ಕ್ಯಾನ್ಸರ್ ಎಂಬ ಮಹಾಮಾರಿ ಎಂಥ ರೋಗವೆಂದರೆ ಇದು ತನ್ನ ಜೀವಕೋಶಗಳನ್ನು ದೇಹದ ಒಂದು ಭಾಗದಲ್ಲಿ ಬೆಳೆಸಲು ಶುರು ಮಾಡಿತೆಂದರೆ ಮತ್ತೆ ತನ್ನ ಯಾತ್ರೆಯನ್ನು ಅಷ್ಟು ಸುಲಭದಲ್ಲಿ ಕೊನೆಗೊಳಿಸುವುದಿಲ್ಲ. ಆರೋಗ್ಯವಂತ ಜೀವಕೋಶಗಳನ್ನೆಲ್ಲ ನೆಲಕಚ್ಚಿಸಿ ತನ್ನ ಸಾಮ್ರಾಜ್ಯವನ್ನು ಕಟ್ಟುವ ರಕ್ಕಸ ಇದು.
ಕೆಲವೊಮ್ಮೆ, ಕ್ಯಾನ್ಸರ್ ಜೀವಕೋಶಗಳು ದೇಹದ ಒಂದು ಭಾಗದಲ್ಲಿ ಬೆಳೆಯಲು ಆರಂಭಿಸಿದರೆ, ಇನ್ನೊಂದು ಭಾಗಕ್ಕೂ ವರ್ಗಾಯಿಸಿಕೊಂಡು ಅಲ್ಲೂ ತಮ್ಮ ಪ್ರಭುತ್ವ ಮೆರೆಯುತ್ತವೆ. ಇದನ್ನು ಮೆಟಾಸ್ಟಾಸಿಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಕ್ಯಾನ್ಸರ್‌ನಿಂದಾಗಿ ಮರಣ ಸಂಭವಿಸುವ ಪ್ರಕರಣಗಳ ಪೈಕಿ, ಹೆಚ್ಚು ಮಂದಿ ದುರ್ವ್ಯಸನಗಳಿಗೆ ಬಲಿಯಾದವರೇ ಆಗಿದ್ದಾರೆ ಎಂದುದು ಗಮನಾರ್ಹ.
ಅದರ ಪ್ರಕಾರ ಶೇ. 44.4ರಷ್ಟು ಕ್ಯಾನ್ಸರ್ ಸಾವುಗಳು ಖಂಡಿತವಾಗಿಯೂ ಲೈಫ್‌ಸ್ಟೈಲ್ ಬದಲಾವಣೆಗಳಿಂದಲೇ ಆಗಿರುತ್ತದೆ ಎಂದಿದೆ. ಧೂಮಪಾನ, ಮಧ್ಯಪಾನ ಹಾಗೂ ಬೊಜ್ಜು ಈ ಮೂರು ಅಂಶಗಳು ಕ್ಯಾನ್ಸರ್‌ನಿಂದಾಗುವ ಸಾವಿನ ಪ್ರಮಾಣವನ್ನು ಹೆಚ್ಚು ನಿರ್ಧರಿಸುತ್ತವೆ ಎಂದು ವರದಿ ಹೇಳಿದೆ. ಇವುಗಳಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವಿಗೀಡಾದವರಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚಿದ್ದರೆ, ಬೊಜ್ಜು ಹಾಗೂ ಮದ್ಯಪಾನಿಗಳ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿದೆ. ಹಾಗಾಗಿ. ಕ್ಯಾನ್ಸರ್ ತರಿಸುವ ಈ ದುರಭ್ಯಾಸಗಳು ಸಾವಿನ ದವಡೆಗೆ ತಳ್ಳುತ್ತವೆ ಎಂಬುದು ಈ ವರದಿಯ ಸಾರಾಂಶ.
ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಹಾಗೂ ಕ್ಯಾನ್ಸರ್‌ನಿಂದ ಸಾವಿಗೀಡಾಗುವ ಸಂಭವ ಇತರರಿಗಿಂತ 15- 30ರಷ್ಟು ಪಟ್ಟು ಹೆಚ್ಚಿರುತ್ತದೆ ಎನ್ನುತ್ತದೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ). ಇದರ ಪ್ರಕಾರ ಧೂಮಪಾನಿಗಳೆಂದರೆ ಯಾವಾಗಲಾದರೊಮ್ಮೆ ಧೂಮಪಾನ ಮಾಡುವವರಿಂದ ಹಿಡಿದು, ನಿತ್ಯ ಪ್ಯಾಕೆಟ್ಟುಗಳನ್ನು ಖಾಲಿ ಮಾಡುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಸಿಗರೇಟಿನಲ್ಲಿರುವ ರಾಸಾಯನಿಕ ನಮ್ಮ ಡಿಎನ್‌ಎಯನ್ನು ಹಾಳುಗೆಡಹುವುದಲ್ಲದೆ, ಇದನ್ನು ಮತ್ತೆ ಸುಸ್ಥಿತಿಗೆ ತರುವುದು ಸುಲಭವಲ್ಲ. ಇದು ನಮ್ಮನ್ನು ಕ್ಯಾನ್ಸರ್‌ನಿಂದ ರಕ್ಷಿಸುವ ಡಿಎನ್‌ಎಯನ್ನೇ ನಾಶಪಡಿಸುತ್ತದೆ.
ಇದನ್ನೂ ಓದಿ | Cancer Update | ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆಹಚ್ಚುವ ಲೆನ್ಸ್ ಅಭಿವೃದ್ಧಿ, ಹೇಗಿದರ ಕಾರ್ಯ?
ಬೊಜ್ಜು ಕೂಡಾ ನಮ್ಮ ಶತ್ರು. ಹೆಚ್ಚು ತೂಕವುಳ್ಳ ಮಂದಿಗೆ ಕ್ಯಾನ್ಸರ್ ಬರುವ ಸಂಭವ ಹೆಚ್ಚು ಎನ್ನುತ್ತದೆ ಈ ವರದಿ. ಇದರ ಪ್ರಕಾರ ಬೊಜ್ಜುಳ್ಳ ವ್ಯಕ್ತಿಗೆ ಸುಮಾರು 13 ಬಗೆಯ ಕ್ಯಾನ್ಸರ್ ಬರಬಹುದು. ಸ್ತನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಪಿತ್ತಕೋಶ, ಮೆದೋಜೀರಕಾಂಗ, ಕಿಡ್ನಿ, ಗರ್ಭಕೋಶ, ರಕ್ತ, ಮಿದುಳು, ಥೈರಾಯ್ಡ್, ಹೊಟ್ಟೆ, ಕರುಳು ಹೀಗೆ ಅನೇಕ ಬಗೆಯ ಕ್ಯಾನ್ಸರ್ ಬರುವ ಸಂಭವ ಹೆಚ್ಚು.
ಕುಡಿತವೆಂಬ ಚಟ ನಾನಾ ರೋಗಗಳನ್ನು ಆಹ್ವಾನಿಸುತ್ತದೆ. ಬಾಯಿ, ಅನ್ನನಾಳ, ಸ್ತನ ಹಾಗೂ ಇತರ ಹಲವು ಬಗೆಯ ಕ್ಯಾನ್ಸರ್ ಕುಡಿತಕ್ಕೆ ಶರಣಾದ ಮಂದಿಗೆ ಬರುವ ಸಂಭವ ಹೆಚ್ಚು. ಆಲ್ಕೋಹಾಲ್ ದೇಹದೊಳಕ್ಕೆ ಪ್ರವೇಶಿಸಿದ ಮೇಲೆ ಹಲವು ರಾಸಾಯನಿಕಗಳಾಗಿ ಬದಲಾಗಿ ನಮ್ಮ ದೇಹದಲ್ಲಿರುವ ರಾಸಾನಿಕಗಳ ಜೊತೆ ಸೇರಿ ಬೇರೆಯದೇ ಆಗಿ ಮಾರ್ಪಾಡಾಗುವ ಜೊತೆಗೆ ಕ್ಯಾನ್ಸರ್‌ಗೆ ಆಹ್ವಾನ ನೀಡುತ್ತದೆ.
ಹಾಗಾಗಿ ಆದಷ್ಟೂ ಈ ಮೂರು ಬಗೆಯ ದುರ್ವ್ಯಸನಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಕೇವಲ ಇವಿಷ್ಟಲ್ಲದೆ, ಇನ್ನೂ ಹಲವು ಬಗೆಯ ಅನಾರೋಗ್ಯಕರ ಲೈಫ್‌ಸ್ಟೈಲ್ ರೂಢಿಸಿಕೊಂಡ ಮಂದಿಗೆ ಕ್ಯಾನ್ಸರ್ ಸಂಭವನೀಯತೆ ಸಾಮಾನ್ಯರಿಗಿಂತ ಹೆಚ್ಚಿರುತ್ತದೆ. ಪ್ರತಿನಿತ್ಯ ಅನಾರೋಗ್ಯಕರ ಜಂಕ್ ತಿಂಡಿ ತಿನ್ನುವುದು, ಸೋಡಾ, ಕೃತಕ ಬಣ್ಣಗಳ ಆಹಾರ ವಸ್ತುಗಳ ಸೇವನೆ ಆರೋಗ್ಯಕರವಲ್ಲ ಎಂಬುದನ್ನು ನೆನಪಿಡಿ. ಇದಲ್ಲದೆ, ವ್ಯಾಯಾಮಕ್ಕೆ ಸಮಯ ಕೊಡದಿರುವುದೂ ಆರೋಗ್ಯಕರವಲ್ಲ. ಬಾಯಿಯ ಆರೋಗ್ಯಕ್ಕೆ ಹೆಚ್ಚು ಗಮನ ನೀಡುವುದು ಕೂಡಾ ಒಳ್ಳೆಯದೇ. ಇದೂ ಕೂಡಾ ಹಲವು ಬಗೆಯ ಕ್ಯಾನ್ಸರ್ ರೋಗಕ್ಕೆ ಆಹ್ವಾನ ನೀಡುತ್ತದೆ. ತಂಬಾಕುಯುಕ್ತ ಬೀಡಾ ಸೇವನೆಯೂ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
ಇದನ್ನೂ ಓದಿ | Breast Cancer Treatment | ದೇಶದಲ್ಲೇ ಮೊದಲ ಬಾರಿಗೆ ಸ್ತನ ಕ್ಯಾನ್ಸರ್ ಔಷಧಕ್ಕೆ DCGI ಅನುಮತಿ