Site icon Vistara News

National Nutrition Week 2023 : ಈ 5 ಪೋಷಕಾಂಶ ಹಿರಿಯರ ಆಹಾರದಲ್ಲಿ ಇರಲೇಬೇಕು

nutrition food

ಲೇಖಕರು: ಅರುಣಾಮಲ್ಯ, ಹಿರಿಯ ಆಹಾರಕ್ರಮ ತಜ್ಞರು, ಕೆಎಂಸಿ ಆಸ್ಪತ್ರೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು.
ಉತ್ತಮ ಪೋಷಕಾಂಶ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿಸಲು ಮಾರ್ಚ್ 1975ರಲ್ಲಿ ಅಮೆರಿಕನ್ ಡಯಟೆಟಿಕ್ ಅಸೋಸಿಯೇಷನ್(ಎಡಿಎ)ನಿಂದ ಮೊದಲ ಬಾರಿಗೆ ರಾಷ್ಟ್ರೀಯ ಪೋಷಕಾಂಶ ಸಪ್ತಾಹವನ್ನು ಆಯೋಜಿಸಲಾಗಿತ್ತು. 1980ರಲ್ಲಿ ಈ ಕಾರ್ಯಕ್ರಮವನ್ನು ಒಂದು ತಿಂಗಳವರೆಗೆ ನಡೆಸಲಾಯಿತು. 1989ರಿಂದ ಭಾರತ ಸರ್ಕಾರವು ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಆಯೋಜಿಸುತ್ತಿದ್ದು, ಆರೋಗ್ಯಕರ ಮತ್ತು ಸುಸ್ಥಿರ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಹಾಗೂ ಜನರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಕೈಗೊಂಡಿದೆ.

2021ರಲ್ಲಿ ಆಚರಿಸಲಾದ ರಾಷ್ಟ್ರೀಯ ಪೋಷಕಾಂಶ ಸಪ್ತಾಹ ”ಆರಂಭದಿಂದಲೆ ಬುದ್ಧಿವಂತಿಕೆಯಿಂದ ತಿನ್ನಿಸುವುದು’’ ಎಂಬ ಘೋಷವಾಕ್ಯ ಹೊಂದಿತ್ತು . ಪ್ರಸಕ್ತ ವರ್ಷ ರಾಷ್ಟ್ರೀಯ ಪೋಷಕಾಂಶ ಸಪ್ತಾಹದ ವಿಷಯವನ್ನು ಪ್ರಕಟಿಸಲು ಆಗದಿದ್ದರೂ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ ತಿಂಗಳನ್ನು ಪೋಷಕಾಂಶ ಮಾಸವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಪೋಷಕಾಂಶ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ದೇಶದಲ್ಲಿ ಪ್ರತಿ ದಿನ ಐದು ಅಥವಾ ಅದಕ್ಕಿಂತ ಕಡಿಮೆ ವರ್ಷದ 6 ಸಾವಿರಕ್ಕೂ ಹೆಚ್ಚಿನ ಮಕ್ಕಳು ಮೃತಪಡುತ್ತಾರೆ. ಈ ಸಾವಿಗೆ ಮೊದಲ ಕಾರಣವೆಂದರೆ ಅದು ಪೋಷಣೆಯ ಕೊರತೆ . ಅಂದರೆ ಮಕ್ಕಳು ವಿಟಮಿನ್ ಎ, ಕಬ್ಬಿಣ, ಝಿಂಕ್ ಮತ್ತು ಫೋಲಿಕ್ ಆ್ಯಸಿಡ್ ಮುಂತಾದ ಪೋಷಕಾಂಶಗಳ ಕೊರತೆಯಿಂದ ಬಳಲಿ ಮೃತಪಟ್ಟಿದ್ದಾರೆ. ಮಕ್ಕಳ ಕತೆ ಇಲ್ಲಿಗೆ ಕೊನೆಯಾದರೆ ವಯಸ್ಸಾದವರೂ ಕೂಡ ಪೋಷಣೆಗಳ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಹೀಗಾಗಿ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ನೀವು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕಾದ ಐದು ಅಂಶಗಳು ಇಂತಿವೆ

ಪೂರ್ಣ ಧಾನ್ಯಗಳು: ಶಕ್ತಿಯ ಅಂಶವು ಧಾನ್ಯಗಳು ಮತ್ತು ಫ್ಯಾಟ್(ಕೊಬ್ಬು)ಗಳಿಂದ ಬರುತ್ತದೆ. ಸಂಸ್ಕರಿತ ಆಹಾರಗಳ ಬದಲಿಗೆ ಸಂಪೂರ್ಣ ಧಾನ್ಯಗಳ ಆಯ್ಕೆ ಮಾಡಿಕೊಳ್ಳಬೇಕು. ಸಂಸ್ಕರಿತ ಆಹಾರಗಳಲ್ಲಿ ನೈಸರ್ಗಿಕ ನಾರಿನಂಶಗಳ ಕೊರತೆ ಇರುವುದರಿಂದ ಅವುಗಳ ಸೇವನೆ ಮಲಬದ್ಧತೆಗೆ ದಾರಿ ಮಾಡಿಕೊಡುತ್ತದೆ. ಸಾಧಾರಣ ವಾತಾವರಣದ ತಾಪಮಾನದಲ್ಲಿ ದ್ರವವಾಗಿರುವ ಆರೋಗ್ಯಕರ ಫ್ಯಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಹೋಲ್‌ವೀಟ್ ಬ್ರೆಡ್‌ಗಳು, ಬಿಸ್ಕೆಟ್‌ಗಳು, ಪಾಸ್ತಾಗಳು, ಫೋರ್ಟಿಫೈಡ್ ಸೀರಿಯಲ್‌ಗಳು, ವೀಟ್ ಫ್ಲೇಕ್‌ಗಳು, ಸಿರಿಧಾನ್ಯಗಳು, ಡ್ರೈ ಫ್ರೂಟ್‌ಗಳು, ಆಯಿಲ್‌ಸೀಡ್‌ಗಳು ಮತ್ತು ಪುಫಾ ಮತ್ತು ಮುಫಾಗಳನ್ನು ಒಳಗೊಂಡ ತೈಲಗಳ ಸೇವನೆಗೆ ಪ್ರಯತ್ನಿಸಿ.

ಪ್ರೊಟೀನ್ ಸಮೃದ್ಧ ಆಹಾರಗಳು: ಕಡಿಮೆ ಕೊಬ್ಬಿನಂಶ ಇರುವ ಮಾಂಸ(ಲೀನ್ ಮೀಟ್), ಕೋಳಿ, ಬಿಳಿ ಮೀನು (ವೈಟ್ ಫಿಶ್), ಬೇಯಿಸಿದ ಬೀನ್ಸ್ (ಕುಕ್ಡ್ ಬೀನ್ಸ್), ಮೊಟ್ಟೆಯಲ್ಲಿನ ಬಿಳಿ ಅಂಶ (ಎಗ್ ವೈಟ್ಸ್), ಪೀನಟ್ ಬಟರ್, ನಟ್ಸ್ ಮತ್ತು ಎಣ್ಣೆ ಬೀಜಗಳ ಸೇವನೆ ಮಾಡಿ. ದೈನಂದಿನ ಚಟುವಟಿಕೆಯಿಂದ ದೇಹದಲ್ಲಿ ನಷ್ಟವಾಗುವ ಪ್ರೋಟೀನ್‌ಗಳ ಮರುಪೂರಣಕ್ಕಾಗಿ ಪ್ರೋಟೀನ್ ಸೇವನೆಯ ಅಗತ್ಯವಿರುತ್ತದೆ. ಇದಲ್ಲದೇ ದೇಹದಲ್ಲಿ ಎನ್‌ಜೈಮ್‌ಗಳು ಮತ್ತು ಹಾರ್ಮೋನ್‌ಗಳ ಉತ್ಪಾದನೆಗೂ ಕೂಡ ಪ್ರೋಟೀನ್ ಅವಶ್ಯಕ.

ಕಾಲ್ಸಿಯಮ್​ ಯುಕ್ತ ಆಹಾರ: ಕ್ಯಾಲ್ಸಿಯಮ್ ದೇಹದಲ್ಲಿನ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಅಂಶವಾಗಿದೆ. ಅಲ್ಲದೇ ಅಸ್ತಿರಂಧ್ರತೆ(ಓಸ್ಟಿಯೋಪೊರೋಸಿಸ್) ಮತ್ತು ಮೂಳೆ ಮುರಿತವನ್ನು ತಡೆಯಲು ಕ್ಯಾಲ್ಸಿಯಂ ಅವಶ್ಯಕವಾಗಿರುತ್ತದೆ. ಸ್ಕಿಮ್ ಮಿಲ್ಕ್, ಯೋಗರ್ಟ್, ಚೀಸ್, ಸೋಯ್‌ಮಿಲ್ಕ್, ಟೋಫು, ಬಾದಾಮಿ, ಬ್ರಾಕೋಲಿ, ಸೊಪ್ಪು ಮುಂತಾದ ಹಸಿರು ತರಕಾರಿ ಹಾಗೂ ಸಣ್ಣ ಮೀನು ಮೊದಲಾದವುಗಳ ಸೇವೆನೆ ಮಾಡಿ . ದೇಹ ಹೆಚ್ಚಿನ ಕ್ಯಾಲ್ಸಿ ಯಮ್ ಹೀರಿಕೊಳ್ಳಲು ವಿಟಮಿನ್ ಡಿ ನೆರವಾಗುತ್ತದೆ. ಸೂರ್ಯನ ಬೆಳಕಿಗೆ ತೆರೆದುಕೊಳ್ಳುವುದರಿಂದ ನಿಮಗೆ ಸಾಕಷ್ಟು ವಿಟಮಿನ್ ಡಿ ದೊರೆಯುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶ ಸಾಮಾನ್ಯಕ್ಕಿಂತ ಕಡಿಮೆ ಮಟ್ಟದಲ್ಲಿದ್ದರೆ, ನಿಮಗೆ ಬದಲಿ ಆಹಾರ ಪದಾರ್ಥಗಳ ಅಗತ್ಯವಿರುತ್ತದೆ.

ಹಸಿರು ತರಕಾರಿ: ನಾರಿನಂಶ ಎನ್ನುವುದು ಮುಖ್ಯವಾಗಿ ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳಿಂದ ಲಭಿಸುತ್ತದೆ. ಹಸಿ ಮತ್ತು ಬೇಯಿಸಿದ ತರಕಾರಿಗಳು, ವೆಜ್ ಸ್ಮೂದಿಗಳು, ತರಕಾರಿ ಸೂಪ್‌ಗಳು, ತಾಜಾಹಣ್ಣುಗಳನ್ನು ಸೇವಿಸಿ. ಆಹಾರಕ್ರಮದಲ್ಲಿ ಬೇರೆಬೇರೆ ಬಣ್ಣಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಿರಿ. ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಚಲನೆಯಲ್ಲಿನ ಕೊರತೆ, ಸಾಕಷ್ಟು ಪ್ರಮಾಣದ ಕ್ಯಾಲೊರಿಗಳ ಸೇವನೆ ಇಲ್ಲದಿರುವುದು ಮತ್ತು ಆಹಾರಕ್ರಮದಲ್ಲಿ ನಾರಿನಂಶಗಳ ಕೊರತೆ ಅಥವಾ ಆಹಾರವನ್ನು ಜಗಿಯುವಲ್ಲಿ ಮತ್ತು ನುಂಗುವಲ್ಲಿ ಕಷ್ಟವಾಗುವುದರಿಂದ ಅಥವಾ ಯಾವುದೇ ರೋಗದ ಪರಿಸ್ಥಿತಿಯಿಂದ ಮಲಬದ್ಧತೆ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ : Health Benefits of Cereals: ಸಿರಿ ಧಾನ್ಯಗಳನ್ನೇಕೆ ತಿನ್ನಬೇಕು ಗೊತ್ತೇ?

ನೀರು: ಪ್ರತಿ ದಿನ 10ರಿಂದ 12 ಲೋಟಗಳಷ್ಟು ದ್ರವ ಸೇವನೆಯ ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಿ. ಮಲಬದ್ಧತೆ(ಕಾನ್‌ಸ್ಟಿಪೇಷನ್), ನಿರ್ಜಲೀಕರಣ(ಡಿಹೈಡ್ರೇಷನ್), ಪದೇ ಪದೇ ಕಾಣಿಸಿಕೊಳ್ಳುವ ಮೂತ್ರ ಮಾರ್ಗದಲ್ಲಿನ ಸೋಂಕು (ಯೂರಿನರಿ ಟ್ರ್ಯಾಕ್ಟ್​​ ಇನ್‌ಫೆಕ್ಷನ್)ಗಳಿಗೆ ಹಿರಿಯ ವಯಸ್ಕರು ಅಥವಾ ವೃದ್ಧರು ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಯಸ್ಸಾದಂತೆ ದಾಹದ ಭಾವನೆ ಕಡಿಮೆಯಾಗುತ್ತದೆ. ಇದರಿಂದ ಅವರು ಕಡಿಮೆ ನೀರು ಸೇವಿಸುವಂತಾಗುತ್ತದೆ. ಮೂತ್ರ ವಿಸರ್ಜನೆಯಲ್ಲಿ ನಿಯಂತ್ರಣ ಇಲ್ಲದಿರುವುದರ(ಯೂರಿನರಿ ಇನ್‌ಕಾಂಟಿನೆನ್ಸ್) ಭಯ ಯಾವಾಗಲೂ ಕಾಡುತ್ತದೆ. ಆದ್ದರಿಂದ ವಯಸ್ಸಾಗುತ್ತಿದ್ದಂತೆ ನೀರಿನ ಸೇವನೆ ಕಡಿಮೆಯಾಗುತ್ತಿರುತ್ತದೆ.

Exit mobile version