ಶೀಲಾ ಸಿ ಶೆಟ್ಟಿ, ಬೆಂಗಳೂರು
ಟೀನೇಜ್ ಹುಡುಗಿಯರು ತ್ವಚೆಗೆ ಬ್ಲೀಚ್ ಮಾಡಿಸುವುದು ಬೇಡ! ಯಾಕೆಂದರೆ, ಟೀನೇಜ್ ಹುಡುಗಿಯರ ಮುಖ ಸುಕೋಮಲವಾಗಿರುತ್ತದೆ. ಜಾಹೀರಾತುಗಳಿಗೆ ಮಾರು ಹೋಗಿ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಲೀಚ್‌ಗೆ ಮೊರೆ ಹೋದಲ್ಲಿ ಮೃದುವಾದ ಚರ್ಮವು ತನ್ನ ನೈಜತೆಯನ್ನು ಅತಿ ಬೇಗನೇ ಕಳೆದುಕೊಂಡು ಮುಪ್ಪಾದಂತೆ ಕಾಣಬಹುದು ಎಂದು ಬ್ಯೂಟಿಕೇರ್‌ಗೆ ಸಂಬಂಧಿಸಿದ ಅಧ್ಯಯನವೊಂದು ವರದಿ ಮಾಡಿದೆ.
ಇಪ್ಪತ್ತರ ನಂತರ ಬ್ಲೀಚ್
“ಇಂದು ಹುಡುಗಿಯರು ಇನ್ನು ಕಾಲೇಜು ಮೆಟ್ಟಿಲು ಹತ್ತಿರುವುದಿಲ್ಲ, ಆಗಲೇ ಮುಖ, ಕೈ-ಕಾಲಿನ ಬ್ಲೀಚ್ ಮಾಡಿಸಲಾರಂಭಿಸುತ್ತಾರೆ. ಇಲ್ಲವೇ ಬ್ಲೀಚ್ ಕ್ರೀಮ್ ಬಳಸಲಾರಂಭಿಸುತ್ತಾರೆ. ಇಂದು ಬ್ಲೀಚ್ ಮಾಡುವುದು/ಮಾಡಿಸುವುದು ಎಷ್ಟೊಂದು ಕಾಮನ್ ಆಗಿದೆ ಎಂದರೆ, ಇನ್ನೂ ಟೀನೇಜ್ ದಾಟದ ಹುಡುಗಿಯರೂ ಇದರ ಮೋಹ ಪಾಶಕ್ಕೆ ಒಳಗಾಗುತ್ತಿದ್ದಾರೆ. ಬ್ಲೀಚ್ ಮಾಡಿಸಲೇ ಬೇಕಿದ್ದವರು ಕನಿಷ್ಠ ಪಕ್ಷ 20 ವರ್ಷದ ನಂತರ ಮಾಡಿಸುವುದು ಉತ್ತಮ. ಅತಿ ಚಿಕ್ಕ ವಯಸ್ಸಿನಲ್ಲಿ ಬ್ಲೀಚ್ ಮಾಡಿಸುವುದರಿಂದ ಮುಂದಿನ ದಿನಗಳಲ್ಲಿ ಚರ್ಮದಲ್ಲಿ ನೆರಿಗೆ ಮೂಡಬಹುದು. ಇಲ್ಲವಾದಲ್ಲಿ, ಸುಕೋಮಲ ಚರ್ಮವು ಅತಿ ಬೇಗ ಸುಕ್ಕಿಗೆ ತುತ್ತಾಗಬಹುದು. ಹಾಗಾಗಿ ಟೀನೇಜ್ ಹುಡುಗಿಯರು ಬ್ಲೀಚ್ ಮಾಡಿಸದಿದ್ದರೇ ಒಳಿತು” ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್.
ಪದೇ ಪದೆ ಬೇಡ
ಸೆನ್ಸಿಟಿವ್ ಚರ್ಮ ಹೊಂದಿರುವವರು ಕೂಡ ಈ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಕೆಲವೊಮ್ಮೆ ಅತಿ ಹೆಚ್ಚು ಬ್ಲೀಚ್ ಮಾಡಿಸುವುದರಿಂದಲೂ ಚರ್ಮದ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಪದೇಪದೇ ಬ್ಲೀಚ್ ಮಾಡುವವರು, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಬ್ಲೀಚಿಂಗ್ ಕ್ರೀಂ ಮುಖದ ಕೂದಲ ಬಣ್ಣವನ್ನು ಮಾಸುವಂತೆ ಮಾಡಿ, ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ. ಚರ್ಮದ ಮೇಲೆ ಬ್ಲೀಚ್ ಕ್ರೀಮ್ ಬಳಸುವುದರಿಂದ ಚಿಕ್ಕ ಪುಟ್ಟ ಕೂದಲು ಉದುರುವುದಿಲ್ಲ, ಬದಲಿಗೆ ಮಾಸಿದಂತೆ ಬಿಂಬಿಸುತ್ತದೆ. ಒಟ್ಟಿನಲ್ಲಿ, ತಾತ್ಕಲಿಕವಾಗಿ ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ, ಅಷ್ಟೇ. ಇನ್ನು ಸನ್ ಟ್ಯಾನ್‌ನಂತಹ ಸಮಸ್ಯೆಗಳಿಗೆ ಬ್ಲೀಚ್ ಮಾಡಿಸಬಹುದು ಎನ್ನುತ್ತಾರೆ.
ಬ್ಲೀಚ್‌ಗೂ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
· ಪ್ರತಿ ಬ್ಲೀಚ್‌ಗೂ ಕೆಲವು ದಿನಗಳ ಕಾಲ ಅಂತರವಿದ್ದಲ್ಲಿ ಒಳ್ಳೆಯದು.
· ಬ್ಲೀಚ್ ಮಾಡಿದ ಅಥವಾ ಮಾಡಿಸಿದ ದಿನ ಮುಖಕ್ಕೆ ಸಾಬೂನು ಬಳಸಬೇಡಿ.
· ಹರ್ಬಲ್ ಬ್ಲೀಚ್ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Beauty trend | ಬಣ್ಣ ಬಣ್ಣದ ಲಿಪ್ ಪೆನ್ಸಿಲ್ ಜಾದೂ