ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷರ ಹಾಗೂ ಸಿಂಬಲ್‌ಗಳ ಮೂಲಕ ಬಳೆಗಳ (Bangles trend) ಮೇಲೆ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಟಾಕಿಂಗ್ ಬ್ಯಾಂಗಲ್ಸ್ ಇದೀಗ ಮಾನಿನಿಯರನ್ನು ಸೆಳೆಯತೊಡಗಿದೆ. ಅದರಲ್ಲೂ ಮದುವೆ ಹಾಗೂ ಗ್ರ್ಯಾಂಡ್ ಸಮಾರಂಭಗಳಿಗೆ ಧರಿಸುವುದು ಸಾಮಾನ್ಯವಾಗಿದೆ.
ಏನಿದು ಟಾಕಿಂಗ್ ಬ್ಯಾಂಗಲ್ಸ್
ತಮ್ಮ ಪತಿಯ ಅಥವಾ ಪ್ರಿಯವಾದವರ ಹೆಸರು, ಹಾರ್ಟ್ ಶೇಪ್ ಹೀಗೆ ನಾನಾ ಸಿಂಬಲ್‌ಗಳನ್ನು, ಮೊದಲ ಅಕ್ಷರಗಳನ್ನು ಅಥವಾ ತಮ್ಮಿಷ್ಟವಾದ ಗುರುತನ್ನು ಇವು ಹೊಂದಿರುತ್ತವೆ. ಅದರಲ್ಲೂ ಮದುವೆಯಾಗುವ ಮದುಮಗಳು ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮ ಪತಿಯ ಹೆಸರನ್ನು ಆರ್ಡರ್ ಕೊಟ್ಟು, ಬಳೆಗಳ ಮೂಡಿಸಿ, ಧರಿಸುವುದು ಇಂದು ಕಂಡು ಬರುತ್ತಿದೆ. ಮೊದಲೆಲ್ಲಾ ನಾರ್ತ್ ಇಂಡಿಯನ್ಸ್ ವೆಡ್ಡಿಂಗ್ ಆಕ್ಸೆಸರೀಸ್‌ನಲ್ಲಿದ್ದ ಇವು ಇದೀಗ ಇಲ್ಲಿನವರ ಬಳೆಯ ಸೆಟ್ ಜೊತೆಗೆ ಸೈಡ್ ಬಳೆಗಳಾಗಿ ಪರಿವರ್ತನೆಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಇದಕ್ಕೆ ಪ್ರೀತಿಸುವವರು ಕೂಡ ಹೊರತಾಗಿಲ್ಲ. ತಮ್ಮ ಪ್ರೇಮಿಗಳ ಹೆಸರನ್ನು ಬಳೆಗಳ ಮೇಲೆ ಹಾಕಿಸುವುದು ಈ ಬಳೆಗಳ ಡಿಮ್ಯಾಂಡ್ ಹೆಚ್ಚಿಸಿದೆ ಎನ್ನುತ್ತಾರೆ.
ಕಸ್ಟಮೈಸ್ಡ್ ಬಳೆಗಳು
ಅಂದಹಾಗೆ, ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಬಳೆಗಳ ಮೇಲೆ ಹೆಸರು ಮೂಡಿಸಲಾಗುತ್ತದೆ. ಹಾಗೆಂದು ಇವು ಗಾಜಿನ ಬಳೆಗಳಲ್ಲ. ಅಗಲವಾದ ಸ್ಟೋನ್ಸ್ ಅಂಟಿಸಿದ ಬಳೆಗಳು. ನಾಲ್ಕೈದು ಸಾಲಿನಲ್ಲಿ ಸ್ಟೋನ್ಸ್ ಜೋಡಿಸಿದಂತಿರುತ್ತವೆ. ಹೆಸರುಗಳನ್ನು ಹೇಗೆ ಬೇಕು ಹಾಗೆ ಈ ಸ್ಟೋನ್ಸ್ ವಿನ್ಯಾಸದ ಮೂಲಕ ಅಂಟಿಸಲಾಗಿರುತ್ತದೆ. ಅಗಲವಾಗಿರುವ ಈ ಬಳೆಗಳು ಇತರೇ ಬಳೆಗಳ ಜೊತೆಗೆ ಧರಿಸಲಾಗುತ್ತದೆ. ಒಟ್ಟಿನಲ್ಲಿ, ಬಳೆಗಳು ಘಲ್ ಎನ್ನದಿದ್ದರೂ ನೋಡಿದಾಗ ಹೆಸರು ಕಾಣುತ್ತದೆ.
ಕೊಡುಗೆಯಾಗಿ ಬಳಕೆ
ಈ ಟಾಕಿಂಗ್ ಬಳೆಗಳನ್ನು ಕೊಡುಗೆಯಾಗಿ ನೀಡುವವರು ಹೆಚ್ಚಾಗಿದ್ದಾರೆ. ತಮಗೆ ಪ್ರೀತಿ ಪಾತ್ರರಾದವರಿಗೆ ಆರ್ಡರ್ ಕೊಟ್ಟು ಹೆಸರು ಬರೆಸಿ ನೀಡುವುದು ಹೆಚ್ಚಾಗಿದೆ ಎನ್ನುವ ಮಾರಾಟಗಾರರು. ಒಂದು ಜತೆ ಬಳೆಗಳನ್ನು ಸಿದ್ಧಪಡಿಸಲು ಕನಿಷ್ಠವೆಂದರೂ ಮೂರ್ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತಾರಂತೆ. ಆರ್ಡರ್ ಪಡೆದು ಬಳೆಗಳನ್ನು ಸಿದ್ಧಪಡಿಸಲಾಗುತ್ತದಂತೆ.
ಟಾಕಿಂಗ್ ಬ್ಯಾಂಗಲ್ಸ್ ಎಲ್ಲೆಲ್ಲಿ ಲಭ್ಯ?
ಬೆಂಗಳೂರಿನಲ್ಲಾದರೆ ಚಿಕ್ಕಪೇಟೆಯ ಕೆಲವು ಅಂಗಡಿಗಳಲ್ಲಿಇವು ಲಭ್ಯ. ಇನ್ನು ಇತರೇ ಸಿಟಿಗಳಲ್ಲಿ ಆರ್ಡರ್ ಮೇರೆಗೆ ಕೆಲವು ಹ್ಯಾಂಡ್‌ಮೇಡ್ ಬ್ಯಾಂಗಲ್ಸ್ ತಯಾರಿಸುವವರು ರೆಡಿ ಮಾಡಿಕೊಡುತ್ತಾರೆ ಎನ್ನುತ್ತಾರೆ ಟಾಕಿಂಗ್ ಬ್ಯಾಂಗಲ್ಸ್ ಪ್ರಿಯರು. ಬಳೆಗಳ ಮೇಲೆ ತಮ್ಮ ಪ್ರಿಯವಾದವರ ಹೆಸರನ್ನು ಮೂಡಿಸುವುದು ಹಾಗೂ ಇದನ್ನು ಧರಿಸುವುದು ಸಂತಸ ನೀಡುತ್ತದೆ. ಇದಕ್ಕಾಗಿ ನಾನು ಹೆಚ್ಚು ಬೆಲೆ ತೆರಲು ಸಿದ್ಧ! ಎನ್ನುತ್ತಾರೆ ಬಳೆ ಪ್ರೇಮಿಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್ ಸ್ವೆಟರ್ಸ್ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್!