ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ಹಾಗೂ ಮಾಡೆಲ್ ತೇಜಸ್ವಿನಿ ಶರ್ಮಾ, ದೇಸಿ ಸೀರೆಯಲ್ಲಿ (Star Saree Fashion) ಸ್ಟ್ರೀಟ್ ಶಾಪಿಂಗ್ ಮಾಡಿ ಸಂಭ್ರಮಿಸಿದ್ದಾರೆ. ಅರೆರೆ., ಇದರಲ್ಲೇನು ವಿಶೇಷ ಎಂದುಕೊಂಡಿರಾ! ಅವರು ಶಾಪಿಂಗ್ ಮಾಡಿ ಎಂಜಾಯ್ ಮಾಡಿರುವುದು ಸಿಟಿಯ ಹೈ ಸ್ಟ್ರೀಟ್‌ಗಳಲ್ಲಲ್ಲ! ಮಾಲ್‌ನಲ್ಲಿ ಅಲ್ಲ! ಬದಲಿಗೆ, ನಮ್ಮ ಬೆಂಗಳೂರಿನ ಸಾಂಸ್ಕೃತಿಕ ಏರಿಯಾ ಎಂದೇ ಖ್ಯಾತಿ ಗಳಿಸಿರುವ ಹಾಗೂ ತೀರಾ ಜನಸಂದಣಿಯಿಂದ ತುಂಬಿರುವ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಎಂದರೇ ಅಚ್ಚರಿಯಾಗಬಹುದು.
ದೇಸಿ ಸೀರೆಯಲ್ಲಿ ತೇಜಸ್ವಿನಿ ಶರ್ಮಾ
ಶಾಪಿಂಗ್ ಎಂದಾಕ್ಷಣ ಎಲ್ಲರೂ ಪ್ರಿಫರ್ ಮಾಡುವುದು ಕಂಫರ್ಟಬಲ್ ಉಡುಪು. ಆದರೆ, ತೇಜಸ್ವಿನಿ ಮಾತ್ರ, ನಮ್ಮ ಸಂಸ್ಕೃತಿ ಬಿಂಬಿಸುವ ಸೀರೆಯನ್ನು ಉಟ್ಟು, ಬಿಂದಾಸ್ ಆಗಿ ತಿರುಗಾಡಿದ್ದಾರೆ. ಅದರಲ್ಲೂ ಕಾಟನ್ ಸೀರೆಯಲ್ಲಿ ಜುಮಕಾ ಧರಿಸಿ, ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ತೇಜಸ್ವಿನಿ ಶರ್ಮಾರ ಆಕರ್ಷಕ ಸಿಂಪಲ್ ಲುಕ್
ಅಂದಹಾಗೆ, ನಟಿ ತೇಜಸ್ವಿನಿ ಶರ್ಮಾ ಅವರಿಗೆ ಮೊದಲಿನಿಂದಲೂ ಸಂದರ್ಭಕ್ಕೆ ತಕ್ಕಂತೆ ದೇಸಿ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ಇನ್ನು, ಅವರು ಧರಿಸಿರುವ ಜುಮಕಾ ಹಾಗೂ ಬ್ಲಾಕ್ ಮೆಟಲ್‌ನ ಮೂಗುತಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಕೈಗಳ ಹಸಿರು ಗಾಜಿನ ಬಳೆಗಳು ಅವರ ಸಿಂಪ್ಲಿಸಿಟಿಯನ್ನು ಎತ್ತಿ ಹಿಡಿದಿವೆ. ಮಾಡೆಲ್, ನಟಿಯಾದರೂ ಸಿಂಪಲ್ ಸೀರೆಯಲ್ಲಿ ಸ್ಟ್ರೀಟ್ ಶಾಪಿಂಗ್ ಮಾಡಿರುವುದು ಅವರ ದೇಸಿ ಪ್ರೇಮಕ್ಕೆ ಸಾಕ್ಷಿಯಾಗಿದೆ ಎನ್ನುವ ಫ್ಯಾಶನ್ ವಿಮರ್ಶಕ ಜಾನ್ ಪ್ರಕಾರ, ತೇಜಸ್ವಿನಿ ಶರ್ಮಾರ ಒಟ್ಟಾರೆ, ಔಟ್‌ಲುಕ್ ಇತರರಿಗೆ ಮಾದರಿಯಾಗುವಂತಿದೆ ಎಂದು ಸ್ಟೈಲ್ ರಿವ್ಯೂ ನೀಡಿದ್ದಾರೆ.
ವಿಸ್ತಾರ ನ್ಯೂಸ್‌ಗೆ ತೇಜಸ್ವಿನಿ ಹೇಳಿದ್ದೇನು?
“ಕೊಡಗಿನಲ್ಲಿ ಬಸವನಗುಡಿಯ ಕಡಲೆಕಾಯಿ ಪರಿಷೆಯಂತಹ ಯಾವುದೇ ಜಾತ್ರೆಗಳು ಕಂಡು ಬರುವುದಿಲ್ಲ. ಸುಮಾರು ಐದು ವರ್ಷಗಳಿಂದ ನಾನು ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ, ಪರಿಷೆಗೆ ಹೋಗಲಾಗಿರಲಿಲ್ಲ! ಈ ಪರಿಷೆಯ ಬಗ್ಗೆ ಬಹಳಷ್ಟು ಕೇಳಿದ್ದೆ. ಇತಿಹಾಸ ತಿಳಿದುಕೊಂಡಿದ್ದೆ. ಇಂತಹ, ಹಿಸ್ಟರಿ ಹೊಂದಿರುವ ಈ ಪರಿಷೆಯನ್ನು ನೋಡಿ ಸಂಭ್ರಮಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಈ ಬಾರಿ ನನಗೆ ಒಂದಿಷ್ಟು ಸಮಯಾವಕಾಶ ದೊರೆತಿದ್ದು, ಹೋಗಿ ಎಂಜಾಯ್ ಮಾಡಲು ಸಾಧ್ಯವಾಯಿತು. ಸಾಮಾನ್ಯರಂತೆ, ಚಿಕ್ಕಮಕ್ಕಳಂತೆ ತಿರುಗಾಡಲು, ಸೀರೆಯುಟ್ಟು ಸ್ಟ್ರೀಟ್ ಶಾಪಿಂಗ್ ಮಾಡಲು ಸಾಧ್ಯವಾಯಿತು. ಈ ಕ್ಷಣಗಳನ್ನು ಫೋಟೋಗ್ರಾಫರ್ ವಿಕಾಸ್ ಕೂಡ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಒಟ್ಟಿನಲ್ಲಿ, ಪರಿಷೆಯಲ್ಲಿ ಸೀರೆಯುಟ್ಟು ಸಂಭ್ರಮಿಸಿದ್ದು ಖುಷಿ ನೀಡಿತು” ಎಂದು ನಟಿ ತೇಜಸ್ವಿನಿ ಶರ್ಮಾ ವಿಸ್ತಾರ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ ಚಳಿಗಾಲದ ಟಿಪ್ಸ್ ಹೀಗಿದೆ