ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವಿಂಟರ್ ಸೀಸನ್‌ನ (Winter Fashion) ಹೈ ಫ್ಯಾಷನ್‌ನಲ್ಲಿ 3 ಶೈಲಿಯ ಲೇಯರ್ ಲುಕ್ ಟ್ರೆಂಡಿಯಾಗಿದೆ. ಒಂದರ ಮೇಲೊಂದರಂತೆ ಔಟ್‌ಫಿಟ್ ಧರಿಸಿದಾಗಲೂ ಆಕರ್ಷಕವಾಗಿ ಕಾಣುವಂತಹ ಈ ಲೇಯರ್ ಲುಕ್ ಸದ್ಯದ ಫ್ಯಾಷನ್‌ನಲ್ಲಿ ಹಂಗಾಮ ಎಬ್ಬಿಸಿದೆ.
ಆಕರ್ಷಕವಾಗಿರಲಿ ಲೇಯರ್ ಲುಕ್
“ಪ್ರತಿ ಬಾರಿಯೂ ವಿಂಟರ್ ಸೀಸನ್‌ನಲ್ಲಿ ನಾನಾ ಬಗೆಯ ಲೇಯರ್ ಲುಕ್‌ಗಳು ಟ್ರೆಂಡಿಯಾಗುತ್ತವೆ. ಊಹೆಗೂ ಮೀರಿದ ವಿನ್ಯಾಸದಲ್ಲಿ ಬಗೆಬಗೆಯ ಸ್ಟೈಲಿಂಗ್‌ನಲ್ಲಿ ಸ್ಟೈಲಿಸ್ಟ್‌ಗಳು ಡಿಕ್ಲೇರ್ ಮಾಡುತ್ತಾರೆ. ಅಷ್ಟೇಕೆ! ಫ್ಯಾಷನ್ ಪ್ರಿಯ ಹುಡುಗಿಯರು ಕೂಡ ತಮ್ಮದೇ ಆದ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾ ಮೂಲಕ ಇನ್‌ಫ್ಲೂಯೆನ್ಸ್ ಮಾಡುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಜೆನ್ ಜಿ ಹುಡುಗಿಯರು ಮಾತ್ರವಲ್ಲ, ಕಾರ್ಪೋರೇಟ್ ಕ್ಷೇತ್ರದ ಯುವತಿಯರು ವಿಂಟರ್ ಫ್ಯಾಷನ್‌ನಲ್ಲಿ ಲೇಯರ್ ಲುಕ್ ಸ್ಟೈಲಿಂಗ್ ಪ್ರಯೋಗಿಸತೊಡಗಿದ್ದಾರೆ “ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್ ವರ್ಮಾ. ಅವರ ಪ್ರಕಾರ, ಲೇಯರ್ ಲುಕ್ ನೋಡಲು ಆಕರ್ಷಕವಾಗಿ ಕಾಣಬೇಕೇ! ಹೊರತೂ ಮೈ ಮೇಲೆ ಬೆಡ್‌ಶೀಟ್ ಹೊದ್ದುಕೊಂಡಂತೆ ಕಾಣಿಸಕೂಡದು ಎನ್ನುತ್ತಾರೆ.
ಸ್ಕರ್ಟ್ ಜೊತೆ ಲೇಯರ್ ಲುಕ್
ಮಿನಿ ಸ್ಕರ್ಟ್ ಅಥವಾ ನೀ ಲೆಂಥ್ ಸ್ಕರ್ಟ್ ಜೊತೆ ಲೇಯರ್ ಲುಕ್ ಮಾಡುವ ಸ್ಟೈಲಿಂಗ್ ಇದೀಗ ಹೆಚ್ಚು ಪ್ರಚಲಿತದಲ್ಲಿದೆ. ನಾಲ್ಕು ಔಟ್‌ಫಿಟ್‌ಗೂ ಹೆಚ್ಚು ಲೇಯರ್ ಮಾಡುವ ಈ ಫ್ಯಾಷನ್ ಸದ್ಯ ಔಟಿಂಗ್ ಫ್ಯಾಷನ್ ಟ್ರೆಂಡ್‌ನಲ್ಲಿದೆ. ಸ್ಕರ್ಟ್ ಮೇಲೆ ಕ್ರಾಪ್ ಟಾಪ್, ಸ್ಕರ್ಟ್ ಕೆಳಗೆ ಸ್ಟಾಕಿಂಗ್ಸ್ ಅಥವಾ ಲೆಗ್ಗಿಂಗ್ಸ್ ಎಲ್ಲರದರ ಮೇಲೊಂದು ಟ್ರೆಂಚ್ ಕೋಟ್ ಅಥವಾ ಲಾಂಗ್ ಕೋಟ್ ಧರಿಸುವುದು ಮಲ್ಟಿ ಲೇಯರ್‌ಗೆ ಸಾಥ್ ನೀಡುತ್ತದೆ. ಇದನ್ನು ಸರಿಯಾದ ಮ್ಯಾಚಿಂಗ್ ಅಥವಾ ಕಾಂಟ್ರಾಸ್ಟ್ ಶೇಡ್ ಔಟ್‌ಫಿಟ್‌ಗಳೊಂದಿಗೆ ಮಾಡಿದಾಗ ಮಾತ್ರ ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ.
ಪ್ಯಾಂಟ್ ಜೊತೆ ಲೇಯರ್ ಸ್ಟೈಲಿಂಗ್
ವಿಂಟರ್‌ನಲ್ಲಿ ಆದಷ್ಟೂ ಟೈಟ್ ಅಥವಾ ಸ್ಲಿಮ್ ಫಿಟ್ ಪ್ಯಾಂಟನ್ನು ಲೇಯರ್ ಲುಕ್‌ಗೆ ಬಳಸಬೇಕು. ದೊಗಲೆ ಪ್ಯಾಂಟ್ ಚೆನ್ನಾಗಿ ಕಾಣುವುದಿಲ್ಲ. ಇನ್ನು ಪ್ಯಾಂಟ್ ಮೇಲೆ ಎಂದಿನಂತೆ ಕ್ರಾಪ್ ಟಾಪ್ ಧರಿಸಬಹುದು. ಅದರ ಮೇಲೆ ಕ್ರಾಪ್ ಜಾಕೆಟ್ ಅಥವಾ ವಿಂಟರ್ ಜಾಕೆಟ್ಸ್ ಧರಿಸಬಹುದು. ಇದು ಅತ್ಯಂತ ಸುಲಭ ವಿಧಾನದ ಲೇಯರ್ ಸ್ಟೈಲಿಂಗ್.
ಮಿಡಿ ಜೊತೆ ಲೇಯರ್ ಲುಕ್
ಇನ್ನು ಮಿಡಿ ಜೊತೆಯೂ ಲೇಯರ್ ಲುಕ್ ಮಾಡಬಹುದು. ಅಷ್ಟೇಕೆ! ನಿಮ್ಮ ಬಳಿ ಶಾರ್ಟ್ ಫ್ರಾಕ್ ಇದ್ದಲ್ಲಿ ಅದನ್ನೂ ಲೇಯರ್ ಲುಕ್ ಜೊತೆ ಸೇರಿಸಿಕೊಳ್ಳಬಹುದು. ಆದರೆ, ಧರಿಸುವ ಪ್ಯಾಂಟ್ ತೆಳುವಾಗಿರಬೇಕು ಅಥವಾ ಸ್ಟಾಕಿಂಗ್ಸ್ ಧರಿಸಬೇಕು. ಇನ್ನು ಇದರ ಮೇಲೆ ಲಾಂಗ್ ಕೋಟ್ ಧರಿಸುವುದು ಸೂಕ್ತ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Mens Fashion Tips: ಚಳಿಗಾಲದ ಫ್ಯಾಷನ್‌ನಲ್ಲಿ ಪುರುಷರು ಗಮನಿಸಬೇಕಾದ 5 ಸಂಗತಿಗಳು