Site icon Vistara News

Healthy life | ನಮಗೆ ನಾವೇ ಕೊಡಬಹುದಾದ 10 ಗಿಫ್ಟ್‌ಗಳೆಂದರೆ ಇವೇ!

life gifts

ನಮಗೆ ನಾವೇ ಕೊಟ್ಟುಕೊಳ್ಳಬಹುದಾದ ಅತ್ಯಂತ ಅದ್ಭುತವಾದ ಗಿಫ್ಟ್‌ ಎಂದರೆ ಆರೋಗ್ಯ. ಆರೋಗ್ಯಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಈ ಹತ್ತು ಅಭ್ಯಾಸಗಳು ನಿಮ್ಮನ್ನು ಸದಾ ಖುಷಿಯಾಗಿ, ಆರೋಗ್ಯವಂತರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಆ ಹತ್ತು ಅಭ್ಯಾಸಗಳು ಯಾವುವು ನೋಡೋಣ.

೧. ಹೆಚ್ಚು ನಿಲ್ಲಿ: ಹೆಚ್ಚು ಹೊತ್ತು ಕೂತೇ ಇರುವ ಮಂದಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಕಾಯಿಲೆಗಳು ಬರುವ ಸಂಭವ ಹೆಚ್ಚಂತೆ. ಒಂದು ಲೆಕ್ಕಾಚಾರದ ಪ್ರಕಾರ ದಿನಕ್ಕೆ ೧೨ ಗಂಟೆ ನಿಲ್ಲುವುದು ಒಳ್ಳೆಯದಂತೆ. ಕೂತು ಕೆಲಸ ಮಾಡುವ ಬದಲು ನಿಂತು ಮಾಡಲು ಅಭ್ಯಾಸ ಮಾಡಿ. ನಿಲ್ಲುವ ಡೆಸ್ಕಿಗೆ ನಿಮ್ಮ ಲ್ಯಾಪ್‌ಟಾಪ್‌ ಶಿಫ್ಟ್‌ ಮಾಡಿ. ಕೂರುವ ಬದಲು ನಿಂತು ಕೆಲಸ ಮಾಡಲು ಅಭ್ಯಾಸ ಮಾಡಿಕೊಳ್ಳಿ. ಹಾಗೆ ನೋಡಿದರೆ, ಸ್ಟಾಂಡಿಂಗ್‌ ಡೆಸ್ಕ್‌ ನಿಮ್ಮ ಮೂಡ್‌ ಸುಧಾರಿಸುವಂತೆ ಮಾಡುವುದಲ್ಲದೆ, ನಿಮ್ಮ ಎನರ್ಜಿ ಲೆವೆಲ್‌ ಹೆಚ್ಚಿಸಿ, ಹೆಚ್ಚು ಕ್ಯಾಲರಿ ಬರ್ನ್‌ ಮಾಡುತ್ತದೆ. ನಿರುತ್ಸಾಹವನ್ನು ದೂರ ತಳ್ಳಿ, ಬೊಜ್ಜು ಕಡಿಮೆ ಮಾಡಿ ಬೆನ್ನುನೋವಿಗೂ ಪರಿಹಾರ ಒದಗಿಸುತ್ತದೆ.

೨. ಸರಿಯಾಗಿ ನಿದ್ದೆ ಮಾಡಿ: ನಿದ್ದೆಯೆಂಬುದು ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕ. ರಾತ್ರಿಯ ನಿದ್ದೆ ಏಳರಿಂದ ೯ ಗಂಟೆಗಳ ಕಾಲ ಪ್ರತಿಯೊಬ್ಬರಿಗೂ ಅವಶ್ಯಕ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.  ನೀವು ಸರಿಯಾಗಿ ನಿದ್ದೆ ಮಾಡುತ್ತೀರೋ ಇಲ್ಲವೋ ಎಂಬುದನ್ನು ನೀವು ಗಮನಿಸಿರಲಿಕ್ಕಿಲ್ಲ. ಆದರೆ, ನಿಮ್ಮ ದೇಹ ಇದನ್ನು ಸೂಕ್ಷ್ಮವಾಗಿ ಗಮನಿಸಿ ಡೇಂಜರ್‌ ಸಿಗ್ನಲ್‌ ದಾಟಿಸಿಯೇ ದಾಟಿಸುತ್ತದೆ. ತುಂಬಾ ಬ್ಯುಸಿ, ಯಾವಾಗಲೂ ಫ್ರೆಂಡ್ಸ್‌ ಜೊತೆ ಪಾರ್ಟಿ ಇತ್ಯಾದಿಗಳಿಂದಾಗಿ ನಿದ್ದೆ ಸರಿಯಾಗಿ ಮಾಡುತ್ತಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳುತ್ತಾ ಕೂರಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಒಳ್ಳೆಯ ನಿದ್ದೆ ಮಾಡಿದರಷ್ಟೆ ನಮ್ಮ ಕೆಲಸದ ಸಾಮರ್ಥ್ಯ ಹೆಚ್ಚುತ್ತದೆ. ತೂಕವನ್ನು ಸಮತೋಲನದಲ್ಲಿಡುತ್ತದೆ. ಹಾಗೂ ಹೃದಯದ ತೊಂದರೆಗಳಿಂದ ನಿಮ್ಮನ್ನು ದೂರ ಇಡುತ್ತದೆ.

೩. ಹೆಚ್ಚು ವಿಶ್ರಾಂತಿ: ನೀವು ಎಂಟು ಗಂಟೆಗಳ ಕಾಲ ನಿದ್ದೆ ಮಾಡಿದ್ದೀರಿ ಆದರೂ ಸುಸ್ತಾದಂತೆ ಅನಿಸುತ್ತಿದೆಯಾ? ಹಾಗಿದ್ದರೆ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಕ್ಕಿದೆ, ಮನಸ್ಸಿಗೆ ಸಿಕ್ಕಿಲ್ಲ ಎಂದರ್ಥ. ಮನಸ್ಸಿನ ಆಯಾಸಕ್ಕೂ ವಿಶ್ರಾಂತಿ ಬೇಕಿರುತ್ತದೆ. ಹಾಗಾಗಿ ನಿದ್ದೆಯೊಂದೇ ವಿಶ್ರಾಂತಿಯಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು.

೪. ಹೆಚ್ಚು ವ್ಯಾಯಾಮ: ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಲು ನಮಗೆ ಸಮಯ ಸಾಲುವುದಿಲ್ಲ. ದೇಹದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಿರುವ ವ್ಯಾಯಾಮಕ್ಕೆ ನಾವು ಸಮಯ ನೀಡಿಲ್ಲವೆಂದಾದರೆ, ನಮ್ಮ ಆರೋಗ್ಯದತ್ತ ನಮಗೆ ಗಮನ ಇಲ್ಲ ಎಂದೇ ಅರ್ಥ. ಉತ್ತಮ ವ್ಯಾಯಾಮದಿಂದ ದೇಹ ಉಲ್ಲಸಿತವಾಗಿ ಮನಸ್ಸು ಪ್ರಫುಲ್ಲವಾಗಿ ಖುಷಿಯೂ ನಮ್ಮದಾಗುತ್ತದೆ. ಹಾಗಾಗಿ ಪ್ರತಿನಿತ್ಯದ ವ್ಯಾಯಾಮ ಅತೀ ಮುಖ್ಯ.

೫. ಆರೋಗ್ಯಕರ ಆಹಾರ ಪದ್ಧತಿ: ನಾವು ಸೇವಿಸುವ ಆರೋಗ್ಯದ ಮೇಳೆ ನಮಗೆ ಗಮನ ಇರಲಿ. ಸಂಸ್ಕರಿಸಿದ ರೆಡಿಮೇಡ್‌ ಆಹಾರದ ಬದಲಾಗಿ ತಾಜಾ ಆಹಾರವನ್ನೇ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಂಸ್ಕರಿಸಿದ ಆಹಾರಕ್ಕಿಂತ ಹೆಚ್ಚು ಶಕ್ತಿ, ತಾಕತ್ತನ್ನು ತಾಜಾ ಆಹಾರವೇ ನೀಡುತ್ತದೆ. ಸಾಫ್ಟ್‌ ಡ್ರಿಂಕ್‌ಗಳನ್ನು ಆದಷ್ಟು ಕಡಿಮೆ ಮಾಡಿ, ಹಣ್ಣು ತರಕಾರಿ, ಬೇಳೆಕಾಳುಗಳು, ಮೊಟ್ಟೆ, ಮೀನು, ಬೀಜಗಳನ್ನು ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಅಳವಡಿಸಿ.

೬. ಉತ್ತಮ ಆಯ್ಕೆಗಳು: ನಿಮ್ಮ ನಿರ್ಧಾರಗಳಲ್ಲಿ, ಗುರಿಗಳಲ್ಲಿ ಗಟ್ಟಿಯಾಗಿರಿ. ಆ ನಿಟ್ಟಿನಲ್ಲಿ ಫೋಕಸ್ಡ್‌ ಆಗಿ ಕೆಲಸ ಮಾಡಿ. ಉತ್ತಮ ಆಯ್ಕೆಗಳನ್ನೂ, ಅಭಿರುಚಿಗಳನ್ನೂ ರೂಢಿಸಿಕೊಳ್ಳಿ. ಅವುಗಳಿಗಾಗಿ ಸಮಯ ಮೀಸಲಿಡಿ. ಆಗ ನಿಮ್ಮ ಭವಿಷ್ಯದ ಬಗ್ಗೆ ನೀವೇ ಖುಷಿಯಾಗುವಿರಿ.

೭. ಸಂಬಂಧಗಳನ್ನು ಗಟ್ಟಿಗೊಳಿಸಿ: ಗೆಳೆಯರು, ಬಂಧುಮಿತ್ರರು, ನೆರೆಹೊರೆಯ ಮಂದಿ, ಸಹೋದ್ಯೋಗಿಗಳು ಹೀಗೆ ಎಲ್ಲರ ಜೊತೆಗೆ ಉತ್ತಮ ಸಂಬಂಧ ಹೊಂದಿ. ಬದುಕು ಇರುವುದು ಎಲ್ಲರ ಜೊತೆ ಖುಷಿಯಿಂದ ಅನುಭವಿಸಲು. ಎಲ್ಲೆಡೆ ನೆಗೆಟಿವಿಟಿ ಇದ್ದರೆ ಬದುಕು ವಿಷಮಯವಾಗುತ್ತದೆ. ಮನದಾಳದ ಮಾತುಗಳನ್ನು ಹೇಳಿಕೊಳ್ಳಬಹುದಾದಂತಹ ಒಂದಿಬ್ಬರಾದರೂ ಆತ್ಮೀಯರಿರಲಿ.

ಇದನ್ನೂ ಓದಿ | Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು

೮. ಕುಟುಂಬದ ಜೊತೆಗೆ ಹೆಚ್ಚು ಕಾಲ ಕಳೆಯಿರಿ: ನೀವು ನಿಮ್ಮ ಸಮಯವನ್ನು ಯಾರ ಜೊತೆ ಹೆಚ್ಚು ಕಳೆಯುತ್ತೀರಿ ಎಂಬುದು ಖಂಡಿತಾ ನಿಮ್ಮ ಬದುಕಿನ ಖುಷಿಯ ಕಾರಣಗಳಲ್ಲೊಂದು. ಬದುಕಿನ ಎಂಥ ಕ್ಷಣದಲ್ಲಾದರೂ ಕುಟುಂಬದ ಸಹಕಾರ, ಬೆಂಬಲ ಬಹಳ ಮುಖ್ಯ. ಸಮಯ ಕಳೆಯುವುದೆಂದರೆ, ಮನೆಯಲ್ಲಿ ಜೊತೆಗಿರುವುದು ಅಷ್ಟೇ ಅಲ್ಲ. ಮಕ್ಕಳ ಜೊತೆಗೊಂದು ವಾಕ್‌, ಹೆತ್ತವರ ಜೊತೆಗೆ ಮನಬಿಚ್ಚಿ ಹರಟೆ, ರಜೆಯಿದ್ದಾಗ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುವುದು ಇತ್ಯಾದಿಗಳು ಕುಟುಂಬದೊಳಗಿನ ಬಾಂಧವ್ಯವನ್ನು ಗಟ್ಟಿಗಳಿಸುತ್ತದೆ.

೯. ಬೆಳವಣಿಗೆಯ ಬಗ್ಗೆ ಗಮನ ಕೊಡಿ: ಒಂದು ವಯಸ್ಸಿನ ನಂತರ ಕಲಿಕೆ ಸಾಮಾನ್ಯವಾಗಿ ನಿಂತುಬಿಡುತ್ತದೆ. ಆದರೆ ನಮ್ಮ ಬೆಳವಣಿಗೆಯ ದೃಷ್ಟಿಯಿಂದ ನಾವು ಬದುಕಿನಲ್ಲಿ ತೆರೆದ ಮನಸ್ಸುಗಳಾಗಿರಬೇಕು. ಯಾವುದೇ ಹೊಸ ವಿಚಾರಗಳಿಗೆ ಮನಸ್ಸು ಸದಾ ತೆರೆದಿರಬೇಕು. ಹೊಸತನ್ನು ಕಲಿತ, ರೂಢಿಸಿಕೊಂಡ ಮನಸ್ಸು ಸದಾ ಖುಷಿಯಾಗಿರುತ್ತದೆ. ಖುಷಿಯ ಮಾನಸಿಕ ಸ್ಥಿತಿ ಆರೋಗ್ಯದ ಲಕ್ಷಣ.

೧೦. ಹೆಚ್ಚು ನಕ್ಕುಬಿಡಿ: ಬಹುತೇಕರು ಕೆಲಸದೊತ್ತಡ ಎಂದು ಬದುಕಿನಲ್ಲಿ ನಗುವುದನ್ನೇ ಬಿಟ್ಟು ಬಿಟ್ಟಿರುತ್ತಾರೆ. ಆದರೆ, ನಗುವೇ ಈ ಒತ್ತಡಕ್ಕೆ ಮದ್ದು ಎಂಬುದು ಗೊತ್ತಿರುವುದಿಲ್ಲ ಅಷ್ಟೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕೀಲಿ ಕೈ ನಗುವಿನಲ್ಲೇ ಅಡಗಿದೆ. ಹಾಗಾಗಿ, ಹೆಚ್ಚು ನಗಿ, ಹೆಚ್ಚು ಖುಷಿಯಾಗಿರಿ.

ಇದನ್ನೂ ಓದಿ | Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ

Exit mobile version