ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಆನ್‌ಲೈನ್‌ನಲ್ಲಿ ಇಲ್ಲವೇ ಸೋಷಿಯಲ್ ಮೀಡಿಯಾದಲ್ಲಿ (Beauty Product Awareness) ತೋರಿಸುವ ಜಾಹೀರಾತಿಗೆ ಮಾರು ಹೋಗಿ ಬ್ಯೂಟಿ ಪ್ರಾಡಕ್ಟ್ಸ್ ತರಿಸಿ, ಬಳಸುತ್ತೀದ್ದೀರಾ! ನಂತರ ಉತ್ತಮ ರಿಸಲ್ಟ್ರ್ಸ್ ದೊರಕುತ್ತಿಲ್ಲ ಎಂದು ಮರಗುತ್ತೀರಾ ಅಥವಾ ಬಳಸಿದ ನಂತರ ಮಾಡೆಲ್‌ಗಳು ತೋರಿಸಿದಷ್ಟು, ಆಕರ್ಷಕವಾಗಿ ಕಾಣಿಸುತ್ತಿಲ್ಲ ಎಂದು ಯೋಚಿಸುತ್ತಿದ್ದೀರಾ? ಇದೆಲ್ಲಾ ಇತ್ತೀಚಿನ ಬ್ಯೂಟಿ ಪ್ರಿಯರ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಸೌಂದರ್ಯ ತಜ್ಞರು. ಹಾಗಾಗಿ ಯಾವುದೇ ಸೌಂದರ್ಯ ವರ್ಧಕಗಳನ್ನು ಕೊಳ್ಳುವ ಹಾಗೂ ಬಳಸುವ ಮೊದಲು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವೇ ಖುದ್ದು ಸೌಂದರ್ಯ ವರ್ಧಕಗಳ ಶಾಪ್‌ಗೆ ತೆರಳಿ ಡೆಮೋ ನೋಡಿ, ಖರೀದಿಸಬೇಕು ಎನ್ನುತ್ತಾರೆ ಅವರು.
ಗುಣಮಟ್ಟದ ಬ್ರಾಂಡ್‌ಗಳಿಗೆ ಆದ್ಯತೆ
ಸೌಂದರ್ಯ ವರ್ಧಕಗಳನ್ನು ಆನ್‌ಲೈನ್ ಅಥವಾ ಸೋಷಿಯಲ್ ಮೀಡಿಯಾ ಲಿಂಕ್ ಮೂಲಕ ಖರೀದಿಸುವುದಾದಲ್ಲಿ ಆದಷ್ಟೂ ಗುಣಮಟ್ಟಕ್ಕೆ ಹೆಸರಾಗಿರುವ ಬ್ರಾಂಡ್‌ಗಳಿಗೆ ಆದ್ಯತೆ ನೀಡಿ. ಲೋಕಲ್ ಬ್ರಾಂಡ್‌ಗಳನ್ನು ಆಯ್ಕೆ ಮಾಡಬೇಡಿ. ಇವು ತ್ವಚೆಗೆ ಹಾನಿಯುಂಟು ಮಾಡಬಲ್ಲವು.
ಜಾಹೀರಾತಿಗೆ ಮಾರು ಹೋಗದಿರಿ
ಸೋಷಿಯಲ್ ಮೀಡಿಯಾ ಲಿಂಕ್ ಇರುವ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಕಾಣುವ ಜಾಹೀರಾತುಗಳಿಗೆ ಮಾರು ಹೋಗಿ ಸೌಂದರ್ಯ ವರ್ಧಕಗಳನ್ನು ಆರ್ಡರ್ ಮಾಡುವ ಮುನ್ನ ಯೋಚಿಸಿ. ಅದು ಎಷ್ಟು ವರ್ಷದಿಂದ ಪ್ರಚಲಿತದಲ್ಲಿದೆ? ಫೀಡ್ ಬ್ಯಾಕ್ ಹೇಗಿದೆ? ಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಸೌಂದರ್ಯವರ್ಧಕಗಳ ಎಕ್ಸ್‌ಚೇಂಜ್ ಇರದು!
ಹೌದು, ಲಿಪ್‌ಸ್ಟಿಕ್ಸ್, ಪೌಡರ್ ಹಾಗೂ ಇತರೇ ಬಹಳಷ್ಟು ಸೌಂದರ್ಯ ವರ್ಧಕಗಳ ಎಕ್ಸ್‌ಚೇಂಜ್ ವ್ಯವಸ್ಥೆ ಇರುವುದಿಲ್ಲ. ಒಮ್ಮೆ ಪ್ಯಾಕ್ ಒಡೆದ ನಂತರ ಮರಳಿ ತೆಗೆದುಕೊಳ್ಳುವುದಿಲ್ಲ ಎಂಬುದು ನೆನಪಿನಲ್ಲಿಡುವುದು ಉತ್ತಮ.
ಆರೈಕೆ ಪ್ರಾಡಕ್ಟ್ಸ್ ಬಳಸುವ ಮುನ್ನ ಯೋಚಿಸಿ
ಕೂದಲಿಗೆ ಹಾಗೂ ಮುಖಕ್ಕೆ ಆರೈಕೆ ಮಾಡುವಂತಹ ಸೌಂದರ್ಯ ಪ್ರಾಡಕ್ಟ್ಸ್ ಬಳಸುವ ಮುನ್ನ ಯೋಚಿಸಿ. ಯಾಕೆಂದರೇ, ನಿಮ್ಮ ತ್ವಚೆ ಹಾಗೂ ಜಾಹೀರಾತಿನಲ್ಲಿ ತೋರಿಸುವ ಸ್ಕಿನ್ ಟೋನ್ ಒಂದೇ ತರದ್ದಾಗಿರುವುದಿಲ್ಲ. ಹಾಗಾಗಿ ಪರಿಣಾಮ ಭಿನ್ನವಾಗಿರುತ್ತದೆ. ಅವರು ತೋರಿಸುವಂತಹ ಎಫೆಕ್ಟ್ ಹಾಗೂ ರಿಸಲ್ಟ್ ಸಿಗದಿರಬಹುದು.
ವೋಚರ್ ಆಸೆಗಾಗಿ ಕೊಳ್ಳಬೇಡಿ
ಯಾವತ್ತೂ ವೋಚರ್ ಹಾಗೂ ಗಿಫ್ಟ್ಸ್ ಆಸೆಗಾಗಿ ಕಂಡ ಕಂಡ ಸೌಂದರ್ಯ ವರ್ಧಕಗಳನ್ನು ಕೊಳ್ಳಬೇಡಿ. ಅವು ಕಳಪೆ ಗುಣಮಟ್ಟ ಹೊಂದಿರುತ್ತವೆ.
ಕ್ರಾಸ್ ಚೆಕ್ ಮಾಡಿ
ಖರೀದಿಸುತ್ತಿರುವ ಸೌಂದರ್ಯವರ್ಧಕಗಳ ಶಾಪ್‌ಗಳು ಇವೆಯೇ! ಟ್ರಯಲ್ ನೋಡಲು ಅವಕಾಶ ಇದೆಯೇ! ಎಂಬುದನ್ನು ಕ್ರಾಸ್ ಚೆಕ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show: ರ‍್ಯಾಂಪ್‌ನಲ್ಲಿ ಜ್ಯುವೆಲರಿಗಳೊಂದಿಗೆ ಮನ ಸೆಳೆದ ಡಿಸೈನರ್ ಫಾರ್ ಎವರ್ ನವೀನ್ ಕುಮಾರ್ ಗೌನ್ಸ್