ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ, ಇದರಲ್ಲಿ ಹೊಸದೇನಿಲ್ಲ. ಹೃದಯ, ಯಕೃತ್ತು ಸೇರಿದಂತೆ ದೇಹದ ಹಲವಾರು ಅಂಗಗಳು ಜಖಂಗೊಳ್ಳುತ್ತವೆ ಎಂಬುದನ್ನೂ ಕೇಳಿಯೇ ಇದ್ದೇವೆ. ಆದರೆ ಇದೀಗ ನಮ್ಮ ದೇಹದ ಅಂಗಾಂಗಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಎನ್ನುತ್ತಾರೆ ಸಂಶೋಧಕರು.
ಇವೆಲ್ಲ ತಿಳಿದೂ ಕುಡಿದು ʻಡಿಂಗ್ʼ ಆಗುವ ಜನರಿಗೆ ಎಂದು ಎಚ್ಚರಿಕೆ ಮಾತನ್ನು ಹೇಳಿದ್ದಾರೆ ನಿಮ್ಹಾನ್ಸ್‌ನ ಸಂಶೋಧಕರು. ವ್ಯಕ್ತಿಯ ವಂಶವಾಹಿಯ ಮೇಲೆ ರಿಪೇರಿ ಮಾಡಲಾಗದಂಥ ಹಾನಿಯನ್ನು ಅಲ್ಕೋಹಾಲ್ ಉಂಟುಮಾಡುತ್ತದಂತೆ. ಅಂದರೆ, ಬೇಕಷ್ಟು ಕುಡಿದು ತೂರಾಡಿ, ಡಿಎನ್‌ಎ ಹಾಳಾಯಿತು ಎಂದಾಕ್ಷಣ ಎಲ್ಲ ಬಿಟ್ಟು ವೈರಾಗ್ಯ ಬರಿಸಿಕೊಂಡರೆ ಡಿಎನ್‌ಎ ಸರಿಯಾಗುತ್ತದೆ ಎಂದು ಭಾವಿಸಿದರೆ- ಹಾಗಾಗುವುದಿಲ್ಲ! ಕುಡಿಯುವುದು ನಿಲ್ಲಿಸಿದ ಬಳಿಕವೂ ಹಾಳಾದ ವಂಶವಾಹಿಗಳನ್ನು ಸರಿ ಮಾಡುವುದು ಸಾಧ್ಯವಿಲ್ಲ ಎಂಬುದು ಸಂಶೋಧಕರ ಖಚಿತ ಮಾತು.
ʻಅಮೆರಿಕನ್ ಜರ್ನಲ್ ಆಫ್ ಮೆಡಿಕಲ್ ಜೆನೆಟಿಕ್ಸ್ʼನಲ್ಲಿ ಪ್ರಕಟಗೊಂಡ ವರದಿಯಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳು ದಾಖಲಾಗಿವೆ. ಮದ್ಯಮ ಮೂಲಕ ದೇಹ ಸೇರುವ ಎಥೆನಾಲನ್ನು ದೇಹ ತ್ವರಿತವಾಗಿ ಸಂಸ್ಕರಿಸುತ್ತದೆ. ಅದರಲ್ಲಿರುವ ಈಥೈಲ್ ಅಣುಗಳನ್ನು ಮಿಥೈಲ್ ಆಗಿ ಪರಿವರ್ತಿಸುತ್ತದೆ ಶರೀರ. ಹೀಗೆ ಪರಿವರ್ತನೆಗೊಂಡ ಮಿಥೈಲ್ ಅಣುಗಳು ದೇಹದ ವಂಶವಾಹಿಗಳ ಮೇಲೂ ಪರಿಣಾಮ ಬೀರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸುವವರಲ್ಲಿ ವಂಶವಾಹಿಗಳು ಅತೀವ ಹಾನಿಗೆ ಒಳಗಾಗಿರುತ್ತವೆ ಎಂಬುದನ್ನು ವರದಿ ಉಲ್ಲೇಖಿಸಿದೆ.
ಸುಮಾರು ೧೦ ವರ್ಷಗಳ ಕಾಲ ವಿಪರೀತ ಮದ್ಯ ಸೇವಿಸುತ್ತಿದ್ದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರ ಪ್ರಕಾರ, ಪುನರ್ವಸತಿಯ ಉದ್ದೇಶದಿಂದ ಚಿಕಿತ್ಸೆಗೆ ಬಂದಿದ್ದವರ ವಂಶವಾಹಿಯನ್ನು ಮೊದಲಿಗೆ ತಪಾಸಣೆ ನಡೆಸಲಾಗಿತ್ತು. ಚಿಕಿತ್ಸೆ ಪಡೆದು, ಮದ್ಯ ತ್ಯಜಿಸಿದ ಹಲವಾರು ತಿಂಗಳುಗಳ ನಂತರ ಇನ್ನೊಮ್ಮೆ ತಪಾಸಣೆಗೆ ಒಳಪಡಿಸಿದಾಗಲೂ ಅವರ ವಂಶವಾಹಿಗಳು ಅಮಲೇರಿದಂತೆಯೇ ಇದ್ದವು. ಅಂದರೆ ಮಿಥೈಲ್‌ನಿಂದ ಆಗಿದ್ದ ಪರಿಣಾಮಗಳಿಂದ ವಂಶವಾಹಿಗಳು ಇನ್ನೂ ಮುಕ್ತವಾಗಿರಲಿಲ್ಲ. ಕುಡಿಯದೆ ಇರುವ ವ್ಯಕ್ತಿಯ ಡಿಎನ್‌ಎ ಇರುವಷ್ಟು ಆರೋಗ್ಯಕರವಾಗಿ ಕುಡಿಯುವವರ ಡಿಎನ್‌ಎಗಳು ಇರುವುದಿಲ್ಲ ಎನ್ನುವುದಕ್ಕೆ ಈ ಅಧ್ಯಯನ ಪುಷ್ಟಿ ಒದಗಿಸುತ್ತದೆ.
ಇದನ್ನೂ ಓದಿ | Drinking Age : ಒತ್ತಡಕ್ಕೆ ಮಣಿದ ಸರ್ಕಾರ; ಮದ್ಯಸೇವನೆ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ಪ್ರಸ್ತಾವನೆ ವಾಪಸ್