Site icon Vistara News

Benefits Of Pongame: ಬಹೂಪಯೋಗಿ ಹೊಂಗೆ: ಏನೇನಿವೆ ಇದರ ಸದ್ಗುಣಗಳು?

Ugadi 2023

ʻಹೊಂಗೆ ಹೂವ ತೊಂಗಲಲ್ಲಿ/ ಭೃಂಗದ ಸಂಗೀತ ಕೇಲಿ/ ಮತ್ತೆ ಕೇಳಬರುತಿದೆʼ ಎಂಬ ಕವಿವಾಣಿಯಂತೆ ಹೊಂಗೆ ಮರಗಳೆಲ್ಲಾ ಹೂವು ಬಿಟ್ಟು, ದಾರಿಯುದ್ದಕ್ಕೂ ಘಮ ಬೀರುತ್ತಿವೆ. ಮರದ ತುಂಬೆಲ್ಲಾ ಎಳೆಹಸಿರು ಚಪ್ಪರ, ಅದರ ಸುತ್ತೆಲ್ಲಾ ಭೃಂಗಗಳ ಕಲರವ, ಮರದಡಿಗೆಲ್ಲಾ ಹೂವುಗಳ ಹಾಸಿಗೆ- ಯುಗಾದಿಯ ಹೊತ್ತಿಗೆ ಹೊಸದಾಗಿ ಮೈ ತಳೆದು ನಿಲ್ಲುವ ಹೊಂಗೆ ಮರದ ತುಂಬೆಲ್ಲಾ ಹೊಸಜೀವದ ಸಂಚಾರ.

ಹೊಂಗೆ ಮರದಡಿಗೆಲ್ಲಾ ಹಾಸಿಗೆಯಂತೆ ಹರಡುವ ಹೂವುಗಳನ್ನು ಗುಡಿಸಿ ಗೊಬ್ಬರ ಮಾಡುವುದರಿಂದ ಹಿಡಿದು, ಹೊಂಗೆ ಎಣ್ಣೆಯ ದೀಪ ಉರಿಸಿ, ಹೊಂಗೆಯ ನೆರಳು- ತಾಯಿಯ ಮಡಿಲು ಎನ್ನುವವರೆಗೆ ಹೊಂಗೆ ಬಹೂಪಯೋಗಿ. ಈ ಮರದ ಬೇರು, ಎಲೆ, ಕಾಯಿ, ಹೂವು, ಚಕ್ಕೆ, ಕಡೆಗೆ ನೆರಳಿನವರೆಗೆ ಎಲ್ಲವೂ ನಮಗೆ ಉಪಯುಕ್ತ. ಹೊಂಗೆ ಮರಗಳೇ ಇರುವ ದಾರಿಗಳಲ್ಲಿ ಬಿರುಬೇಸಿಗೆಯ ಬಿಸಿಲೂ ತಾಗದಂತೆ ತಂಪಾಗಿ ನಡೆಯಬಹುದು. ಬೇಸಿಗೆಯ ಹೊಂಗೆಯಲ್ಲಿ ರೋಗನಾಶಕ ಗುಣಗಳ ಢಾಳಾಗಿದ್ದು, ಉರಿಯೂತ ಶಮನ ಮಾಡುವ ಸಾಮರ್ಥ್ಯವೂ ಇದೆ. ಸೋಂಕು ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಏನೇನಿವೆ ಹೊಂಗೆಯ ಉಪಯೋಗ (benefits of pongame) ತಿಳಿಯೋಣ ಬನ್ನಿ

ಅಜೀರ್ಣ ಪರಿಹಾರಕ್ಕೆ

ಜಠರಾಗ್ನಿ ಮಂದವಾಗಿ ಆಹಾರ ಸರಿಯಾಗಿ ಪಚನವಾಗದಿರುವ ಸಂದರ್ಭದಲ್ಲಿ ಕಾರಂಜ ಅಥವಾ ಹೊಂಗೆಯನ್ನು ಜೀರ್ಣಕ್ರಿಯೆಯ ಉದ್ದೀಪನಕ್ಕಾಗಿ ಬಳಸಲಾಗುತ್ತದೆ. ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸಿ, ಅಜೀರ್ಣದ ದೋಷವನ್ನು ನಿವಾರಣೆ ಮಾಡುವುದಕ್ಕೆ ಕಾರಂಜವನ್ನು ಚೂರ್ಣದ ರೀತಿಯಲ್ಲಿ ಬಳಸುವ ಪದ್ಧತಿಯಿದೆ

ಆರ್ಥರೈಟಿಸ್ ಶಮನಕ್ಕೆ

ಸಂಧಿವಾತದ ನಿವಾರಣೆಗೆ ಹೊಂಗೆ ಬಳಕೆಯಲ್ಲಿದೆ. ವಾತವನ್ನು ತಡೆಯುವ ಗುಣ ಹೊಂಗೆಯಲ್ಲಿದೆ. ಹಾಗೆಂದೇ ದೇಹದಲ್ಲಿರುವ ಉರಿಯೂತವನ್ನು ತಗ್ಗಿಸುತ್ತದೆ ಎಂದು ಹೊಂಗೆಯನ್ನು ಗುರುತಿಸಲಾಗಿದೆ. ಕೀಲುಗಳ ನೋವಿಗೆ ಪರಿಣಾಮಕಾರಿ ಔಷಧವಿದು.

ಶೀತ-ಕೆಮ್ಮಿಗೆ

ಮಳೆಗಾಲ, ಚಳಿಗಾಲದಲ್ಲಿ ಋತುಮಾನದ ಬದಲಾವಣೆಯ ಹೊತ್ತಿಗೆ ಕಾಣಿಸಿಕೊಳ್ಳುವ ಶೀತ- ಕೆಮ್ಮಿಗೆ ಇದು ಪರಿಣಾಮಕಾರಿ ಔಷಧ. ಎದೆಭಾರವಾಗಿ ಕಫ ಬಿಗಿದಂತಾದಾಗಲೂ ಕಾರಂಜ ಚೂರ್ಣ ಸಹಕಾರಿ. ದಮ್ಮು, ಅಸ್ತಮಾದಂಥ ಅವಸ್ಥೆಯಲ್ಲೂ ಹೊಂಗೆಯನ್ನು ಬಳಸುವ ಪರಿಪಾಠವಿದೆ.

ಚರ್ಮದ ಸಮಸ್ಯೆಗಳಿಗೆ

ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಹೊಂಗೆ ಎಣ್ಣೆಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಸುಣ್ಣ ಗಾಯ, ಇಸುಬು, ತೊನ್ನುಗಳಿಗೆ ಹೊಂಗೆಯ ಉಪಚಾರ ಬಳಕೆಯಲ್ಲಿದೆ. ಹೊಂಗೆ ಎಣ್ಣೆಯ ಸೋಂಕು ನಿರೋಧಕ ಗುಣ ಈ ನಿಟ್ಟಿನಲ್ಲಿ ಪರಿಣಾಮಕಾರಿ. ಕೊಬ್ಬರಿ ಎಣ್ಣೆಯೊಂದಿಗೆ ಹೊಂಗೆ ಎಣ್ಣೆಯನ್ನು ಬೆರೆಸಿ ನಿಯಮಿತವಾಗಿ ಲೇಪಿಸಲಾಗುತ್ತದೆ. ಹೊಂಗೆ ಬೇರಿನ ಕಷಾಯವನ್ನು ರೋಸ್‌ ವಾಟರ್‌ ಜೊತೆ ಸೇರಿಸಿ ಬಳಸಲಾಗುತ್ತದೆ. ಮುಖದ ಮೊಡವೆಗಳಿಗೆ ಬೇವಿನೆಣ್ಣೆ ಬಳಸಿದಂತೆ ಹೊಂಗೆ ಎಣ್ಣೆ ಬಳಕೆ ಮಾಡುವುದು ಸರಿಯಲ್ಲ. ಮಾತ್ರವಲ್ಲ, ಅತಿಸೂಕ್ಷ್ಮ ಚರ್ಮದವರು ಹೊಂಗೆ ಎಣ್ಣೆ ಬಳಕೆಯ ಮುನ್ನ ತಜ್ಞರಲ್ಲಿ ಸಲಹೆ ಕೇಳುವುದು ಒಳ್ಳೆಯದು.

ಬಾಯಿ ಹುಣ್ಣಾದಾಗಲೂ ಇದರ ಬಳಕೆ ಜಾರಿಯಲ್ಲಿದೆ. ಕೊಬ್ಬರಿ ಎಣ್ಣೆಯೊಂದಿಗೆ ಒಂದೆರಡು ಹನಿ ಹೊಂಗೆ ಎಣ್ಣೆ ಬೆರೆಸಿ (ಕಹಿ ರುಚಿಯ ಎಣ್ಣೆಯಿದು) ಬಾಯಿಯ ಹುಣ್ಣಿಗೆ ನೇರವಾಗಿ ಲೇಪಿಸಬಹುದು. ಬೇವಿನ ಕಡ್ಡಿಗಳನ್ನು ಹಲ್ಲುಜ್ಜಲು ಬಳಸಿದಂತೆ, ಹೊಂಗೆಯ ಕಡ್ಡಿಗಳನ್ನೂ ಹಿಂದಿನ ಕಾಲದಲ್ಲಿ ಹಲ್ಲುಜ್ಜಲು ಬಳಸುತ್ತಿದ್ದರಂತೆ. ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೂ ಇದು ಉಪಕಾರಿ. ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ, ಆಸನದಲ್ಲಿ ಮೊಳೆ ಇರುವಲ್ಲಿ ಹಚ್ಚುವ ಕ್ರಮವಿದೆ.

ಕೂದಲ ಆರೈಕೆಗೆ

ಚಿಕ್ಕ ಮಕ್ಕಳ ತಲೆಯ ಹೇನುಗಳ ನಿವಾರಣೆಗೆ, ಇದನ್ನು ತಲೆಗೆ ಮಸಾಜ್‌ ಮಾಡಿ ಶಾಂಪೂವಿನಿಂದ ತೊಳೆಯುವ ಕ್ರಮವಿದೆ. ತಲೆಗೆ ಹಾಕುವ ಕೊಬ್ಬರಿ ಎಣ್ಣೆಯ ಜೊತೆಗೆ ಕೆಲವು ಹನಿ ಹೊಂಗೆ ಎಣ್ಣೆಯನ್ನೂ ಬೆರೆಸುವುದರಿಂದ ತಲೆಯ ಚರ್ಮದ ಸೋಂಕಿದ್ದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ತಲೆ ಹೊಟ್ಟು ನಿಯಂತ್ರಣಕ್ಕೂ ಇದು ಪರಿಣಾಮಕಾರಿ

ಇದನ್ನೂ ಓದಿ: Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

Exit mobile version