Site icon Vistara News

Beauty Care: ಟೀನೇಜ್‌ಗೆ ಬ್ಲೀಚ್‌ ಯಾಕೆ!

ಶೀಲಾ ಸಿ ಶೆಟ್ಟಿ, ಬೆಂಗಳೂರು

ಟೀನೇಜ್‌ ಹುಡುಗಿಯರು ತ್ವಚೆಗೆ ಬ್ಲೀಚ್‌ ಮಾಡಿಸುವುದು ಬೇಡ! ಹೌದು. ಟೀನೇಜ್‌ ಹುಡುಗಿಯರ ಮುಖ ಸುಕೋಮಲವಾಗಿರುತ್ತದೆ. ಜಾಹೀರಾತುಗಳಿಗೆ ಮಾರು ಹೋಗಿ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಲೀಚ್‌ ಮಾಡಿಸಿದಲ್ಲಿ ಅಥವಾ ಮಾಡಿದಲ್ಲಿ ಮೃದುವಾದ ಚರ್ಮವು ತನ್ನ ನೈಜತೆಯನ್ನು ಅತಿ ಬೇಗನೇ ಕಳೆದುಕೊಂಡು ಬೇಗ ಮುಪ್ಪಾದಂತೆ ಕಾಣಬಹುದು ಎಂದು ಬ್ಯೂಟಿಕೇರ್‌ಗೆ ಸಂಬಂಧಿಸಿದ ಅಧ್ಯಯನವೊಂದು ವರದಿ ಮಾಡಿದೆ.

ಇಪ್ಪತ್ತರ ನಂತರ ಬ್ಲೀಚ್‌

“ಈಗಿನ ಕೆಲವು ಹುಡುಗಿಯರು ಇನ್ನು ಕಾಲೇಜು ಮೆಟ್ಟಿಲು ಹತ್ತಿರುವುದಿಲ್ಲ, ಆಗಲೇ ಮುಖ, ಕೈ-ಕಾಲಿನ ಬ್ಲೀಚ್‌ ಮಾಡಿಸಲಾರಂಭಿಸುತ್ತಾರೆ. ಇಲ್ಲವೇ ಬ್ಲೀಚ್‌ ಕ್ರೀಮ್‌ ಬಳಸಲಾರಂಭಿಸುತ್ತಾರೆ. ಇಂದು ಬ್ಲೀಚ್‌ ಮಾಡುವುದು/ಮಾಡಿಸುವುದು ಎಷ್ಟೊಂದು ಕಾಮನ್‌ ಆಗಿದೆ ಎಂದರೆ, ಇನ್ನೂ ಟೀನೇಜ್‌ ದಾಟದ ಹುಡುಗಿಯರೂ ಕೂಡ ಇದರ ಮೋಹ ಪಾಶಕ್ಕೆ ಒಳಗಾಗುತ್ತಿದ್ದಾರೆ. ಬ್ಲೀಚ್‌ ಮಾಡಿಸಲೇಬೇಕಿದ್ದವರು ಕನಿಷ್ಠ ಪಕ್ಷ 20 ವರ್ಷದ ನಂತರ ಮಾಡಿಸುವುದು ಉತ್ತಮ.

ಅತಿ ಚಿಕ್ಕ ವಯಸ್ಸಿನಲ್ಲಿ ಬ್ಲೀಚ್‌ ಮಾಡಿಸುವುದರಿಂದ ಮುಂದಿನ ದಿನಗಳಲ್ಲಿ ಚರ್ಮದಲ್ಲಿ ನೆರಿಗೆ ಮೂಡಬಹುದು. ಇಲ್ಲವೇ ಸುಕೋಮಲ ಚರ್ಮವು ಅತಿ ಬೇಗ ಸುಕ್ಕಿಗೆ ತುತ್ತಾಗಬಹುದು. ಹಾಗಾಗಿ ಟೀನೇಜ್‌ ಹುಡುಗಿಯರು ಬ್ಲೀಚ್‌ ಮಾಡಿಸದಿದ್ದರೇ ಒಳಿತು” ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್‌.

ಪದೇಪದೇ ಬೇಡ

ಸೆನ್ಸಿಟೀವ್‌ ಚರ್ಮ ಹೊಂದಿರುವವರು ಕೂಡ ಈ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಕೆಲವೊಮ್ಮೆ ಅತಿ ಹೆಚ್ಚು ಬ್ಲೀಚ್‌ ಮಾಡಿಸುವುದರಿಂದಲೂ ಚರ್ಮದ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಇನ್ನು ಕೆಲವರು ಪದೇಪದೇ ಬ್ಲೀಚ್‌ ಮಾಡಿಸಲು ಬ್ಯೂಟಿ ಪಾರ್ಲರ್‌ಗೆ ಹೋಗಲು ಸಾಧ್ಯವಾಗದಿರುವವರು, ಅಂಗಡಿಯಿಂದ ಕೊಂಡು ತಂದ ಬ್ಲೀಚಿಂಗ್‌ ಕ್ರೀಂನಿಂದ ಖುದ್ದು ಬ್ಲೀಚ್‌ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅಂತಹವರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಬ್ಲೀಚಿಂಗ್‌ ಕ್ರೀಂ ಮುಖದ ಕೂದಲ ಬಣ್ಣವನ್ನು ಮಾಸುವಂತೆ ಮಾಡಿ, ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ. ಆದರೆ, ಇದನ್ನು ಎಂದಿಗೂ ಹುಬ್ಬಿನ ಕೂದಲ ಮೇಲೆ ಪ್ರಯೋಗಿಸಕೂಡದು.

ಚರ್ಮದ ಮೇಲೆ ಬ್ಲೀಚ್‌ ಕ್ರೀಮ್‌ ಬಳಸುವುದರಿಂದ ಚಿಕ್ಕ ಪುಟ್ಟ ಕೂದಲು ಉದುರುವುದಿಲ್ಲ, ಬದಲಿಗೆ ಮಾಸಿದಂತೆ ಬಿಂಬಿಸುತ್ತದೆ. ಒಟ್ಟಿನಲ್ಲಿ, ತಾತ್ಕಾಲಿಕವಾಗಿ ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ ಅಷ್ಟೇ! ಇನ್ನು ವಯಸ್ಸು ಇಪ್ಪತ್ತರ ನಂತರ ಚರ್ಮವು ಆರೋಗ್ಯಕರವಾಗಿ ಬೆಳೆದಿರುತ್ತದೆ. ಸೂಕ್ಷ್ಮವಾಗಿರುವುದಿಲ್ಲ. ಆಗ ಸನ್‌ ಟ್ಯಾನ್‌ನಂತಹ ಹಲವಾರು ಸಮಸ್ಯೆಗಳಿಗೆ ಬ್ಲೀಚ್‌ ಮಾಡಿಸಬಹುದು. ಪರಿಹಾರವೂ ಕಂಡು ಕೊಳ್ಳಬಹುದು ಎನ್ನುತ್ತಾರೆ.

ಅಂತರವಿರಲಿ

ಪ್ರತಿ ಬ್ಲೀಚ್‌ಗೂ ಕೆಲವು ದಿನಗಳ ಕಾಲ ಅಂತರವಿದ್ದಲ್ಲಿಒಳ್ಳೆಯದು. ಬ್ಲೀಚ್‌ ಮಾಡಿದ ಅಥವಾ ಮಾಡಿಸಿದ ದಿನ ಮುಖಕ್ಕೆ ಸಾಬೂನು ಬಳಸಬೇಡಿ ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ| Beauty Care: ನೆಕ್‌ ಬ್ಯೂಟಿಗೆ ಇಲ್ಲಿದೆ 5 ಐಡಿಯಾ

Exit mobile version