Site icon Vistara News

ಮಾಂಟ್‌ ಬ್ಲಾಂಕ್‌ ಚಾರಣ ಮಾಡಬೇಕೆ? ರಕ್ಷಣೆ ಮತ್ತು ಶವ ಸಂಸ್ಕಾರಕ್ಕೆ ಮುಂಗಡ ಪಾವತಿಸಲೇಬೇಕು !

Mont Blanc

ಯುರೋಪ್‌ನ ಆಲ್ಫ್ಸ್‌ ಪರ್ವತ ಶ್ರೇಣಿಯ ಉನ್ನತ ಶಿಖರ ಮಾಂಟ್‌ ಬ್ಲಾಂಕ್‌ ಏರುವ ಉದ್ದೇಶವಿದೆಯೇ? ಹಾಗಿದ್ದರೆ ೧೪.೪ ಲಕ್ಷ ರೂ. ಸಿದ್ಧ ಮಾಡಿಟ್ಟುಕೊಳ್ಳಿ. ಪ್ರಯಾಣದ ಖರ್ಚಿಗಲ್ಲ, ಅಲ್ಲೇನಾದರೂ ಅಪಾಯಕ್ಕೆ ಸಿಲುಕಿದರೆ ರಕ್ಷಣೆಗೆ ಮತ್ತು ಗ್ರಹಚಾರ ಕೆಟ್ಟು ಜೀವಬಿಟ್ಟರೆ ಮುಂದಿನ ವ್ಯವಸ್ಥೆಗೆ !

ಹೌದು, ಚಾರಣಿಗರನ್ನು ಕೈ ಬೀಸಿ ಕರೆಯುವ ಈ ಶಿಖರ ಈಗೀಗ ಅಪಾಯದ ಹೆದ್ದಾರಿಯೆನಿಸುತ್ತಿದೆ. ಹಾಗಾಗಿಯೇ ಫ್ರಾನ್ಸ್‌ ಹಲವಾರು ಮಾರ್ಗಸೂಚಿಗಳನ್ನು ಚಾರಣಿಗರಿಗಾಗಿ ಬಿಡುಗಡೆ ಮಾಡಿದೆ. ಮಾತ್ರವಲ್ಲ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅಲ್ಲಿ ಮಾನವ ಚಟುವಟಿಕೆಯನ್ನೂ ನಿರ್ಬಂಧಿಸುವುದು ಅನಿವಾರ್ಯವಾಗುತ್ತದೆ. ಆಡಳಿತದ ಎಚ್ಚರಿಕೆಯನ್ನೂ ಲೆಕ್ಕಿಸದೆ ಹುಚ್ಚರಂತೆ ಚಾರಣಕ್ಕಾಗಿ ಬರುವವರು ಅಪಾಯಕ್ಕೆ ಸಿಲುಕಿದಾಗ ಅವರನ್ನು ರಕ್ಷಿಸುವ ಹೊಣೆ ಫ್ರಾನ್ಸ್‌ಗೆ ಹೆಚ್ಚುವರಿ ತಲೆನೋವಾಗಿದೆ. ಇನ್ನು ಜೀವ ಹೋದರಂತೂ ಮುಂದಿನ ವ್ಯವಸ್ಥೆಗೆ ಇನ್ನಷ್ಟು ಫಜೀತಿ. ಹಾಗಾಗಿ ಫ್ರೆಂಚ್‌ ಮೇಯರ್‌ ಜೀನ್‌ ಮಾರ್ಕ್‌ ಪೈಯ್ಲೆಕ್ಸ್‌ ಈ ಸಲಹೆಯನ್ನು ಮುಂದಿಟ್ಟಿದ್ದಾರೆ.

ʻಮಾಂಟ್‌ ಬ್ಲಾಂಕ್‌ ಏರಬೇಕೆಂದು ಬರುವವರು ಹೆಚ್ಚಿನ ಬಾರಿ ಸಾವನ್ನು ಬೆನ್ನಲ್ಲಿ ಕಟ್ಟಿಕೊಂಡೇ ಬರುತ್ತಾರೆ. ಕೆಲವರು ಸೂಕ್ತ ತರಬೇತಿಯನ್ನೂ ಪಡೆಯದೆ ಬರುತ್ತಾರೆ. ಅವರ ರಕ್ಷಣೆ ಮತ್ತು ಶವ ಸಂಸ್ಕಾರದ ಹೆಚ್ಚುವರಿ ಹೊರೆಯನ್ನು ಫ್ರಾನ್ಸ್‌ನ ತೆರಿಗೆದಾರರ ಮೇಲೆ ಹೊರಿಸುವುದು ಖಂಡಿತಾ ಸರಿಯಲ್ಲ. ಹಾಗಾಗಿ, ೧೦ ಸಾವಿರ ಯುರೊ ರಕ್ಷಣೆಗೆ ಮತ್ತು ೫ ಸಾವಿರ ಯುರೊ ಶವಸಂಸ್ಕಾರಕ್ಕಾಗಿ ಮುಂಚಿತವಾಗಿ ಕಡ್ಡಾಯವಾಗಿ ಪಾವತಿಸಿಕೊಳ್ಳಬೇಕುʼ ಎಂದು ಅವರು ಇತ್ತೀಚೆಗೆ ಟ್ವೀಟ್‌ ಮಾಡಿದ್ದಾರೆ.

ಕೆಲವರ ಬೇಜವಾಬ್ದಾರಿತನದಿಂದ ನಮ್ಮ ರಕ್ಷಣಾ ತಂಡಗಳು ಧಾವಿಸಬೇಕಾಗುತ್ತದೆ. ಮೋಜಿಗಾಗಿ ಇಂಥ ಕೆಲಸದಲ್ಲಿ ತೊಡಗುವವರ ಹೊರೆಯನ್ನು ಫ್ರಾನ್ಸ್‌ ಪ್ರಜೆಗಳು ಭರಿಸಬೇಕಿಲ್ಲ ಎಂಬ ಸ್ಪಷ್ಟ ಅಭಿಪ್ರಾಯ ಅವರದ್ದು. ಇತ್ತೀಚಿನ ಹವಾಮಾನ ವೈಪರಿತ್ಯದಿಂದಾಗಿ ಈ ಶಿಖರವನ್ನು ಏರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಹಿಮಪಾತ, ನೀರ್ಗಲ್ಲು ಜಾರುವಂಥ ಹಲವಾರು ಪ್ರಕೋಪಗಳು ಪದೇಪದೆ ಸಂಭವಿಸುತ್ತಿವೆ. ಶೀಖರವೇರುವ ಜನಪ್ರಿಯ ಹಾದಿಗಳನ್ನೆಲ್ಲಾ ಈಗ ಮುಚ್ಚಲಾಗಿದೆ. ಇಷ್ಟಾಗಿಯೂ ಜುಲೈ ಮೊದಲ ವಾರದಲ್ಲಿ ೧೧ ಚಾರಣಿಗರ ತಂಡವೊಂದು ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿತ್ತು. ಇತ್ತೀಚೆಗೆ ರೊಮೇನಿಯಾದ ಚಾರಣಿಗರ ತಂಡವೊಂದನ್ನು ಹಿಂದಿರುಗುವಂತೆ ಮನವೊಲಿಸುವಲ್ಲಿ ಪೊಲೀಸ್‌ ಅಧಿಕಾರಿಗಳು ಹರಸಾಹಸ ಪಟ್ಟು ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಏರ್‌ ಶೋ ವೇಳೆ ಎರಡು ರಫೇಲ್‌ ವಿಮಾನಗಳ ಡಿಕ್ಕಿ!

Exit mobile version