Site icon Vistara News

Wedding jewellery Fashion | ಮದುಮಗಳ ಗ್ರ್ಯಾಂಡ್‌ ಲುಕ್‌ಗೆ ಇರಲಿ ಮಲ್ಟಿ ಲೇಯರ್ಡ್‌ ಹಾರ

Wedding jewellery Fashion

– ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೆಡ್ಡಿಂಗ್‌ ಸೀಸನ್‌ನ ಈ ಬಾರಿಯ ಜ್ಯುವೆಲ್‌ ಟ್ರೆಂಡ್‌ನಲ್ಲಿ (Wedding jewellery Fashion)ಮಲ್ಟಿ ಲೇಯರ್ಡ್‌ ಹಾರ ಹಾಗೂ ನೆಕ್ಲೇಸ್‌ಗಳು ಟ್ರೆಂಡಿಯಾಗಿವೆ. ಮದುಮಗಳಿಗೆ ಗ್ರ್ಯಾಂಡ್‌ ಲುಕ್‌ ನೀಡುವ ಈ ಆಭರಣಗಳು ಈ ಸೀಸನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಉದಾಹರಣೆಗೆ., ನಾಲ್ಕೈದು ಎಳೆಯ ಮೋಹನ ಮಾಲೆ, ಮುತ್ತಿನ ಮಾಲೆ, ಅಗಲವಾದ ಹಾರದ ಮಧ್ಯದಲ್ಲಿ ಮುತ್ತಿನ ಸರ, ಇದಕ್ಕೆ ಹೊಂದಿಕೊಂಡಂತೆ ಸರಪಳಿಯಂತಹ ಚೈನ್‌. ಮಧ್ಯೆ ಮಧ್ಯೆ ಆ್ಯಂಟಿಕ್‌ ವಿನ್ಯಾಸದ ಸೈಡ್‌ ಪೆಂಡೆಂಟ್‌ ಹೀಗೆ ನಾನಾ ವಿನ್ಯಾಸದ ಮಲ್ಟಿ ಲೇಯರ್ಡ್‌ ನೆಕ್‌ಲೇಸ್‌ ಹಾಗೂ ಹಾರಗಳು ಆಭರಣ ಲೋಕಕ್ಕೆ ಎಂಟ್ರಿ ನೀಡಿವೆ.

ಬಂಗಾರದಲ್ಲೂ ಟ್ರೆಂಡಿಯಾದ ಆಭರಣಗಳಿವು

ಇಂದು ಜ್ಯುವೆಲರಿ ಲೋಕದಲ್ಲಿ ಮಿಕ್ಸ್‌ ಮ್ಯಾಚ್‌ ಡಿಸೈನ್‌ ಕಾನ್ಸೆಪ್ಟ್‌ ಮೊದಲಿಗಿಂತ ಹೆಚ್ಚಾಗಿದೆ ಎನ್ನುವ ಜ್ಯುವೆಲ್‌ ಡಿಸೈನರ್‌ ಸಂತೋಷ್‌ ಪ್ರಕಾರ, ಬ್ರಾಂಡೆಡ್‌ ಜ್ಯುವೆಲರಿ ಸಂಸ್ಥೆಗಳು ಇಂತಹ ಸಾಹಸಕ್ಕೆ ಕೈ ಹಾಕುತ್ತವೆ. ಒಮ್ಮೆ ಈ ಡಿಸೈನ್‌ ಹಿಟ್‌ ಆಯಿತೆಂದರೆ ಮುಗಿಯಿತು. ಒಂದರ ಮೇಲೊಂದು ವಿನ್ಯಾಸಗಳು ಬಿಡುಗಡೆಗೊಳ್ಳುತ್ತವೆ. ಪಾಪ್ಯುಲರ್‌ ಲಿಸ್ಟ್‌ಗೆ ಸೇರುತ್ತವೆ. ಇದೀಗ ಅವುಗಳೇ ಬಂಗಾರದ ಆಭರಣಗಳಲ್ಲಿ ಬಂದಿವೆ ಎನ್ನುತ್ತಾರೆ.

ರ್ಯಾಂಪ್‌ನಲ್ಲಿ ಲೆಯರ್‌ ಜ್ಯುವೆಲರಿ ಪ್ರದರ್ಶನ

ಲೇಯರ್ಡ್‌ ಹಾರಗಳು ಟ್ರೆಂಡಿಯಾಗಲು ಕಾರಣ, ಬ್ರೈಡಲ್‌ವೇರ್‌ ಫ್ಯಾಷನ್‌ ಶೋಗಳು ಎಂದರೆ ಅತಿಶಯೋಕ್ತಿಯಾಗದು. ಮಾಡೆಲ್‌ಗಳು ಹಾಗೂ ಸಿನಿಮಾ ತಾರೆಯರು ವೈಭವಯುತ ಸಮಾರಂಭಗಳಿಗೆ ಈ ಡಿಸೈನ್‌ನ ಆಭರಣಗಳನ್ನು ಧರಿಸತೊಡಗಿದ್ದು ಈ ಟ್ರೆಂಡ್‌ ಪಾಪ್ಯುಲರ್‌ ಆಗಲು ಕಾರಣವಾಯಿತು ಎನ್ನುತ್ತಾರೆ ವಿನ್ಯಾಸಕರು.

ಮದುವೆಯ ಲೇಯರ್ಡ್ ಹಾರದ ಆಯ್ಕೆಗೂ ಮುನ್ನ

ಮಲ್ಟಿ ಲೇಯರ್ಡ್‌ ಹಾರ ಅಥವಾ ನೆಕ್ಲೇಸ್‌ಗಳನ್ನು ಆಯ್ದುಕೊಳ್ಳುವಾಗ ಒಂದಿಷ್ಟು ಅಂಶಗಳನ್ನು ಗಮನಿಸಬೇಕು. ಪರ್ಸನಾಲಿಟಿಗೆ ತಕ್ಕಂತೆ ಚೂಸ್‌ ಮಾಡಬೇಕು. ಯಾಕೆಂದರೆ, ಕುಳ್ಳಗಿರುವವರು ಆದಷ್ಟು ಲೇಯರ್‌ ಕಡಿಮೆ ಇರುವಂತದ್ದನ್ನು ಆಯ್ದುಕೊಳ್ಳಬೇಕು. ತೆಳ್ಳಗೆ ಉದ್ದಗಿರುವವರು ಎಷ್ಟು ಲೆಯರ್‌ನದ್ದಾದರೂ ಧರಿಸಬಹುದು. ಲೇಯರ್‌ಗಳು ಒಂದರ ಮೇಲೊಂದು ಇರುವ ಬದಲು ಒಂದಕ್ಕೊಂದು ಕೊಂಚ ಗ್ಯಾಪ್‌ ಇರಬೇಕು. ಇನ್ನು ಡಿಸೈನರ್‌ವೇರ್‌ಗೆ ತಕ್ಕಂತೆಯೂ ಅವುಗಳನ್ನು ಧರಿಸಬಹುದು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಶಾಲಿನಿ ಅದಿತ್ಯಾ.

ಬ್ರೈಡಲ್‌ ಲುಕ್‌ಗೆ ಸಹಕಾರಿ

ಮಲ್ಟಿ ಲೇಯರ್ಡ್‌ ಆಭರಣಗಳು ಬ್ರೈಡಲ್‌ ಲುಕ್‌ಗೆ ಸಹಕಾರಿ. ಅಷ್ಟು ಮಾತ್ರವಲ್ಲ, ಮದುವೆಯಾದ ನಂತರವೂ ಹಬ್ಬ-ಹರಿದಿನಗಳಲ್ಲೂ ಟ್ರೆಡಿಷನಲ್‌ ಉಡುಪುಗಳೊಂದಿಗೆ ಧರಿಸಬಹುದು. ಸಲ್ವಾರ್‌ಗಿಂತ ಇತರೇ ಟ್ರೆಡಿಷನಲ್‌ ಉಡುಪುಗಳಾದ ಸೀರೆ, ಲೆಹೆಂಗಾ, ಗಾಗ್ರ, ಲಾಚಾಗಳಿಗೆ ಪರ್ಫೆಕ್ಟ್ ಮ್ಯಾಚ್‌ ಆಗುತ್ತದೆ. ಗ್ರ್ಯಾಂಡ್‌ ಲುಕ್‌ ನೀಡುತ್ತದೆ.

ಮಲ್ಟಿ ಲೇಯರ್ಡ್‌ ಜ್ಯುವೆಲರಿ ಪ್ರಿಯರಿಗೆ ಸಲಹೆ

* ಹೇರ್‌ಸ್ಟೈಲ್ ಹಾಗೂ ಮೇಕಪ್‌ ನಂತರ ಲೇಯರ್ಡ್‌ ಹಾರ ಅಥವಾ ನೆಕ್ಲೇಸ್‌ ಧರಿಸಬೇಕು.

* ಧರಿಸಿದ ಸೀರೆ ಅಥವಾ ಉಡುಪನ್ನು ಲೇಯರ್ಡ್‌ ಹಾರಕ್ಕೆ ಮ್ಯಾಚ್‌ ಮಾಡಬೇಕು.

* ಒಂದು ಆಭರಣದ ಮೇಲೊಂದು ಓವರ್‌ಲ್ಯಾಪ್‌ ಆಗಬಾರದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Wedding attire | ವೆಡ್ಡಿಂಗ್‌ ಅಟೈರ್ ಆಯ್ಕೆ ಮಾಡಿದ ರಿಚಾ ಛಡ್ಡಾ

Exit mobile version