಮೊದಲು ಒಂದು ಲೋಟ ಬಿಸಿಯಾದ ಹಾಲು ಕುಡಿಯಿರಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Sugar Eating: ನಾವು ತಿನ್ನುವ ಸಕ್ಕರೆ ಪ್ರಮಾಣ ಅತಿಯಾಗುತ್ತಿದೆ ಅನ್ನೋದನ್ನ ತಿಳಿಯೋದು ಹೇಗೆ?

ಮಲಗುವ ಕೋಣೆಯೊಳಗೆ ಫೋನ್‌ ಬೇಡ

ಮಲಗುವ ಕೋಣೆಯೊಳಗೆ ಫೋನ್‌ ಒಯ್ಯಬೇಡಿ. ಡಿಜಿಟಲ್‌ ಅಭ್ಯಾಸಗಳನ್ನು ಮಲಗುವ ಒಂದು ಗಂಟೆಗೆ ಮೊದಲೇ ನಿಲ್ಲಿಸಿ. ಕಣ್ಣು ಮನಸ್ಸಿಗೆ ವಿಶ್ರಾಂತಿ ನೀಡಿ. ರಾತ್ರಿ 10 ಗಂಟೆಯ ನಂತರ ದೇಹದಲ್ಲಿ ಪಿತ್ತ ಪ್ರಕೃತಿ ಮೇಳೈಸುತ್ತದೆ. ಈ ಸಂದರ್ಭ ನಿದ್ದೆ ಬೇಕು. ರಾತ್ರಿ ಹತ್ತರೊಳಗೆ ನಿಮ್ಮ ಎಲ್ಲವನ್ನೂ ಮುಗಿಸಿ ನಿದ್ದೆಗೆ ಜಾರಿ.

ಈ ಅಭ್ಯಾಸಗಳನ್ನು ಶಿಸ್ತಾಗಿ ಕನಿಷ್ಟ 40 ದಿನ ಮಾಡಿ ನೋಡಿ. ನಿಮ್ಮ ಬದುಕು ವಿಶಿಷ್ಟ ರೂತಿಯಲ್ಲಿ ಬದಲಾಗುತ್ತದೆ. ಆರೋಗ್ಯ, ಶಾಂತಿ, ನೆಮ್ಮದಿ ಮೈಗೂಡುತ್ತದೆ.

Exit mobile version