Site icon Vistara News

Kitchen Tips : ಅಡುಗೆ ಮನೆಯಿಂದ ಜಿರಲೆಗಳನ್ನು ಓಡಿಸಬೇಕೆ? ಇಲ್ಲಿವೆ ಸರಳ ಉಪಾಯಗಳು!

remedies that prevent cockroaches

ಅಡುಗೆ ಮನೆಯನ್ನು ಪ್ರತಿನಿತ್ಯ ಸ್ವಚ್ಛ ಮಾಡಿದರೂ ಜಿರಲೆಗಳು ಮಾತ್ರ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅವುಗಳನ್ನು ಓಡಿಸಲೆಂದು ಗೃಹಿಣಿಯರು ಮಾಡುವ ಸಾಹಸ ಒಂದೆರಡಲ್ಲ. ಅದೆಷ್ಟೇ ಸ್ವಚ್ಛ ಮಾಡಿದರೂ ಈ ಜಿರಲೆಗಳು ಎಲ್ಲಿಂದ ಬರುತ್ತಿವೆ ಎನ್ನುವುದೇ ಅಚ್ಚರಿ! ನಾವು ಬಳಸುವ ಸಿಂಕ್‌ನ ಡ್ರೈನೇಜ್‌ನಲ್ಲಿ, ಕಪಾಟುಗಳ ಸಂದಿಯಲ್ಲಿ ಜಿರಲೆಗಳು ತಮ್ಮ ವಾಸವನ್ನು ಹುಡುಕಿಕೊಳ್ಳುತ್ತವೆ. ಹಾಗಾದರೆ ಈ ಜಿರಲೆಗಳಿಂದ ಮುಕ್ತಿ ಪಡೆಯುವುದಕ್ಕೆ ಏನು ಮಾಡಬೇಕು? ಏನು ಮಾಡಿದರೆ ಈ ಜಿರಲೆ ಮತ್ತೆ ಕಾಣಿಸಿಕೊಳ್ಳದು ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕಾಗಿಯೇ ಹಲವು ಉಪಾಯಗಳನ್ನು ನಾವಿಲ್ಲಿ (Kitchen Tips) ಹೇಳಿದ್ದೇವೆ.

ಬಿಸಿ ನೀರು ಮತ್ತು ವಿನೇಗರ್‌

ಜಿರಲೆ ಕಾಟ ತಪ್ಪಿಸಿಕೊಳ್ಳಲು ನೀವು ದುಬಾರಿ ವೆಚ್ಚದ ಔಷಧಿಗಳನ್ನು ತರಬೇಕೆಂದೇನಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಅವುಗಳನ್ನು ಓಡಿಸಬಹುದು. ಅದರಲ್ಲಿ ಒಂದು ಉಪಾಯವೆಂದರೆ ಬಿಸಿ ನೀರು ಮತ್ತು ವಿನೇಗರ್‌. ಒಂದು ಕಪ್‌ನಷ್ಟು ಬಿಸಿ ನೀರಿಗೆ ಸ್ವಲ್ಪ ವಿನೇಗರ್‌ ಸೇರಿಸಿಕೊಳ್ಳಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಅದರಿಂದ ಅಡುಗೆ ಮನೆಯನ್ನು ಸ್ವಚ್ಛ ಮಾಡಿ. ಹಾಗೆಯೇ ಅಡುಗೆ ಮನೆಯ ಸಿಂಕ್‌ನಲ್ಲೂ ಅದನ್ನು ಸುರಿಯಿರಿ. ಪೂರ್ತಿ ರಾತ್ರಿ ಈ ರೀತಿ ಮಿಶ್ರಣ ಅಲ್ಲಿಯೇ ಉಳಿದುಕೊಂಡರೆ ಜಿರಲೆಗಳಿಗೆ ಅದು ಬಿಸಿ ಮುಟ್ಟಿಸುತ್ತದೆ! ಅವು ಮತ್ತೆ ಅಡುಗೆ ಮನೆಯ ಸುದ್ದಿಗೆ ಬರಲು ಹೋಗುವುದಿಲ್ಲ.

ಇದನ್ನೂ ಓದಿ: Poisonous Mushroom : ಕಾಡು ಅಣಬೆ ತಿಂದು ಮೂವರ ಸಾವು; ಅಡುಗೆ ಮಾಡಿದ್ದ ಸೊಸೆ ಮಾತ್ರ ಬಚಾವ್‌!

ಬಿಸಿ ನೀರು, ನಿಂಬೆ ಹಣ್ಣು ಮತ್ತು ಬೇಕಿಂಗ್‌ ಸೋಡ


ಒಂದು ಪೂರ್ತಿ ನಿಂಬೆ ರಸವನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚದಷ್ಟು ಬೇಕಿಂಗ್‌ ಸೋಡಾ ಸೇರಿಸಿಕೊಳ್ಳಿ. ಆ ಮಿಶ್ರಣಕ್ಕೆ ಒಂದು ಲೀಟರ್‌ನಷ್ಟು ನೀರು ಸೇರಿಸಿ. ಚೆನ್ನಾಗಿ ಕಲಸಿ ಅದನ್ನು ಡ್ರೈನ್‌ ಔಟ್‌ಲೆಟ್‌ನಲ್ಲಿ ಸುರಿಯಿರಿ. ಹಾಗೆಯೇ ಸಿಂಕಿನ ಕೆಳಭಾಗದವನ್ನೂ ಆ ಮಿಶ್ರಣದಿಂದ ತೊಳೆಯಿರಿ. ಇದರಿಂದ ಜಿರಲೆಗಳು ಸಾಯುವುದಲ್ಲದೆ, ಅದರ ಮರಿಗಳೇನಾದರೂ ಇದ್ದರೆ ಅವು ಕೂಡ ನಾಶವಾಗುತ್ತವೆ.

ಬೋರಿಕ್‌ ಆಸಿಡ್‌ ಮತ್ತು ಸಕ್ಕರೆ

ಇದು ಬಹಳ ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ ಉಪಾಯ. ಸ್ವಲ್ಪ ಬೋರಿಕ್‌ ಆಸಿಡ್‌ಗೆ ಸಕ್ಕರೆಯನ್ನು ಮಿಶ್ರಣ ಮಾಡಿ. ನಂತರ ಅದನ್ನು ಜಿರಲೆಗಳು ಇರಬಹುದಾದ ಎಲ್ಲ ಸ್ಥಳಗಳಲ್ಲಿ ಇರಿಸಿ. ಸಕ್ಕರೆಯಾಂಶ ಜಿರಲೆಗಳನ್ನು ಹತ್ತಿರ ಸೆಳೆದರೆ ಬೋರಿಕ್‌ ಆಸಿಡ್‌ ಜಿರಲೆಗಳನ್ನು ಸಾಯಿಸುತ್ತವೆ.

ಕೆಲವು ಬಗೆಯ ಎಣ್ಣೆ ಬಳಸಿ, ಜಿರಲೆ ಓಡಿಸಿ


ಕೆಲವು ಎಣ್ಣೆಗಳನ್ನು ನೀವು ನಿಮ್ಮ ಮುಖದ ಕಾಂತಿ ಹೆಚ್ಚಲಿ ಎಂದು ಬಳಸುತ್ತೀರಿ. ಆದರೆ ವಿಶೇಷವೆಂದರೆ ಜಿರಲೆಗಳಿಂದ ಮುಕ್ತಿ ಪಡೆಯುವುದಕ್ಕೂ ಕೆಲವು ಎಣ್ಣೆಗಳು ಸಹಕಾರಿಯಾಗಿವೆ. ಲ್ಯಾವೆಂಡರ್‌ ಎಣ್ಣೆ ಅಥವಾ ಪುದೀನಾ ಎಣ್ಣೆಯನ್ನು ನಿಮ್ಮ ಅಡುಗೆ ಮನೆಯಲ್ಲಿ ಅಲ್ಲಲ್ಲಿ ಚಿಮುಕಿಸಿ. ಈ ಎಣ್ಣೆಗಳ ವಾಸನೆಯನ್ನು ತಡೆಯಲಾರದೆ ಜಿರಲೆಗಳು ಓಡಿ ಹೋಗುತ್ತವೆ. ನಂತರ ನೀವು ಅಡುಗೆ ಮನೆಯನ್ನು ಸ್ವಚ್ಛ ಮಾಡಿಕೊಳ್ಳಿ.

ಇದನ್ನೂ ಓದಿ: Murder Attempt : JDS ಮುಖಂಡನ ಕೊಲೆಗೆ ಪ್ರಾಣ ಸ್ನೇಹಿತನಿಂದಲೇ ಸುಪಾರಿ! ಬೆಂಗಳೂರಿಂದ ಬಂದಿದ್ದರು KILLERS

ಸೌತೆಕಾಯಿ

ಸೌತೆಕಾಯಿ ಮನುಷ್ಯರಿಗೆ ತುಂಬ ಒಳ್ಳೆಯ ತರಕಾರಿ. ದೇಹದ ಉಷ್ಣಾಂಶ ತಗ್ಗಿಸಲು ಇದು ಸಹಕಾರಿ ಎನ್ನುವುದು ನಿಮಗೆ ತಿಳಿದಿದೆ. ಆದರೆ ಈ ಸೌತೆಕಾಯಿಯ ವಾಸನೆ ಎಂದರೆ ಜಿರಲೆಗಳಿಗೆ ಒಂಚೂರೂ ಇಷ್ಟವಾಗುವುದಿಲ್ಲ. ಜಿರಲೆಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆಯೋ ಆ ಸ್ಥಳಗಳಲ್ಲಿ ಸೌತೆಕಾಯಿಯ ಸಣ್ಣ ತುಂಡುಗಳನ್ನು ಇಟ್ಟು ನೋಡಿ. ಸೌತೆಕಾಯಿಯ ವಾಸನೆಗೆ ಹೆದರುವ ಜಿರಲೆಗಳು ನಿಮ್ಮ ಅಡುಗೆ ಮನೆಯನ್ನು ಬಿಟ್ಟು ಓಡಿಹೋಗುತ್ತವೆ.

ಕಹಿ ಬೇವು


ಕಹಿ ಬೇವು ಜಿರಲೆಗಳನ್ನು ಓಡಿಸುವಲ್ಲಿ ಎತ್ತಿದ ಕೈ. ಒಂದಿಷ್ಟು ಕಹಿ ಬೇವಿನ ಸೊಪ್ಪನ್ನು ನಿಮ್ಮ ಅಡುಗೆ ಮನೆಯಲ್ಲಿ ಇಟ್ಟು ನೋಡಿ. ಮೂರು ದಿನಗಳಲ್ಲಿ ಜಿರಲೆಗಳು ಮಾಯವಾಗುತ್ತವೆ. ಅಥವಾ ಕಹಿ ಬೇವಿನ ಎಣ್ಣೆಯನ್ನೂ ನೀವು ಈ ಕೆಲಸಕ್ಕೆ ಬಳಸಬಹುದು. ಕಹಿ ಬೇವಿನ ಎಣ್ಣೆಯನ್ನು ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಅಡುಗೆ ಮನೆಯಲ್ಲಿ ಜಿರಲೆಗಳು ಇರುವ ಸ್ಥಳದಲ್ಲಿ ಚಿಮುಕಿಸಿ. ಇದರಿಂದಲೂ ಜಿರಲೆಗಳು ಓಡಿಹೋಗುತ್ತವೆ.

ದಾಲ್ಚಿನ್ನಿ


ದಾಲ್ಚಿನ್ನಿ ಕೂಡ ನಿಮ್ಮ ಅಡುಗೆ ಮನೆಯಿಂದ ಜಿರಲೆಗಳನ್ನು ಓಡಿಸಬಲ್ಲದು. ದಾಲ್ಚಿನ್ನಿಯ ಪುಡಿಯನ್ನು ಅಡುಗೆ ಮನೆಯ ಅಲ್ಲಲ್ಲಿ ಚಿಮುಕಿಸಿ ಇಡಿ. ದಾಲ್ಚಿನ್ನಿಯ ವಾಸನೆಯಿಂದಾಗಿ ಜಿರಲೆಗಳು ಅಡುಗೆ ಮನೆಯಿಂದ ಓಡಿ ಹೋಗಲಾರಂಭಿಸುತ್ತವೆ.

Exit mobile version