Site icon Vistara News

Beauty Parlor Syndrome: ಬ್ಯೂಟಿಪಾರ್ಲರ್‌ ಸಿಂಡ್ರೋಮ್‌! ಇದೇನೆಂದು ನಿಮಗೆ ಗೊತ್ತೆ?

Beauty Parlor Syndrome

ಬಹಳಷು ಮಂದಿ ಚರ್ಮ, ಕೂದಲ ಕಾಂತಿಗೆ ಆಗಾಗ ಬ್ಯೂಟಿ ಪಾರ್ಲರಿಗೆ (Beauty parlor syndrome) ಹೋಗೋದು ರೂಢಿ. ಪಾರ್ಲರಿನಲ್ಲಿ ಕೂತು, ಚರ್ಮವನ್ನು ಲಕಲಕನೆ ಹೊಳೆಯುವ ಅನೇಕ ಟ್ರೀಟ್‌ಮೆಂಟ್‌ಗಳನ್ನು ತೆಗೆದುಕೊಂಡು ಕನ್ನಡಿ ನೋಡಿ ಖುಷಿ ಪಡುವುದು ಸಾಮಾನ್ಯ. ನಮ್ಮ ಚರ್ಮ ಕೂದಲು ಆರೋಗ್ಯವಾಗಿ ಹೊಳೆಹೊಳೆಯುತ್ತಾ ಇರಬೇಕೆಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ! ಕೂದಲಿಗೂ ಬಗೆಬಗೆಯ ಸ್ಪಾ, ಟ್ರೀಟ್‌ಮೆಂಟ್‌ಗಳನ್ನು ಮಾಡಿಕೊಂಡು ಕೂದಲನ್ನು ಅಲ್ಲೇ ತೊಳೆದುಕೊಂಡು, ಒಣಗಿಸಿ, ಸೆಟ್‌ ಮಾಡಿಸಿಕೊಂಡು ಒಂದಿಷ್ಟೂ ಕೂದಲು ಕೊಂಕದಂತೆ ಕಚೇರಿಗೋ, ಕಾರ್ಯಕ್ರಮಗಳಿಗೋ ಹೋಗುವುದು ಊಗ ಬಹಳ ಸಾಮಾನ್ಯ ವಿಚಾರ. ಕೆಲವರು ಪದೇ ಪದೇ ಇಂಥವುಗಳನ್ನು ಪಾರ್ಲರಿನಲ್ಲಿ ಮಾಡಿಸಿಕೊಂಡರೆ, ಇನ್ನೂ ಕೆಲವರು ತಿಂಗಳಿಗೊಮ್ಮೆಯಾದರೂ ಮಾಡಿಸಿಕೊಂಡು ರಿಲ್ಯಾಕ್ಸ್‌ ಆಗಿರಬಯಸುವರು. ಅಂತಹ ಎಲ್ಲ ಮಂದಿಯೂ ಇಲ್ಲಿ ಕೇಳಿ! ಇನ್ನು ಮುಂದೆ ಪಾರ್ಲರಿನಲ್ಲಿ (Beauty parlor syndrome) ಹೋಗಿ ಹೇರ್‌ವಾಷ್‌ ಮಾಡಿಕೊಂಡು ಬರುವ ಮಂದಿ ಇದ್ದರೆ ಖಂಡಿತಾ ಎಚ್ಚೆತ್ತುಕೊಳ್ಳಿ! ಯಾಕೆಂದರೆ ಇದು ಕೆಲವೊಮ್ಮೆ ಅತ್ಯಂತ ಗಂಭೀರವಾದ, ಪ್ರಾಣಕ್ಕೇ ಅಪಾಯವಾಗುವ ಸಂದರ್ಭವನ್ನೂ ತರಬಹುದು!

ಪಾರ್ಲರಿಗೆ ಹೋಗಿ ಇಂತಹುಗಳನ್ನೆಲ್ಲ ಮಾಡಿಸಿಕೊಂಡು ಬರುವುದರಿಂದ ಮನಸ್ಸಿಗೂ, ದೇಹಕ್ಕೂ ಖುಷಿ ಸಿಗುತ್ತದೆ ಎಂಬುದು ನಿಜವಾದರೂ, ಇಂತಹುಗಳನ್ನು ಮಾಡಿಸುವಾಗ ಕೆಲವು ಬಗೆಯ ಅಪಾಯಗಳಿರುವುದನ್ನು ನೆನಪಿಟ್ಟುಕೊಳ್ಳಿ. ಮುಖ್ಯವಾಗಿ ಇತ್ತೀಚೆಗೆ ಇಂಥ ಪ್ರಕರಣಗಳ ವರದಿಗಳು ಹೆಚ್ಚಾಗಿದ್ದು, ಬ್ಯೂಟಿ ಪಾರ್ಲರ್‌ ಸಿಂಡ್ರೋಮ್‌ ಎಂಬ ಹೊಸ ಆರೋಗ್ಯ ಸಮಸ್ಯೆಯೊಂದರ ಬಗೆಗೆ ಎಲ್ಲೆಡೆ ಹೆಚ್ಚು ಚರ್ಚೆಯಾಗುತ್ತಿವೆ.

ಏನಿದು ಬ್ಯೂಟಿ ಪಾರ್ಲರ್‌ ಸಿಂಡ್ರೋಮ್‌ ಎನ್ನುತ್ತೀರಾ? ಪಾರ್ಲರಿನಲ್ಲಿ ಮಾಡುವ ಹೇರ್‌ವಾಷ್‌ ಮಾಡುವ ಕ್ರಮದಿಂದಾಗಿ ಇತ್ತೀಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿರುವ ಪ್ರಕರಣಗಳು ಕಂಡುಬಂದಿದ್ದು, ಈ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಲು ತಜ್ಞರು ಹೇಳುತ್ತಾರೆ.

ಬ್ಯೂಟಿ ಪಾರ್ಲರ್‌ಗಳಲ್ಲಿ ಒಂದು ನಿಗದಿತ ಭಂಗಿಯಲ್ಲಿ ಕೂರಿಸಿ, ಕತ್ತನ್ನು, ವಾಷ್‌ ಬೇಸಿನ್‌ಗೆ ಒರಗಿಸಿ ಹೇರ್‌ವಾಷ್‌ ಮಾಡುವ ಕ್ರಮವಿದೆ. ಈ ಭಂಗಿಯಲ್ಲಿ ಬಹಳ ಹೊತ್ತು ಕತ್ತನ್ನು ಒಂದೇ ಭಂಗಿಯಲ್ಲಿ ಇಟ್ಟುಕೊಳ್ಳಬೇಕಾಗಿ ಬರುವುದರಿಂದ ಮಿದುಳಿಗೆ ಸರಿಯಾಗಿ ರಕ್ತ ಸಂಚಾರವಾಗಲು ತಡೆಯಾಗುತ್ತದೆ. ಇದರಿಂದ ಪಾರ್ಶ್ವವಾಯುವಿನಂಥ ಸಮಸ್ಯೆಯೂ ಎದುರಾಗಬಹುದು. ಹಲವರು ಈ ಸಮಸ್ಯೆಗೆ ತುತ್ತಾದ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾಗಾದರೆ, ಇಂತಹ ಪರಿಸ್ಥಿತಿಯ ಅರಿವಾಗುವುದು ಹೇಗೆ ಎನ್ನುತ್ತೀರಾ? ಮುಖ, ಕೈಕಾಲು ಜೋಮು ಹಿಡಿದಂತಾಗುವುದು, ತಲೆಸುತ್ತು, ಮಾತನಾಡಲು ಕಷ್ಟವಾಗುವುದು, ಕೆಲವು ಶಬ್ದಗಳನ್ನು ಸರಿಯಾಗಿ ಉಚ್ಛರಿಸಲು ಕಷ್ಟವಾಗುವುದು, ಅತಿಯಾದ ತಲೆನೋವು ಇತ್ಯಾದಿಗಳು ನಿಮಗಾದರೆ, ಖಂಡಿತವಾಗಿಯೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಹಾಗಾದರೆ, ಈ ಬ್ಯೂಟಿ ಪಾರ್ಲರ್‌ ಸಿಂಡ್ರೋಮ್‌ನಿಂದ ಬಚವಾಗುವುದು ಹೇಗೆ ಅಂತೀರಾ?

ತಜ್ಞರ ಪ್ರಕಾರ, ಬ್ಯೂಟಿ ಪಾರ್ಲರಿನಲ್ಲಿ ಕೂದಲನ್ನು ತೊಳೆಸಿಕೊಳ್ಳುವುದು, ಅವರಿಂದಲೇ ಮಸಾಜ್‌ ಮಾಡಿಸಿಕೊಳ್ಳುವುದು, ಹೇರ್ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುವುದು ನಿಮಗೆ ಸೌಭಾಗ್ಯವೆಂದು ಅನಿಸಿದರೂ, ಇದರಿಂದ ಖುಷಿ, ಸಂತೋಷ, ರಿಲ್ಯಾಕ್ಸೇಶನ್‌ ಸಿಕ್ಕಿದರೂ, ಪ್ರತಿ ಬಾರಿಯೂ, ನಿಮ್ಮಕತ್ತು ಹೆಚ್ಚು ಬಗ್ಗಿಸಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪಾರ್ಲರಿನ ಮಂದಿ ನಿಮ್ಮನ್ನು ಅವರಿಗೆ ಬೇಕಾದ ಭಂಗಿಯಲ್ಲಿ ಕೂರಿಸಿಕೊಂಡರೂ, ನೀವು ನಿಮಗೆ ಕಂಫರ್ಟ್‌ ಆಗಿ ಆ ಭಂಗಿ ಇದೆಯೇ ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಿ. ಕತ್ತು ನೋಯುವಂತೆ ಕತ್ತನ್ನು ಅವರೆಡೆಗೆ ಚಾಚಬೇಡಿ. ಕಷ್ಟಪಟ್ಟು ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಕೂರಬೇಡಿ. ಈ ಸಂದರ್ಭ ಮಧ್ಯದಲ್ಲಿ ಏನೇ ಕಷ್ಟವೆನಿಸಿದರೂ, ಆರಾಮವೆನಿಸುತ್ತಿಲ್ಲ ಅನಿಸಿದರೂ, ಕೂಡಲೇ ಅವರಿಗೆ ತಿಳಿಸಿ.

ಎಲ್ಲಕ್ಕಿಂತ ಮುಖ್ಯವಾಗಿ, ಹೇರ್‌ವಾಷ್‌ಗೆ ಬ್ಯೂಟಿ ಪಾರ್ಲರಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ, ನಿಮ್ಮ ಮನೆಯಲ್ಲಿಯೇ ನೀವೇ ಸ್ನಾನ ಮಾಡಿಕೊಳ್ಳಿ. ನಿಮಗೆ ಹಿತವಾದ ಭಂಗಿಯಲ್ಲಿ ನೀವು ತಲೆಗೆ ಸ್ನಾನ ಮಾಡುವುದು ಒಳ್ಳೆಯದು. ಒಂದು ವೇಳೆ, ಮುಖದಲ್ಲಿ ನಿಮಗೆ ಏನೇ ಬದಲಾವಣೆ ಅನಿಸಿದರೂ, ಕೂಡಲೇ ವೈದ್ಯರನ್ನು ಭೇಟಿಯಾಗಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

ಇದನ್ನೂ ಓದಿ: Health Benefits Of Curd Rice: ಮೊಸರನ್ನ ಎಂಬ ಅಮೃತ: ಹೊಟ್ಟೆಗೂ ಹಿತ, ದೇಹಕ್ಕೂ ಹಿತ!

Exit mobile version