Site icon Vistara News

Lifestyle Diseases | ಬದಲಾದ ಜೀವನ ವಿಧಾನ, 50 ಕೋಟಿ ಜನಕ್ಕೆ ರೋಗ ಬರಲಿವೆ, ಇನ್ನಾದರೂ ನಿಧಾನ

Lifestyle Diseases

ವಾಷಿಂಗ್ಟನ್‌: ಬಹುತೇಕರ ಜೀವನ ವಿಧಾನ ಭಾಗಶಃ ಬದಲಾಗಿದೆ. ಆಧುನಿಕ ಜೀವನ ಶೈಲಿ ಮೈಗೂಡಿದೆ. ನಗರಗಳಲ್ಲಿ ವಾಸಿಸುತ್ತಿರುವವರಂತೂ ಒತ್ತಡದ ಕೆಲಸ, ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆ ಕಳೆದುಹೋಗಿದ್ದಾರೆ. ಸಿಗುವ ಎರಡು ದಿನದ ರಜೆಯಲ್ಲಿ ಜಂಕ್‌ಫುಡ್‌ನಲ್ಲಿ, ಕಿವಿಗಡಚಿಕ್ಕುವ ಶಬ್ದಗಳು ಹೊರಹೊಮ್ಮಿಸುವ ಹಾಡುಗಳನ್ನು ಕೇಳುತ್ತ ಪಾರ್ಟಿಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಓಡುವ ಲೋಕದಲ್ಲಿ ಹಿಂದೆ ಬೀಳಬಾರದೆಂದು ಎಲ್ಲರೂ ಓಟಕ್ಕಿತ್ತಿರುವ ಕಾರಣ ಸಣ್ಣ ವಯಸ್ಸಿನಲ್ಲಿಯೇ ಬೊಜ್ಜು, ಹೃದಯ ಸಂಬಂಧಿ ಕಾಯಿಲೆ ಸೇರಿ ದೇಹವೆಂಬುದು ಹತ್ತಾರು ರೋಗಗಳ (Lifestyle Diseases) ಗೂಡಾಗುತ್ತಿದೆ.

ಇದು ಸದ್ಯದ ಪರಿಸ್ಥಿತಿಯಾದರೆ ಭವಿಷ್ಯದ ದಿನಗಳು ಇನ್ನೂ ಕರಾಳವಾಗಿರಲಿವೆ ಎಂಬುದರ ಎಚ್ಚರಿಕೆ ಸಿಕ್ಕಿದೆ. ಹೌದು, 2030ರ ವೇಳೆಗೆ ಜೀವನ ವಿಧಾನ ಸಂಬಂಧಿ ಅಂದರೆ, ಹೃದಯದ ಕಾಯಿಲೆ, ಸಕ್ಕರೆ ಕಾಯಿಲೆ, ಬೊಜ್ಜು ಸೇರಿ ಹತ್ತಾರು ಕಾಯಿಲೆಗಳು ಬರಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ನೂತನ ವರದಿಯು ಎಚ್ಚರಿಕೆ ನೀಡಿದೆ. ಹೀಗೆ ಕಾಯಿಲೆಗೊಳಗಾಗುವವರ ಸಂಖ್ಯೆ 50 ಕೋಟಿ ಎಂದು ತಿಳಿಸಿರುವುದು ಆತಂಕ ಮೂಡಿಸಿದೆ.

ಎಲ್ಲ ದೇಶಗಳಿಗೂ ಎಚ್ಚರಿಕೆಯ ಗಂಟೆ

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವುದರಿಂದ ದೈಹಿಕ ಚಟುವಟಿಕೆಯು ಕ್ಷೀಣವಾಗಿದೆ. ಇದು ಭಾರತ ಸೇರಿ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇದರಿಂದ ಮನುಷ್ಯರ ಆರೋಗ್ಯದ ಜತೆಗೆ ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಮೇಲೆ ಗಣನೀಯವಾಗಿ ಪರಿಣಾಮ ಬೀರಲಿದೆ. ವಾರ್ಷಿಕ ಆರೋಗ್ಯಕ್ಕಾಗಿಯೇ 27 ಶತಕೋಟಿ ಡಾಲರ್‌ ವ್ಯಯಿಸಬೇಕಾಗುತ್ತದೆ. ಹಾಗಾಗಿ, ಆಯಾ ದೇಶಗಳ ಸರ್ಕಾರಗಳು ಜನರ ದೈಹಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಜನರೂ ತಮ್ಮ ಜೀವನ ಶೈಲಿಯನ್ನು, ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ ಎಂದು ಸಲಹೆ ನೀಡಿದೆ.

ಇದನ್ನೂ ಓದಿ | Bad dreams | ಪದೇ ಪದೇ ದುಃಸ್ವಪ್ನ ಬೀಳುತ್ತಿದೆಯೇ? ಇದು ಮರೆವಿನ ಕಾಯಿಲೆಯ ಲಕ್ಷಣ!

Exit mobile version