ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಡುಗೆ ಮನೆಯಲ್ಲಿ ಅತಿ ಸುಲಭವಾಗಿ ದೊರಕುವಂತಹ ಅರಿಶಿಣ ಕೇವಲ ಅಡುಗೆಗೆ ಮಾತ್ರ ಸೀಮಿತ ಎಂದು ಕೊಳ್ಳಬೇಡಿ. ಆಹಾರಕ್ಕೆ ರಂಗು ಹಾಗೂ ರುಚಿ ಸೇರಿಸುವ ಅರಿಶಿಣ ತ್ವಚೆಯ ನಾನಾ ಸಮಸ್ಯೆಗಳನ್ನು ನಿವಾರಿಸಬಲ್ಲದು.
“ಆಯುರ್ವೇದದಲ್ಲಿ ಅರಿಶಿಣ ಪ್ರಮುಖ ಸ್ಥಾನ ಪಡೆದಿದೆ. ಔಷಧ ಗುಣವನ್ನೊಳಗೊಂಡಿರುವ ಅರಿಶಿಣ ಚರ್ಮವನ್ನು ಮೃದುವಾಗಿಸುವ ಹಾಗೂ ಕಾಂತಿಯುಕ್ತಗೊಳಿಸುವ ಗುಣವನ್ನು ಹೊಂದಿದೆ. ರಾಜರ ಕಾಲದಲ್ಲಿ ಮಹಾರಾಣಿಯರು ಸ್ನಾನಕ್ಕೂ ಮೊದಲು ಇದನ್ನು ಇಡೀ (ಬಾಡಿ ಪ್ಯಾಕ್)ದೇಹಕ್ಕೆ ಲೇಪಿಕೊಳ್ಳುತ್ತಿದ್ದರು. ಇದರಿಂದ ಸೌಂದರ್ಯ ಹೆಚ್ಚುತ್ತಿತ್ತು. ಇನ್ನು ಹಳೆಯ ಕಾಲದಿಂದಲೂ ಭಾರತೀಯ ನಾರಿಯರು ಅರಿಶಿಣ ಬಳಸುವುದು ರಿವಾಜಾಗಿದೆ. ಭಾರತೀಯ ಮದುವೆಗಳಲ್ಲಿ ಅರಿಶಿಣದೆಣ್ಣೆ ಹಚ್ಚುವ ಶಾಸ್ತ್ರ ಇಂದಿಗೂ ಇರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಆದರೆ, ಇಂದು ನಗರ ಪ್ರದೇಶಗಳಲ್ಲಿನ ಮಹಿಳೆಯರು ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಲವಾರು ಬ್ಯೂಟಿಪಾರ್ಲರ್‌ಗಳನ್ನು ಅಲೆದಲೆದು ಹಣ ವ್ಯಯಿಸುತ್ತಾರೆ. ಸುಲಭವಾಗಿ ದೊರೆಯುವ ಅರಿಶಿಣವನ್ನು ಏಕೆ ಬಳಸಬಾರದು? ಒಮ್ಮೆ ಬಳಸಿದಲ್ಲಿ ಅದರ ಉಪಯೋಗ ಅರಿವಿಗೆ ಬರುತ್ತದೆ” ಎನ್ನುತ್ತಾರೆ ಸೌಂದರ್ಯ ತಜ್ಞೆ ಶಹನಾಜ್.
ಸನ್ ಟ್ಯಾನ್ ನಿವಾರಣೆ
ಬಿಸಿಲಿನಲ್ಲಿ ಹೆಚ್ಚು ಓಡಾಡುವವರಿಗೆ ಮುಖದ ಚರ್ಮ ಟ್ಯಾನ್ ಆಗುತ್ತದೆ. ಸೌಂದರ್ಯ ಇಮ್ಮಡಿಗೊಳಿಸುವ ನಾನಾ ಗುಣ ಹೊಂದಿರುವ ಅರಿಶಿಣವು ಸನ್ ಟ್ಯಾನ್ ಆದ ಚರ್ಮವನ್ನು ಬೆಳ್ಳಗಾಗಲು ಸಹಕರಿಸುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಚಿಟಿಕೆ ಅರಿಶಿಣಕ್ಕೆ ಒಂದೆರೆಡು ಹನಿ ಮೊಸರು ಸೇರಿಸಿ ಮುಖಕ್ಕೆ ಹಚ್ಚಬೇಕು. ಸುಮಾರು 20 ನಿಮಿಷಗಳ ನಂತರ ವಾಶ್ ಮಾಡಬೇಕು. ಕ್ರಮೇಣ ಹೀಗೆ ಮಾಡುತ್ತಾ ಬಂದಲ್ಲಿ ಟ್ಯಾನ್ ಸಮಸ್ಯೆ ನಿವಾರಣೆಯಾಗುವುದು.
ಪಿಗ್ಮೆಂಟೆಷನ್‌ಗೆ ಪರಿಹಾರ
ಅರಿಶಿಣ, ಚರ್ಮದ ಸೌಂದರ್ಯಕ್ಕೆ ಟಾನಿಕ್ ಇದ್ದಂತೆ. ಪಿಗ್ಮೆಂಟೆಷನ್ ಸಮಸ್ಯೆಗೆ ಇದು ರಾಮ ಬಾಣ. ಇದು ಚರ್ಮವನ್ನು ಮೃದುವಾಗಿಸುವ ಸಾಮರ್ಥ್ಯ ಹೊಂದಿದೆಯಲ್ಲದೆ, ಜೀವಾಣುಗಳಿಗೆ ಹಾನಿಯುಂಟಾಗುವುದನ್ನು ತಡೆಯುತ್ತದೆ. ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ.
ಮುಖದಲ್ಲಿನ ಕೂದಲ ಬೆಳವಣಿಗೆ ಕುಂಠಿತಗೊಳಿಸಲು…
ಮುಖದಲ್ಲಿ ವಿಪರೀತ ಕೂದಲ ಸಮಸ್ಯೆ ಇರುವವರು ಹೀಗೆ ಮಾಡಿ ನೋಡಿ. ಅರಿಶಿಣ ಪುಡಿಯನ್ನು ನಾಲ್ಕೈದು ಹನಿ ಹಾಲಿನೊಳಗೆ ಬೆರೆಸಿ ಲೇಪಿಸಿ. ನಂತರ ಬೆರಳ ತುದಿಯಲ್ಲಿ ವೃತ್ತಾಕಾರದಲ್ಲಿ ನಿಧಾನವಾಗಿ ಒಂದೈದು ನಿಮಿಷ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕ್ರಮೇಣ ಕೂದಲ ಬೆಳವಣಿಗೆ ಕಡಿಮೆಯಾಗುವುದು.
ಚರ್ಮದ ಬಣ್ಣ ತಿಳಿಯಾಗಲು
ಕಡಲೆ ಹಿಟ್ಟಿಗೆ ಅರ್ಧ ಕಪ್ ಮೊಸರು ಹಾಗೂ ಒಂದು ಚಿಟಿಕೆ ಅರಿಶಿಣ ಸೇರಿಸಿ, ಪೇಸ್ಟ್ ಮಾಡಿ. ಇದನ್ನು ಭುಜ, ಕಾಲು ಹಾಗೂ ಕೈಗಳಿಗೆ ಲೇಪಿಸಿ. ಅರ್ಧ ಗಂಟೆ ನಂತರ ತೊಳೆಯಬೇಕು. ಇದು ಚರ್ಮ ತಿಳಿಯಾಗಲು ಸಹಕರಿಸುವುದು.
ಸ್ಟ್ರೆಚ್ ಮಾರ್ಕ್ ಕಡಿಮೆಗೊಳಿಸಲು
ಮೊದಲಿಗೆ ಸ್ಪ್ರೇಚ್ ಮಾರ್ಕ್‌ಗಳಿರುವೆಡೆ ಆಲಿವ್ ತೈಲದಿಂದ ಮಸಾಜ್ ಮಾಡಿ. ನಂತರ ಕಡ್ಲೆಹಿಟ್ಟು, ಮೊಸರು ಹಾಗೂ ಅರಿಷಿಣ ಮಿಶ್ರ ಮಾಡಿ, ಪೇಸ್ಟ್ ಮಾಡಿ. ಲೇಪಿಸಿ. ಅರ್ಧ ಗಂಟೆ ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ಕ್ರಮೇಣ ಸ್ಟ್ರೇಚ್ ಮಾರ್ಕ್ ಕಡಿಮೆಯಾಗುವುದು.
ಫಿಟ್‌ನೆಸ್‌ಗೆ ಸಹಕಾರಿ
ಅಡುಗೆಯಲ್ಲಿಅರಿಶಿಣ ಬಳಸಬೇಕು. ಇದು ಮನುಷ್ಯನ ದೇಹದಲ್ಲಿನ ಹರಿಯುವ ರಕ್ತದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ.
ಇದನ್ನೂ ಓದಿ | Beauty secret: ಬಾಲಿವುಡ್ ತಾರೆಯರ ಕಿಚನ್‌ನಲ್ಲೇ ಇದೆಯಂತೆ ಇವರ ಚೆಲುವಿನ ಗುಟ್ಟು!