ಸಾಮಾನ್ಯವಾಗಿ ವಯಸ್ಸು ಹೆಚ್ಚುತ್ತಿದ್ದಂತೆ ಆರೋಗ್ಯದಲ್ಲಿಯೂ ಏರುಪೇರು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಪ್ರಮುಖವಾಗಿ ರಕ್ತದ ಒತ್ತಡ ಹೆಚ್ಚಾಗುವುದು. ಅದಕ್ಕೂ ಮೊದಲೇ ಆರೋಗ್ಯದ ಬಗ್ಗೆ ಕಾಳಜಿವಹಿಸಿ ನಿಮ್ಮ ಆಹಾರ ಹಾಗೂ ಕುಡಿಯುವ ಅಭ್ಯಾಸವನ್ನು (Drinking Habits) ಚೂರು ಬದಲಾಯಿಸಿಕೊಳ್ಳಬಹುದೇ? ಇಲ್ಲಿ ಕುಡಿಯುವ ಅಭ್ಯಾಸವೆಂದರೆ ಕೇವಲ ಮದ್ಯಪಾನವಲ್ಲ, ದಿನನಿತ್ಯ ಕುಡಿಯುವ ಜ್ಯೂಸ್ ಕೂಡ ಹೌದು.
ಕೆಲಸದ ಟೆನ್ಷನ್, ಮನೆಯ ವಾತಾವರಣದ ಟೆನ್ಷನ್, ಮಕ್ಕಳು ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ ಎಂಬ ಟೆನ್ಷನ್ ಇವೆಲ್ಲವೂ ಮನಸ್ಸಿನ ಮೇಲೆ, ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ಆಹಾರ ಪದ್ಧತಿ, ನೀವು ಏನೇನು ಕುಡಿಯುತ್ತೀರಿ ಎಂಬುದು ಕೂಡ ತುಂಬಾ ಮುಖ್ಯವಾಗುತ್ತದೆ. ಇದರಿಂದ ದೇಹದ ರಕ್ತದ ಒತ್ತಡ ಹೆಚ್ಚುತ್ತದೆ.
ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ನಿಮ್ಮಲ್ಲಿ ರಕ್ತ ಒತ್ತಡ ಹೆಚ್ಚಿದೆ ಎಂದು ತಿಳಿದು ಬಂದರೆ ಅವರು ಒಂದಿಷ್ಟು ಪರಿಹಾರಗಳನ್ನು ನೀಡುತ್ತಾರೆ. ಧೂಮಪಾನ ಅಥವಾ ಮದ್ಯಪಾನ ಮಾಡುವ ಅಭ್ಯಾಸವಿದ್ದರೆ ಅದನ್ನು ಬಿಡಬೇಕಾಗುತ್ತದೆ, ಉಪ್ಪು ಸೇವನೆ ನಿಲ್ಲಿಸಬೇಕು, ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ನೀವು ಸಹಜ ಎಂದುಕೊಂಡ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಇದಕ್ಕೆ ಪರಿಹಾರವೇನು?
ನೀವು ಈ ಬಗ್ಗೆ ಗಾಬರಿಯಾಗಬೇಕಿಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಸಾಕು, ರಕ್ತದ ಒತ್ತಡ ಹೆಚ್ಚುವ ಪ್ರಮಾಣ ಬಹುತೇಕ ಕಡಿಮೆಯಾಗುತ್ತದೆ. ನಿತ್ಯವೂ ಮಾಮೂಲಿಯಂತೆ ಕೆಲವು ಜ್ಯೂಸ್ ಅಥವಾ ಇತರ ಪಾನೀಯಗಳನ್ನು ಸೇವನೆ ಮಾಡಲಾಗುತ್ತದೆ. ಆದರೆ ಅವುಗಳಲ್ಲಿ ಕೆಲವು ನಿಮ್ಮ ರಕ್ತ ಒತ್ತಡ ಹೆಚ್ಚಿಸಲು ಮುಖ್ಯ ಕಾರಣವಾಗುತ್ತವೆ.
ರಕ್ತದ ಒತ್ತಡ ಹೆಚ್ಚಿಸುವ 4 ಪಾನೀಯಗಳು
- ಸಕ್ಕರೆ ಭರಿತ ಪಾನೀಯ
ಸೋಡಾ, ಜ್ಯೂಸ್ ಸೇರಿದಂತೆ ಇನ್ನಿತರ ಪಾನೀಯಗಳಲ್ಲಿ ಅತಿಯಾದ ಸಕ್ಕರೆ ಇರುತ್ತದೆ. ಸಕ್ಕರೆ ಇಲ್ಲದೆ ಕುಡಿಯುವುದು ಉತ್ತಮ. ಹಾಗಂತ ಜ್ಯೂಸ್ ಕುಡಿಯಲೇ ಬಾರದು ಅಂತೇನಿಲ್ಲ. ದೇಹಕ್ಕೆ ಗ್ಲೂಕೋಸ್ ಕೂಡ ಬೇಕೆ ಬೇಕು. ಹಾಗಾಗಿ ಹಣ್ಣಿನ ಜ್ಯೂಸ್ ಕುಡಿಯುವುದು ಉತ್ತಮ. ಸಾಮಾನ್ಯವಾಗಿ ಹಣ್ಣುಗಳು ಸಿಹಿ ಇರುತ್ತದೆ, ಹಾಗಾಗಿ ಹಣ್ಣಿನ ಜ್ಯೂಸಿಗೆ ಸಕ್ಕರೆ ಸೇರಿಸುವ ಅಗತ್ಯವಿರುವುದಿಲ್ಲ.
- ಎನರ್ಜಿ ಡ್ರಿಂಕ್‌ಗಳು
ಅಧಿಕವಾಗಿ ಕೋಕಾ ಕೋಲ, ಪೆಪ್ಸಿ, ರೆಡ್‌ಬುಲ್‌ನಂತಹ ಎನರ್ಜಿ ಡ್ರಿಂಕ್‌ಗಳ ಸೇವನೆ ಕೂಡ ಅಪಾಯಕಾರಿ. ಆಹಾರ ತಜ್ಞರಾದ ಲಿಂಡ್ಸೆ ಡೆಲ್ಕ್ ಪ್ರಕಾರ ʼʼಈ ರೀತಿಯ ಎನರ್ಜಿ ಡ್ರಿಂಕ್‌ಗಳಲ್ಲಿ ಕೆಫೀನ್ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಇದು ಒತ್ತಡ ಹೆಚ್ಚಿಸುತ್ತದೆ.ʼʼ ಅದರಲ್ಲೂ ಇವುಗಳನ್ನು ಮದ್ಯದ ಜತೆ ಸೇರಿಸಿ ಕುಡಿಯಲೇಬಾರದು ಎಂದು ಹೇಳಲಾಗಿದೆ.
- ಹಾಲು ಕುಡಿಯದಿರುವುದು
ಇದು ವಿಚಿತ್ರ ಎನ್ನಿಸಿದರೂ ಸತ್ಯ. ಹಾಲು ರಕ್ತದ ಒತ್ತಡ ನಿಯಂತ್ರಣಕ್ಕೆ ಪೂರಕವಾಗಿದೆ. ಅಮೆರಿಕ ಸೊಸೈಟಿ ಫಾರ್ ನ್ಯೂಟ್ರಿಷನ್ ನಡೆಸಿದ ಸಂಶೋಧನೆಯ ಪ್ರಕಾರ ಪ್ರತಿದಿನ 2 ಅಥವಾ ಮೂರು ಬಾರಿ ಹಾಲು ಸೇವಿಸುವುದರಿಂದ ರಕ್ತದ ಒತ್ತಡ ನಿಯಂತ್ರಣಗೊಳ್ಳುತ್ತದೆ.
- ಅಧಿಕ ಕಾಫಿ ಸೇವನೆ
ಕಾಫಿಯಲ್ಲಿ ಕೂಡ ಕೆಫೀನ್ ಪ್ರಮಾಣ ಇರುತ್ತದೆ. ಆಗಾಗ ಕಾಫಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಫೀನ್‌ನಿಂದ ಉಂಟಾಗುವ ದುಷ್ಪರಿಣಾಮ ತುಂಬಾ ಸಮಯ ಇರುವುದಿಲ್ಲ ಎಂದು ಕೂಡ ಹೇಳಲಾಗಿದೆ. ಹಾಗಾಗಿ ಅಪರೂಪಕ್ಕೆ ಕಾಫಿ ಕುಡಿದರೆ ತೊಂದರೆ ಇಲ್ಲ, ಆದರೆ ಅದೇ ಅಭ್ಯಾಸವಾಗದಂತೆ ಕಾಳಜಿ ವಹಿಸುವುದು ಉತ್ತಮ.
ಇದನ್ನೂ ಓದಿ: Hair Style: ಕೂದಲಿನ ಆರೋಗ್ಯಕ್ಕೆ ಉಲ್ಟಾ ಬಾಚಿ ನೋಡಿ!