ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ ಸೀಸನ್‌ನಲ್ಲಿ ನಾನಾ ಬ್ರಾಂಡ್ ಹೆಸರಲ್ಲಿ ಲೆಕ್ಕವಿಲ್ಲದಷ್ಟು ವೆಡ್ಡಿಂಗ್ ಜ್ಯುವೆಲರಿಗಳು (Akshaya Trutiya Jewel Trend) ಬಿಡುಗಡೆಗೊಂಡಿವೆ. ಮದುಮಗಳು ಹಾಗೂ ಮದುಮಗನ ವೆಡ್ಡಿಂಗ್ ಆಭರಣಗಳು ಊಹೆಗೂ ಮೀರಿದ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಅಷ್ಟು ಮಾತ್ರವಲ್ಲ, ಈ ಮದುವೆ ಸಮಾರಂಭಗಳಲ್ಲಿ ಕುಟುಂಬದ ಸದಸ್ಯರೂ ಧರಿಸಬಹುದಾದ ಆಭರಣಗಳು ಕೂಡ ಎಂಟ್ರಿ ನೀಡಿವೆ.
ವೆಡ್ಡಿಂಗ್ ಆಭರಣಗಳ ಪ್ರೀ ಆರ್ಡರ್
ಅಂದಹಾಗೆ, ಅಕ್ಷಯ ತೃತೀಯ ಆಗಮಿಸುವುದೇ ವೆಡ್ಡಿಂಗ್ ಸೀಸನ್‌ನಲ್ಲಿ, ಇದಕ್ಕಾಗಿ ಸಾಕಷ್ಟು ಮಂದಿ ವರ್ಷಗಳ ಹಿಂದೆಯೇ ಆರ್ಡರ್ ನೀಡಿ ಆ ದಿನದಂದು ಖರೀದಿಸುತ್ತಾರೆ. ಇಲ್ಲವೇ ಗೋಲ್ಡ್ ಚೀಟಿ ಹಾಕಿ, ಅದೇ ದಿನದಂದು ಕೊಳ್ಳುವ ಪ್ಲಾನ್ ಕೂಡ ಮಾಡಿರುತ್ತಾರೆ. ಹಾಗಾಗಿ ನಮಗೆ ವರ್ಷಗಳ ಅಥವಾ ತಿಂಗಳುಗಳ ಹಿಂದೆಯೇ ವೆಡ್ಡಿಂಗ್ ಜ್ಯುವೆಲರಿಗಳ ಆರ್ಡರ್ ದೊರೆತಿರುತ್ತದೆ. ಈ ಆರ್ಡರ್ ಮೇರೆಗೆ ಜ್ಯುವೆಲರಿಗಳನ್ನು ಸಿದ್ಧಪಡಿಸಿ, ಪ್ರದರ್ಶನಕ್ಕೂ ಇಟ್ಟಿರುತ್ತೇವೆ. ಇದು ಇತರೇ ಗ್ರಾಹಕರನ್ನೂ ಸೆಳೆಯುತ್ತದೆ ಎನ್ನುತ್ತಾರೆ ಜ್ಯುವೆಲರಿ ಶೋ ರೂಮ್‌ವೊಂದರ ಸೇಲ್ಸ್ ಮ್ಯಾನೇಜರ್ ರಾಘವೇಂದ್ರ ಆಚಾರ್. ಅವರ ಪ್ರಕಾರ, ಅಕ್ಷಯ ತೃತೀಯ ಸಮೃದ್ಧಿಯ ಸಂಕೇತವಾಗಿರುವುದರಿಂದ ಜ್ಯುವೆಲರಿ ಶಾಪ್‌ಗಳು ಗ್ರಾಹಕರಿಗೆ ಸಾಕಷ್ಟು ಬಗೆಯ ಆಫರ್ಸ್ ಹಾಗೂ ಸೌಲಭ್ಯಗಳನ್ನು ನೀಡುತ್ತವೆ ಎನ್ನುತ್ತಾರೆ.
ಮದುಮಗಳ ಆಭರಣಗಳು
ಸಮ್ಮರ್‌ನಲ್ಲಿ ಅಕ್ಷಯ ತೃತೀಯದ ನಂತರ ನಡೆಯುವ ಸಾಕಷ್ಟು ಮದುವೆಗಳ ಆಭರಣಗಳು ಆ ದಿನವೇ ಡಿಲಿವರಿಯಾಗಿರುತ್ತದೆ ಎನ್ನುವ ಆಭರಣ ವಿನ್ಯಾಸಕರ ಪ್ರಕಾರ, ಇದೀಗ ವೆಡ್ಡಿಂಗ್ ಆಭರಣಗಳಲ್ಲಿ ಅತಿ ಹೆಚ್ಚು ಪಾಲು ಮದುಮಗಳ ಆಭರಣದ್ದಾಗಿರುತ್ತದೆ. ಅವುಗಳಲ್ಲಿ ಎಂದಿನಂತೆ ಬ್ರೈಡಲ್ ಸೆಟ್ ಸಮೇತ ಖರೀದಿಸುವವರಿದ್ದಾರೆ. ಕೆಲವರು ಬಿಡಿಬಿಡಿಯಾಗಿ ಅಗತ್ಯವಿರುವ ಆಭರಣಗಳನ್ನು ಮಾತ್ರ ಕೊಳ್ಳುತ್ತಾರೆ. ಉದಾಹರಣೆಗೆ., ಬ್ರೈಡಲ್ ಸೆಟ್‌ನಲ್ಲಿ ಮುಡಿಯಿಂದ ಕಾಲಿನವರೆಗೂ ಧರಿಸುವ ಎಲ್ಲಾ ಬಗೆಯ ಅಭರಣಗಳು ಒಳಗೊಂಡಿರುತ್ತವೆ. ಮಾಂಗ್‌ಟೀಕ್, ಮಾಟಿ, ಕೆನ್ನೆ ಸರಪಳಿ, ಕಿವಿಯೊಲೆ, ಹ್ಯಾಂಗಿಂಗ್ಸ್, ಕೈಬಳೆಗಳ ಸೆಟ್, ಹಾರ, ನೆಕ್ಲೇಸ್, ಬಾಜುಬಂದ್, ಸೊಂಟದ ಪಟ್ಟಿ, ಮಾಂಗಲ್ಯ, ಕೈ ಉಂಗುರಗಳು ಸೇರಿದಂತೆ ಎಲ್ಲವೂ ಇರುತ್ತವೆ. ಇನ್ನು ಬಿಡಿಬಿಡಿಯಾಗಿ ಮದುಮಗಳ ಆಭರಣಗಳನ್ನು ಖರೀದಿಸುವವರು ಮಾತ್ರ ಆದಷ್ಟೂ ಎರಡೆಳೆ ಚೈನ್ ಮಾಂಗಲ್ಯ, ನೆಕ್ಲೇಸ್, ನಾಲ್ಕು ಬಳೆ, ಜುಮಕಿ ಅಥವಾ ಹ್ಯಾಂಗಿಂಗ್ಸ್ ಮಾತ್ರ ಪ್ರತ್ಯೇಕವಾಗಿ ಖರೀದಿಸುತ್ತಾರೆ. ಕುಟುಂಬದ ಪ್ರತಿಷ್ಠೆಗೆ ತಕ್ಕಂತೆ ಆಭರಣಗಳನ್ನು ಕೊಳ್ಳುವುದು ಸಾಮಾನ್ಯವಾಗಿದೆ. ಅದು ಟ್ರೆಡಿಷನಲ್ ಅಥವಾ ಕಂಟೆಪರರಿ ಆಭರಣಗಳಾಗಬಹುದು ಎಂದು ವಿವರ ನೀಡುತ್ತಾರೆ ಜ್ಯುವೆಲ್ ಡಿಸೈನರ್ಸ್.
ಮದುಮಗನ ಆಭರಣಗಳು
ಇನ್ನು ಮದುಮಗನ ಆಭರಣಗಳಲ್ಲಿ ಹೆಚ್ಚೇನೂ ಇರುವುದಿಲ್ಲ. ಕೈಗಳಿಗೆ ಬ್ರೇಸ್‌ಲೇಟ್, ಕತ್ತಿಗೆ ಚೈನ್, ಉಂಗುರಗಳು ಸೆಟ್‌ನಲ್ಲಿ ಒಳಗೊಂಡಿರುತ್ತವೆ. ಕೆಲವರು ತಮಗೆ ಬೇಕಾದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಮದುವೆ ಸಮಯದಲ್ಲಿ ವರನು ಧರಿಸುವ ಲೇಯರ್ ಹಾರ ಮಾತ್ರ ಯೂನಿಸೆಕ್ಸ್ ಡಿಸೈನ್‌ನದ್ದನ್ನು ಕೊಳ್ಳುತ್ತಾರೆ. ಯಾಕೆಂದರೆ, ಮದುವೆಯ ನಂತರವೂ ಇದನ್ನು ಪತ್ನಿ ಅಥವಾ ಮನೆಯವರು ಧರಿಸಬಹುದು ಎಂಬ ಲೆಕ್ಕಚಾರವಿರುತ್ತದೆ ಎಂಬುದು ಜ್ಯುವೆಲ್ ಮಾರಾಟಗಾರರ ಅಭಿಪ್ರಾಯ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Temple Jewellery Fashion: ಅಕ್ಷಯ ತೃತೀಯಕ್ಕಾಗಿ ಲೈಟ್‌ವೈಟ್ ವಿನ್ಯಾಸದಲ್ಲಿ ಮೂಡಿ ಬಂದ ಟೆಂಪಲ್ ಜ್ಯುವೆಲರಿಗಳು