ಸಂದರ್ಶನ : ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾದರೂ ಸಿಕ್ಕ ಸಮಯದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡವರು ಅಮೃತ್ ಕೌರ್ ಕಲೇರ್. ಹೊರರಾಜ್ಯದವರಾದರೂ ಇದೀಗ ಕನ್ನಡಿಗರೇ ಆಗಿರುವ ಇವರು ಪ್ಯಾಥಾಲಾಜಿ ವಿಷಯದಲ್ಲಿ ಸೀನಿಯರ್ ಪ್ರೊಫೆಸರ್. ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ನಿಷ್ಠೆ ಇದ್ದಲ್ಲಿ ಮಹಿಳೆ ರಾಣಿಯಂತೆ ಬದುಕಬಹುದು. ಗುರಿ-ಛಲ ಮನದಲ್ಲಿದ್ದರೇ, ಜೀವನದಲ್ಲಿ ಕೈಗೆಟಕದ್ದನ್ನು ಸಾಧಿಸಬಹುದು ಎನ್ನುವ ಇವರು ಈಗಾಗಲೇ ಮಿಸೆಸ್ ಯುನೈಟೆಡ್ ನೇಷನ್ ಇಂಟರ್‌ನ್ಯಾಷನಲ್(೨೦೧೬)ಹಾಗೂ ವರ್ಲ್ಡ್ ಅಂಬಾಸಡರ್(ಯುಎನ್)ಹಾಗೂ ಪೆಸಿಫಿಕ್ ಕ್ವೀನ್ ಆಫ್ ಸಬ್ಸ್ಟನ್ಸ್ ಕ್ರೌನ್ ತಮ್ಮದಾಗಿಸಿಕೊಂಡಿದ್ದಾರೆ.
ವಿಸ್ತಾರದೊಂದಿಗೆ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್ ಕಾಲಂನಲ್ಲಿ ಮಾತನಾಡಿರುವ ಅಮೃತ್, ತಮ್ಮ ಪ್ರೊಫೆಷನ್ ಜತೆಜತೆಗೆ ಫ್ಯಾಷನ್‌ಲೋಕದಲ್ಲಿನ ತಮ್ಮ ಕನಸು ನನಸು ಮಾಡಿಕೊಂಡ ಬಗ್ಗೆ ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬಯಸುವ ವಿವಾಹಿತರಿಗೆ ಕಿವಿಮಾತು ಹೇಳಿದ್ದಾರೆ.
ವಿಸ್ತಾರ : ವೈದ್ಯಕೀಯ ಕ್ಷೇತ್ರದಲ್ಲಿ ಬ್ಯುಝಿಯಾಗಿದ್ದ ತಾವು ಫ್ಯಾಷನ್ ಕ್ಷೇತ್ರಕ್ಕೂ ಕಾಲಿಟ್ಟದ್ದು ಯಾಕೆ ?
ಅಮೃತ್ ಕಲೇರ್ : ಮೊದಲಿನಿಂದಲೂ ನನಗೆ ಫ್ಯಾಷನ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು. ಮಾಡೆಲ್ ಆಗಬೇಕು ಎಂಬ ಆಸೆ ಇತ್ತು. ಮದುವೆಗೂ ಮುನ್ನ ಕಾರಣಾಂತರಗಳಿಂದ ಆಗಲಿಲ್ಲ. ಮದುವೆಯಾದ ನಂತರ ಅದರಲ್ಲೂ ಪ್ರೊಫೆಸರ್ ಆದ ನಂತರ ವಿವಾಹಿತರಿಗೆ ನಡೆಯುವ ಪೇಜೆಂಟ್‌ನಲ್ಲಿ ಪ್ರತಿನಿಧಿಸುವ ಸದವಕಾಶ ದೊರೆಯಿತು. ಕಂಡ ಕನಸು ನನಸಾಯಿತು.
ವಿಸ್ತಾರ : ಸೌಂದರ್ಯ ಸ್ಪರ್ಧೆಗಳಲ್ಲಿ ಆಸಕ್ತಿ ಇರುವ ವಿವಾಹಿತ ಮಹಿಳೆಯರಿಗೆ ಏನು ಹೇಳಲು ಇಷ್ಟಪಡುತ್ತೀರಾ?
ಅಮೃತ್ ಕಲೇರ್ : ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬಯಸುವ ವಿವಾಹಿತ ಮಹಿಳೆಯರು ಮೊದಲು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಅಷ್ಟು ಮಾತ್ರವಲ್ಲ, ಡಯಟ್‌ನಿಂದಿಡಿದು, ನ್ಯಾಚುರಲ್ ಬ್ಯೂಟಿ ತಮ್ಮದಾಗಿಸಿಕೊಳ್ಳುವ ಗಮನ ನೀಡಬೇಕು. ಅಷ್ಟು ಮಾತ್ರವಲ್ಲ, ಸಾಮಾನ್ಯ ಜ್ಞಾನದ ಅರಿವು ಹೆಚ್ಚಿಸಿಕೊಳ್ಳಬೇಕು. ಅದೃಷ್ಟ ಹಾಗೂ ಹಣೆಬರಹವನ್ನು ಫಾಲೋ ಮಾಡುವ ಬದಲು, ಕೊಂಚ ಸಮಯ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು.
ವಿಸ್ತಾರ : ಸೌಂದರ್ಯ ಸ್ಪರ್ಧೆ ಎಂದಾಕ್ಷಣಾ ತೆಳ್ಳಗೆ ಬೆಳ್ಳಗೆ ಇರಬೇಕು ಎಂಬ ಮನೋಭಾವನೆ ಇದೆಯಲ್ಲ!
ಅಮೃತ್ ಕಲೇರ್ : ಇಂದು ನಡೆಯುವ ಬಹುತೇಕ ವಿವಾಹಿತರ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಝೀರೊ ಸೈಜ್ ಬೇಕಿಲ್ಲ! ಒಣಗಿದಂತೆ ಇರಬೇಕಾಗಿಲ್ಲ. ಫಿಟ್ ಆ್ಯಂಡ್ ಫೈನ್ ಆಗಿರಬೇಕಷ್ಟೇ!. ನೋಡಲು ಸುಂದರವಾಗಿ ಕಾಣುವುದಷ್ಟೇ ಮುಖ್ಯವಲ್ಲ. ಜತೆಗೆ ಆರೋಗ್ಯವಾಗಿಯೂ ಇರಬೇಕು. ಝೀರೊ ಸೈಜ್ ಕ್ರೇಜ್ ಮೊದಲು ಹೆಚ್ಚಾಗಿತ್ತು. ಆದರೆ, ಈಗಿಲ್ಲ!
ವಿಸ್ತಾರ : ಗ್ರೂಮಿಂಗ್ ಪ್ರತಿಯೊಬ್ಬರಿಗೂ ಅಗತ್ಯವೇ?
ಅಮೃತ್ ಕಲೇರ್ : ಖಂಡಿತಾ. ರ್ಯಾಂಪ್‌ನ ಎಬಿಸಿಡಿ ತಿಳಿಯಲು ಗ್ರೂಮಿಂಗ್ ಸೆಷನ್‌ನಿಂದಿಡಿದು, ಎಲ್ಲದಕ್ಕೂ ಸಿದ್ಧವಾಗಬೇಕು. ಈಗೆಲ್ಲಾ ಇದಕ್ಕೆಂದೇ ಸಾಕಷ್ಟು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ವಿಸ್ತಾರ : ಸೌಂದರ್ಯವನ್ನು ನೀವು ಹೇಗೆ ಬಣ್ಣಿಸುತ್ತೀರಾ?
ಅಮೃತ್ ಕಲೇರ್ : ಒಂದು ಹೆಣ್ಣು ಸುಂದರವಾಗಿ ಕಾಣಲು ಆಕೆಯ ಝೀರೊ ಸೈಜ್ ಮುಖ್ಯವಲ್ಲ. ಆಕೆಯ ನಗು ಮುಖ, ಆಕೆಯ ಪಾಸಿಟಿವ್ ಸ್ವಭಾವ, ಸದಾ ಸಕಾರಾತ್ಮಕವಾಗಿ ಯೋಚಿಸುವ ಮನಸ್ಸು ಹೊಂದಿರುವವಳೇ ನಿಜವಾದ ಸುಂದರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ| Star Fashion | ಗ್ಲಾಮರಸ್ ನಟಿ ಜಾಹ್ನವಿ ಕಪೂರ್ ಸೀರೆ-ಜುಮಕಿ ಪ್ರೇಮ