ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೌಂದರ್ಯವರ್ಧಕ ರೋಸ್ ವಾಟರ್ ಬಹುಪಯೋಗಿ. ಇದು ಸೌಂದರ್ಯವರ್ಧಕ ಮಾತ್ರವಲ್ಲ, ಕ್ಲೆನ್ಸರ್, ಟೋನರ್ ಹಾಗೂ ಮಾಯಿಶ್ಚರೈಸರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವಾಗಿ ಮುಖದ ಕಾಂತಿ ಹೆಚ್ಚುತ್ತದೆ. ಜತೆಗೆ ಸ್ಕಿನ್ ಏಜೆಂಟ್ ಆಗಿಯೂ ಇದು ಕಾರ್ಯ ನಿರ್ವಹಿಸುತ್ತದೆ. ರೋಸ್‌ವಾಟರ್ ಮಾರ್ಕೆಟ್‌ನಲ್ಲಿ ರೆಡಿಯಾಗಿ ದೊರೆಯುತ್ತದೆ. ಆದರೆ, ಗುಣಮಟ್ಟ ನೋಡಿ ಖರೀದಿಸುವುದನ್ನು ಮರೆಯಬೇಡಿ ಎನ್ನುವ ಬ್ಯೂಟಿ ತಜ್ಞೆ ಉಮಾ ಬ್ಯೂಟಿ ಪ್ರಿಯರಿಗೆ ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.
- ಪ್ರತಿದಿನ ಮುಖ ತೊಳೆದ ನಂತರ, ರೋಸ್ ವಾಟರನ್ನು ಮುಖಕ್ಕೆ(Rose Water) ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಮುಖವನ್ನು ಫ್ರೆಶ್ ಆಗಿರಿಸುತ್ತದೆ.
- ರೋಸ್ ವಾಟರ್ನಲ್ಲಿ ಕಾಟನ್ ಅದ್ದಿ, ಮುಖಕ್ಕೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಚರ್ಮದ ಮೇಲಿರುವ ಕೊಳೆ ಹೊರ ಬರುತ್ತದೆ.
- ಒಂದೈದು ಸ್ಪೂನ್ ರೋಸ್ ವಾಟರ್ಗೆ ಒಂದೆರೆಡು ಹನಿ ಪುದೀನಾರಸ ಬೆರೆಸಿ, ಮುಖಕ್ಕೆ ಲೇಪಿಸಿ, ಒಣಗಿದ ನಂತರ ತೊಳೆಯಿರಿ. ಮೊಡವೆ ಕಲೆಗಳು ಕ್ರಮೇಣ ಮಾಯವಾಗುತ್ತವೆ.
- ರೋಸ್ ವಾಟರ್ಗೆ ಒಂದೆರೆಡು ಹನಿ ಮೊಸರು, ಸೌತೆಕಾಯಿಯ ರಸ ಹಾಗೂ ಚಿಟಿಕೆ ಗಂಧದ ಪುಡಿ ಬೆರೆಸಿ, ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ ಫೇಸ್ ಪ್ಯಾಕ್ ಮಾಡಿ. ಒಣಗಿದ ನಂತರ, ತಣ್ಣನೆಯ ನೀರಿನಿಂದ ತೊಳೆಯಿರಿ. ಆಗಾಗ್ಗೆ ಈ ರೀತಿ ಪ್ಯಾಕ್ ಮಾಡುವುದರಿಂದ ಮುಖ ಕಾಂತಿಯುಕ್ತವಾಗುವುದಲ್ಲದೇ ಕಲೆಗಳು, ಮೊಡವೆಗಳು ಕ್ರಮೇಣ ನಿವಾರಣೆಯಾಗುತ್ತದೆ. ಯಾವುದೇ ಬಗೆಯ ಫೇಸ್ ಪ್ಯಾಕ್ ಜತೆಗೂ ರೋಸ್ ವಾಟರ್ ಬಳಸಿ ಲೇಪಿಸಬಹುದು.
- ಎರಡು ಚಮಚ ಟೊಮೆಟೋ ರಸಕ್ಕೆ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸುವುದರಿಂದ ಕ್ರಮೇಣ ಸನ್ ಬರ್ನ್ ಮಾಯವಾಗುತ್ತದೆ.
- ಗ್ಲಿಸರಿನ್ನೊಂದಿಗೆ ಶ್ರೀಗಂಧದ ಪುಡಿ ಹಾಗೂ ರೋಸ್ ವಾಟರ್ ಬೆರೆಸಿ ಮಿಶ್ರಣ ಮಾಡಿ, ಆಗಾಗ್ಗೆ ಇದನ್ನು ಮುಖಕ್ಕೆ ಲೇಪಿಸಿದಲ್ಲಿ ಮುಖದ ಸುಕ್ಕುಗಳು ಬರಬರುತ್ತಾ ಕಡಿಮೆಯಾಗುತ್ತವೆ.
ಕೂದಲ ಸೌಂದರ್ಯ
ರೋಸ್ ವಾಟರ್ ಕೇವಲ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಕೂದಲಿನ ಕಾಂತಿಯನ್ನೂ ಹೆಚ್ಚಿಸುತ್ತದೆ. ಕೂದಲಿಗೆ ಮೊದಲು ರೋಸ್ ವಾಟರ್ ಹಚ್ಚಿ, ನಂತರ, ಕೊಬ್ಬರಿ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಕೆಲವು ಗಂಟೆಗಳ ನಂತರ ಸ್ನಾನ ಮಾಡಿ. ಕೂದಲು ಕಾಂತಿಯುಕ್ತವಾಗಿ ನಳನಳಿಸುತ್ತದೆ. ರೋಸ್ ವಾಟರನ್ನು ಶಾಂಪೂವಿನೊಂದಿಗೆ ಮಿಶ್ರ ಮಾಡಿ ಬಳಸಿದಲ್ಲಿ ಸಿಲ್ಕಿ ಹೇರ್ ನಿಮ್ಮದಾಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: ಆಕರ್ಷಕ ತ್ವಚೆಗಾಗಿ ಸೀಸನ್ ಮ್ಯಾಂಗೋ ಫೇಸ್‌ಪ್ಯಾಕ್