Site icon Vistara News

Celebrity Fashion Corner | ಆತ್ಮವಿಶ್ವಾಸವೇ ಸೌಂದರ್ಯದ ಪ್ರತಿಬಿಂಬ: ಪ್ರತಿಭಾ ಸೌಂಶಿಮಠ್‌

Celebrity Fashion Corner

ಸಂದರ್ಶನ: ಶೀಲಾ ಸಿ. ಶೆಟ್ಟಿ

ವಿಸ್ತಾರ: ಮಿಸೆಸ್ ಇಂಡಿಯಾ ಕ್ರೌನ್ ಮುಡಿಗೇರಿಸಿಕೊಳ್ಳುವ ಮೊದಲು ನೀವು ಎದುರಿಸಿದ ಸವಾಲುಗಳೇನು?

ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ನಾನು ಮಿಸೆಸ್‌ ಇಂಡಿಯಾ ಟೈಟಲ್‌ ಗೆಲ್ಲಲು ಪ್ರಮುಖ ಕಾರಣ ನನ್ನ ಮಗಳು. ಆಕೆ ನೀಡಿದ ಪ್ರೊತ್ಸಾಹ ನನಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿತ್ತು. ಅದಕ್ಕೂ ಮೊದಲು ಎಲ್ಲಾ ಹೆಣ್ಣು ಮಕ್ಕಳು ಎದುರಿಸುವ ಸವಾಲುಗಳು ನನ್ನ ಜೀವನದಲ್ಲೂ ಇತ್ತು. ಒಂದು ತುಂಬು ಕುಟುಂಬದ ಸೊಸೆಯಾಗಿದ್ದ ನನಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅತ್ತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಗಲ ಮೇಲಿತ್ತು. ಅವರ ಸೇವೆ ಮಾಡುವುದರಲ್ಲೆ ಬಿಝಿಯಾಗಿದ್ದ ನನಗೆ ಕೊಂಚ ಬದಲಾವಣೆ ಬೇಕು ಎಂದೆನಿಸಿದಾಗ ಹೊರ ಪ್ರಪಂಚಕ್ಕೆ ಎಳೆದದ್ದು ನನ್ನ ಮಗಳು. ನಿಮಗೆ ಗೊತ್ತೇ! ಸೌಂದರ್ಯ ಸ್ಪರ್ಧೆಗೆ ತಯಾರಾದಾಗ ನನ್ನ ಬಳಿ ಹಲವಾರು ರೌಂಡ್‌ಗಳಿಗೆ ಧರಿಸಲು ಡಿಸೈನರ್‌ವೇರ್‌ಗಳಿರಲಿಲ್ಲ. ಮಗಳ ಔಟ್‌ಫಿಟ್‌ಗಳೇ ಆ ಸಮಯದಲ್ಲಿ ನನಗೆ ಸಹಾಯ ಮಾಡಿದವು. ಈ ಮಧ್ಯೆ ಡಿಸೈನರ್‌ ಮೀರಜ್‌ ಎಥ್ನಿಕ್‌ ರೌಂಡ್‌ಗೆ ಡಿಸೈನರ್‌ವೇರ್‌ ಕಲ್ಪಿಸಿ ಸಹಾಯ ಮಾಡಿದ್ದರು. ಆಗ ನನ್ನ ಗುರಿ ಕೇವಲ ಮಿಸೆಸ್‌ ಇಂಡಿಯಾ ಕ್ರೌನ್‌ ಗೆಲ್ಲುವುದಾಗಿರಲಿಲ್ಲ. ಬದಲಿಗೆ ಜೀವನೋತ್ಸಾಹ ಹೆಚ್ಚಿಸಿಕೊಳ್ಳುವುದಾಗಿತ್ತು. ನಂತರ ನಡೆದಿದ್ದು ಈಗ ಇತಿಹಾಸ.

ವಿಸ್ತಾರ : ವಿಜೇತರಾದ ನಂತರ ಕರ್ನಾಟಕದಲ್ಲಿ ಪೇಜೆಂಟ್ ಹುಟ್ಟುಹಾಕಿದ ಕ್ರೆಡಿಟ್ ನಿಮಗೆ ಸಲ್ಲುತ್ತದೆ. ಈ ಬಗ್ಗೆ ವಿವರಿಸಿ.

ದಕ್ಷಿಣ ಭಾರತದಲ್ಲಿ ಅಲ್ಲಿಯವರೆಗೂ ಯಾರೂ ಕೂಡ ಮಿಸೆಸ್‌ ಇಂಡಿಯಾ ಕ್ರೌನ್‌ ಗೆದ್ದಿರಲಿಲ್ಲ. ಮಿಸೆಸ್‌ ಇಂಡಿಯಾ ಟೈಟಲ್‌ ನಂತರ ಮಿಸೆಸ್‌ ಏಷಿಯಾ ಇಂಟರ್‌ನ್ಯಾಷನಲ್‌ ಫೋಟೋಜೆನಿಕ್‌ ೨೦೧೫ ಟೈಟಲ್‌ ನನ್ನದಾಗಿಸಿಕೊಂಡೆ. ಇನ್ನು ಮಿಸೆಸ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯನ್ನು ಆರಂಭಿಸಿದ ದಿನಗಳಲ್ಲಿ ಯಾವುದೇ ಆಯೋಜಕರು ದೊರೆಯದೇ ಪ್ರಾಜೆಕ್ಟ್‌ ಮುಂದೂಡುತ್ತಿದ್ದೆ. ಆಗ ಮೊದಲಿಗೆ ನನ್ನ ಸಹೋದರಿಯೇ ಸಹಾಯ ಹಸ್ತ ಚಾಚಿದಳು. ನಂತರ ಚಿಕ್ಕ-ಪುಟ್ಟ ಆಯೋಜಕರು ಸಿಕ್ಕರು. ಮೊದಲ ಬಾರಿಯೇ ಪೇಜೆಂಟ್‌ ಊಹೆಗೂ ಮೀರಿ ಯಶಸ್ವಿಯಾಯಿತು.

ವಿಸ್ತಾರ: ಫ್ಯಾಷನ್ ಕ್ಷೇತ್ರದಲ್ಲಿ ನಿಮ್ಮ ಕನಸು ನನಸಾದ ಕ್ಷಣ ಯಾವುದು?

ಕೌಲಾಲಂಪುರ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿದಾಗ ನನ್ನ ಆನಂಧಕ್ಕೆ ಪಾರವೇ ಇಲ್ಲದಂತಾಗಿತ್ತು.

ವಿಸ್ತಾರ: ನಿಮ್ಮ ಫ್ಯಾಷನ್ ಮತ್ತು ಸ್ಟೈಲ್ ಸ್ಟೇಟ್ಮೆಂಟ್ ಬಗ್ಗೆ ಸಿಂಪಲ್ಲಾಗಿ ಹೇಳಿ?

ನಾನು ಸೀರೆ ಪ್ರೇಮಿ. ಇನ್ನು ಬ್ರೈಟ್‌ ಕಲರ್ಸ್ ಅಂದ್ರೆ ನನಗಿಷ್ಟ. ವೆಸ್ಟರ್ನ್ ವೇರ್‌ ಕೂಡ ಸೂಟ್‌ ಆಗುತ್ತದೆ. ಆಯಾ ಸಂದರ್ಭಕ್ಕೆ ತಕ್ಕಂತೆ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಾಗುತ್ತದೆ.

ವಿಸ್ತಾರ: ಬ್ಯೂಟಿ ಪೇಜೆಂಟ್‌ನ ಅಡಿಷನ್‌ಗಳಲ್ಲಿ ಪಾಲಿಸಬೇಕಾದ ನಿಯಮಗಳೇನು?

ಮೊದಲು ಪೇಜೆಂಟ್‌ನ ರೂಲ್ಸ್‌ ಫಾಲೋ ಮಾಡಬೇಕು. ಸೆಲ್ಫ್‌ ಇಂಟ್ರೋಡಕ್ಷನ್‌ ಮಾಡಿಕೊಳ್ಳುವುದರೊಂದಿಗೆ ಜ್ಯುರಿ ಟೀಮ್‌ನೊಂದಿಗೆ ಮಾತನಾಡುವ ರೀತಿ-ನೀತಿಗಳನ್ನು ತಿಳಿದುಕೊಳ್ಳಬೇಕು.

ವಿಸ್ತಾರ: ವಿವಾಹಿತರ ಸೌಂದರ್ಯ ಸ್ಪರ್ಧೆಗೆ ಹೋಗಲಿಚ್ಛಿಸುವವರಿಗೆ ಒಂದಿಷ್ಟು ಟಿಪ್ಸ್ ನೀಡುವಿರಾ?

ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ವಯಸ್ಸಿನ ಬಗ್ಗೆ ಯೋಚಿಸಬೇಡಿ. ಸಂದರ್ಭಕ್ಕೆ ತಕ್ಕಂತೆ ಸ್ಟೈಲಿಂಗ್‌ ಮಾಡುವುದನ್ನು ಅರಿತುಕೊಳ್ಳಿ. ಮಾತನಾಡುವ ಕಲೆ ರೂಢಿಸಿಕೊಳ್ಳಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Celebrity Fashion Corner: ಸಿಂಪಲ್ಲಾಗಿರಲಿ ಫಿಟ್ನೆಸ್‌ ಫ್ಯಾಷನ್‌

Exit mobile version