Site icon Vistara News

Beetroot Stain: ಕೈಗಳಲ್ಲಿ ಬೀಟ್‌ರೂಟ್‌ ಕಲೆಯೇ?; ಹಾಗಾದರೆ ಈ ಸರಳ ಉಪಾಯಗಳನ್ನು ಬಳಸಿ!

Beetroot Stain

ಬೀಟ್‌ರೂಟ್‌ ಎಂಬ ಗಡ್ಡೆಯ ಬಗ್ಗೆ ವಿವರಿಸಬೇಕಿಲ್ಲ. ಹೇಳಿ ಕೇಳಿ. ಗಾಢ ಪಿಂಕ್‌ ಬಣ್ಣದಿಂದ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ. ಆದರೆ, ವಿಚಿತ್ರವೆಂದರೆ, ಇದರ ಈ ಬಣ್ಣವೇ ಇದಕ್ಕೆ ಕೆಲವೊಮ್ಮೆ ಮುಳುವಾಗುತ್ತದೆ. ಯಾಕೆ ಗೊತ್ತಾ? ಇದರ ಬಣ್ಣವೇನೋ ನೋಡಲು ಚಂದವೆನಿಸಿದರೂ ಅಡುಗೆ ಮಾಡಿದವರ, ಇದನ್ನು ಕತ್ತರಿಸಿದವರ ಕೈಯೆಲ್ಲ ಮೊದಲು ಕೆಂಪಣ್ಣಕ್ಕೆ ತಿರುಗಿ ಆಮೇಲೆ ಕಪ್ಪುಕಪ್ಪಾಗಿಬಿಡುತ್ತದೆ. ಈ ಕಪ್ಪಾದ ಕೈಗಳು ಮತ್ತೆ ಹಳೆಯ ನಿಜವಾದ ಸ್ಥಿತಿಗೆ ಬರಲು ಕೊಂಚ ಕಾಲವಾದರೂ ಬೇಕು. ಕನಿಷ್ಠ ಒಂದು ದಿನವಾದರೂ ಬೇಕೇ ಬೇಕು. ಇದೇ ಕಾರಣಕ್ಕೆ ಬಹಳ ಮಂದಿಗೆ ಬೀಟ್‌ರೂಟ್‌ ಅಂದರೆ ಅಷ್ಟಕ್ಕಷ್ಟೇ. ಹೊರಗೆ ದುಡಿಯುವ ಮಹಿಳೆಯರಿಗೆ, ಬೀಟ್‌ರೂಟ್‌ನಿಂದ ಕೈಕೊಳಕು ಮಾಡಿಕೊಂಡು ಹೋಗುವುದು ಸೌಂದರ್ಯಕ್ಕೆ ಸಮಸ್ಯೆಯಾಗಿಯೂ ಕಾಣುವುದರಿಂದ ಹಲವರು ಬೀಟ್‌ರೂಟನ್ನು ಅಡುಗೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಅದರಲ್ಲೂ ಅದೆಷ್ಟೇ ಪೋಷಕಾಂಶಗಳು ಇದರಲ್ಲಿದ್ದರೂ, ಎಷ್ಟೇ ಒಳ್ಳೆಯ ಆಹಾರವೆಂದರೂ, ಬೀಟ್‌ರೂಟ್‌ ತುರಿಯುವಂಥ ಕಾಯಕಕ್ಕಂತೂ ಕೈಯೇ ಹಾಕುವುದಿಲ್ಲ. ಹಾಗಾದರೆ, ಇದಕ್ಕೊಂದು (Beetroot Stain) ಪರಿಹಾರ ಬೇಕಲ್ಲವೇ? ಅತ್ಯುತ್ತಮ ಪೋಷಕಾಂಶಗಳನ್ನ ಒಳಗೊಂಡ ಬೀಟ್‌ರೂಟಿನ ನಿರ್ಲಕ್ಷ್ಯ ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನೆ ಬಂದಾಗ ಇಲ್ಲಿ ಕೆಲವು ಸರಳ ಸಲಹೆಗಳಿವೆ. ಯಾವುದೇ ತಲೆಬಿಸಿಯಿಲ್ಲದೆ ಬೀಟ್‌ರೂಟ್‌ ಅಡುಗೆ ಮಾಡಿ ಕಪ್ಪಾಗಿಸಿಕೊಂಡ ಕೈಯನ್ನು ಮತ್ತೆ ಮೊದಲಿನಂತೆ ಕ್ಷಣ ಮಾತ್ರದಲ್ಲಿ (Beetroot Stain) ಮಾಡಲು ಸರಳ ಉಪಾಯಗಳು ಇಲ್ಲಿವೆ.

ಆಲೂಗಡ್ಡೆ

ಆಲೂಗಡ್ಡೆಗೂ ಬೀಟ್‌ರೂಟ್‌ಗೂ ಏನು ಸಂಬಂಧ ಎನ್ನಬೇಡಿ. ಸಂಬಂಧ ಇದೆ. ಬೀಟ್‌ರೂಟ್‌ನಿಂದಾದ ಹಠಮಾರಿ ಕಲೆಗಳನ್ನು ಕೈಯಿಂದ ಒಡನೆಯೇ ತೆಗೆಯಬೇಕೆಂದರೆ, ತಕ್ಷಣ ಒಂದು ಆಲೂಗಡ್ಡೆಯನ್ನು ಕತ್ತರಿಸಿ ಹರಿಯುವ ನೀರಿಗೆ ಕೈಯನ್ನು ಹಿಡಿದು, ಕಲೆಯಾದ ಜಾಗಕ್ಕೆ ಈ ಆಲೂಗಡ್ಡೆಯ ಹೋಳನ್ನು ಉಜ್ಜಿ ಉಜ್ಜಿ ತೊಳೆಯಿರಿ. ಆಗ ಈ ಕಲೆ ತಿಳೆಯಲು ಸುಲಭವಾಗುತ್ತದೆ. ಆಮೇಳೆ ಕೈಯನ್ನು ನೀರಿನಿಂದ ತೊಳೆದುಕೊಳ್ಳಿ. ಸ್ವಚ್ಛವಾದ ಕೈಗಳಲ್ಲಿ ಕಲೆ ಮಾತ್ರವಲ್ಲ, ವಾಸನೆಯೂ ಹೊರಟುಹೋಗಿರುತ್ತದೆ.

ಬೇಕಿಂಗ್‌ ಸೋಡಾ

ಹಲವು ಕಲೆಗಳಿಗೆ ಸಮರ್ಪಕ ಉತ್ತರವಾಗಿ ಕೆಲಸ ಮಾಡುವ ಶಕ್ತಿ ಬೇಕಿಂಗ್‌ ಸೋಡಾದಲ್ಲಿದೆ. ಕೈಯಲ್ಲಿರುವ ಬೀಟ್‌ರೂಟ್‌ ಕಲೆಗೂ ಇದು ಅತ್ಯುತ್ತಮ ಮದ್ದು. ಕೊಂಚ ಬಿಸಿ ನೀರನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು, ಅದಕ್ಕೆ ಒಂದು ಚಮಚದಷ್ಟು ಬೇಕಿಂಗ್‌ ಸೋಡಾ ಹಾಕಿ. ಒಂದೈದು ನಿಮಿಷ ಈ ಬೆಚ್ಚಗಿನ ಸೋಡಾ ನೀರಿನಲ್ಲಿ ಕೈಗಳನ್ನು ಮುಳುಗಿಸಿಡಿ. ಕಲೆಯೆಲ್ಲ ಮಂಗಮಾಯವಾಗಿರುತ್ತದೆ.

ಉಪ್ಪು

ಸ್ವಲ್ಪ ಉಪ್ಪನ್ನು ಕೈಗಳಲ್ಲಿ ತೆಗೆದುಕೊಂಡು ಹಾಗೆಯೇ ತಕ್ಕಿ ತಿಕ್ಕಿ ಉಜ್ಜಿರಿ. ಇದು ನೈಸರ್ಗಿಕ ಸ್ಕ್ರಬರ್‌ನಂತೆ ಕೆಲಸ ಮಾಡುವುದಲ್ಲದೆ, ಕೈಯಲ್ಲಿರುವ ಅಂಟಿದ ಕಲೆಯನ್ನು ತೆಗೆಯುತ್ತದೆ. ಬೀಟ್‌ರೂಟ್‌ ಕತ್ತರಿಸಿದ ಮೇಲೆ ಕೊಂಚ ಉಪ್ಪು ಹಾಕಿ ಕೈಯನ್ನು ಉಜ್ಜಿ ಆಮೇಲೆ ನೀರು ಹಾಕಿ ತೊಳೆದು ನೋಡಿ. ಕೈ ಸ್ವಚ್ಛವಾಗಿರುತ್ತದೆ.

ನಿಂಬೆಹಣ್ಣು

ಎಲ್ಲ ಉಪಾಯಗಳನ್ನು ಹೇಳಿ ನಿಂಬೆಹಣ್ಣನ್ನೇ ಬಿಟ್ಟರೆ ಹೇಗೆ ಹೇಳಿ! ಒಂದು ನಿಂಬೆಹಣ್ಣನ್ನು ಕತ್ತರಿಸಿ ಬೀಟ್‌ರೂಟ್‌ ಕಲೆಯಾದ ಕೈಗಳ ಮೇಲೆ ಚೆನ್ನಾಗಿ ಉಜ್ಜಿ ಉಜ್ಜಿ ತೊಳೆದರೆ ಕಲೆ ಹೋಗುತ್ತದೆ. ಕೈಯಲ್ಲಿ ಒಂದು ಬಗೆಯ ಘಮವೂ ಮನೆ ಮಾಡುತ್ತದೆ. ಹೀಗೆ ಬೇಡ ಅನಿಸಿದರೆ, ಒಂದು ಬೌಲ್‌ನಲ್ಲಿ ಕೊಂಚ ಬಿಸಿ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ. ಅದರಲ್ಲಿ ಕೈಯನ್ನು ಮುಳುಗಿಸಿ ಒಂದೈದು ನಿಮಿಷ ಮುಳುಗಿಸಿಡಿ. ಆಮೇಲೆ ತೆಗೆದು ನೋಡಿ. ಕೈ ಪಳಪಳ ಹೊಲೆಯುವುದಷ್ಟೇ ಅಲ್ಲ, ವಾಸನೆಯೂ ಇರುವುದಿಲ್ಲ. ಕೈ ಸ್ವಚ್ಛವಾಗುತ್ತದೆ.

ಇದನ್ನೂ ಓದಿ: Health benefits Of Red Foods: ಕೆಂಪು ಬಣ್ಣದ ಆಹಾರಗಳ ಮೇಲೂ ಇರಲಿ ಪ್ರೇಮ!

Exit mobile version