Site icon Vistara News

Bed wetting: ಮಕ್ಕಳ ಹಾಸಿಗೆ ಒದ್ದೆ: ಅಮ್ಮಂದಿರ ಈ ಸಮಸ್ಯೆಗೆ ಪರಿಹಾರವೇನು?

bedwetting

ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಂದಿರಿಗೆ ಅವರು ಎಂದೆಂದಿಗೂ ಮಕ್ಕಳೇ ಎಂಬ ಮಾತೊಂದಿದೆ. ಆದರೆ, ಮಕ್ಕಳ ಸರ್ವತೋಮುಖ ಬೆಳವಣಿಗೆಯ ವಿಷಯ ಬಂದಾಗ ಮಕ್ಕಳು ಯಾವ ಸಮಸ್ಯೆಗೂ ಒಳಗಾಗದಿರಲಿ ಎಂದೇ ತಾಯಿ ಬಯಸುತ್ತಾಳೆ. ಹೊರಗಿನಿಂದ ನೋಡಿದಾಗ ಕೆಲವು ಸಮಸ್ಯೆಗಳು ಸಣ್ಣದಾಗಿ ಕಾಣಿಸಿದರೂ, ಹೆತ್ತವರಿಗೆ ಅವುಗಳು ನಿಜವಾದ ಸಮಸ್ಯೆಯೇ. ಅಂಥದ್ದರಲ್ಲಿ, ಬಹಳಷ್ಟು ತಾಯಂದಿರನ್ನು ಸಾಮಾನ್ಯವಾಗಿ ಕಾಡುವ ಮಕ್ಕಳ ಸಮಸ್ಯೆ ಎಂದರೆ, ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಅರ್ಥಾತ್‌ ರಾತ್ರಿ ಹಾಸಿಗೆಯಲ್ಲೇ ಮೂತ್ರ ಮಾಡುವ ಸಮಸ್ಯೆ.

ಮಕ್ಕಳು ಒಂದು ಹಂತದ ನಂತರ ಸಾಮಾನ್ಯವಾಗಿ ಸುಮಾರು ನಾಲ್ಕೈದು ವಯಸ್ಸಿನ ಸಂದರ್ಭದಲ್ಲಿ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುತ್ತವೆ. ಆದರೆ, ಕೆಲವು ಮಕ್ಕಳಲ್ಲಿ ಮಾತ್ರ ಇದು ಮುಂದುವರಿಯುತ್ತದೆ. ಟಾಯ್ಲೆಟ್‌ ಟ್ರೈನಿಂಗ್‌ ಆದ ಮಕ್ಕಳೂ ಕೂಡಾ ರಾತ್ರಿ ಹಾಸಿಗೆ ಒದ್ದೆ ಮಾಡಬಹುದು. ಏಳನೇ ವಯಸ್ಸಿನಿಂದ ಮಕ್ಕಳು ಹಾಸಿಗೆ ಸತತ ಮೂರು ತಿಂಗಳುಗಳಿಂದ ವಾರದಲ್ಲಿ ಮೂರು ದಿನಕ್ಕಿಂತ ಹೆಚ್ಚು ಬಾರಿ ಹಾಸಿಗೆ ಒದ್ದೆ ಮಾಡುತ್ತಿದ್ದಾರೆಂದಾದಲ್ಲಿ ಅದು ಸಮಸ್ಯೆಯೇ. ಅಂಥ ಸಂದರ್ಭದಲ್ಲಿ ವೈದ್ಯರ ಸಲಹೆ ಮಾರ್ಗದರ್ಶನ ಅತ್ಯಗತ್ಯ.

ಆದರೂ ಮಕ್ಕಳ ಈ ಸಮಸ್ಯೆ ನಿಜವಾಗಿಯೂ ಅಂಥ ದೊಡ್ಡ ಸಮಸ್ಯೆಯೇನಲ್ಲ. ಮಕ್ಕಳ ಮೂತ್ರಕೋಶ ಒಂದಿಡೀ ರಾತ್ರಿಯ ಮೂತ್ರವನ್ನು ಹಿಡಿದಿಡುವಷ್ಟು ಬೆಳೆದಿರುವುದಿಲ್ಲ. ಬಹಳಷ್ಟು ಸಾರಿ, ಮಕ್ಕಳಿಗೆ ಯಾವಾಗ ಎದ್ದು ಟಾಯ್ಲೆಟ್ಟಿಗೆ ಹೋಗಬೇಕೆಂದು ಗೊತ್ತಾಗುವುದಿಲ್ಲ. ಅಷ್ಟೇ ಅಲ್ಲ, ಕೆಲವು ಬಾರಿ ಒತ್ತಡದಿಂದಲೂ ಹೀಗಾಗುತ್ತದೆ. ಮಕ್ಕಳ ಮೇಲೆ ಮನೆಯಲ್ಲಿ ಮಾನಸಿಕವಾಗಿ ಒತ್ತಡ ಬೀಳುವುದರಿಂದಲೂ ಅದು ಈ ರೀತಿಯ ಪ್ರತಿಕ್ರಿಯೆಯಾಗಿಬಿಡುವ ಸಂಭವವೂ ಇದೆ. ಅಥವಾ ಶಾಲೆಯಲ್ಲಿನ ಒತ್ತಡವೂ ಕಾರಣವಿರಬಹುದು. ಹಿಂಸೆಗೆ ಒಳಗಾದ ಮಕ್ಕಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಬಹಳ ಕಡಿಮೆ ಸಂದರ್ಭಗಳಲ್ಲಿ, ಮಗುವಿಗೆ ಯಾವುದಾದರೂ ಬೇರೆ ಆರೋಗ್ಯದ ಸಮಸ್ಯೆಯೂ ಇರಬಹುದು. ಇಂಥ ಸಂದರ್ಭ ವೈದ್ಯರನ್ನು ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಬಹುದು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂದರ್ಭ ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ. ಈ ಹಿಂದೆ ಕುಟುಂಬದಲ್ಲಿ ಈ ಸಮಸ್ಯೆ ಯಾರಿಗಾದರೂ ಇದ್ದಿರಬಹುದೇ ಎಂಬುದನ್ನು ಪತ್ತೆಹಚ್ಚಿ. ಅನುವಂಶಿಕವಾಗಿಯೂ ಈ ಸಮಸ್ಯೆ ಬರುತ್ತದೆ. ಮಗು ದಿನವೂ ಹಾಸಿಗೆ ಒದ್ದೆ ಮಾಡುತ್ತಿದೆಯಾ, ಮಗು ಮಲಗುವ ಮೊದಲು ಏನು ಹಾಗೂ ಎಷ್ಟು ಕುಡಿಯುತ್ತದೆ ಹಾಗೂ ಹೀಗೆ ಕುಡಿದಾಗ ಮಾತ್ರ ಈ ಸಮಸ್ಯೆ ಕಾಡುತ್ತಿದೆಯಾ ಎಂಬಂಥ ಸಾಮಾನ್ಯ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಉತ್ತರ ಹುಡುಕಲು ಪ್ರಯತ್ನಿಸಬಹುದು. ಅದಕ್ಕೆ ಅನುಗುಣವಾಗಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Parenting | ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕಾದರೆ ಈ 10 ವಿಚಾರ ನೆನಪಿರಲಿ!

ಕೆಲವು ಮಕ್ಕಳು ಈ ಸಮಸ್ಯೆಯಿಂದ ಅಷ್ಟು ಸುಲಭವಾಗಿ ಹೊರಬರುವುದಿಲ್ಲ. ಅಮ್ಮಂದಿರು ಪ್ರಯತ್ನಗಳನ್ನೆಲ್ಲ ಮಾಡಿ ಸೋತು ಕೈಚೆಲ್ಲುವಂಥ ಪರಿಸ್ಥಿತಿಯೂ ಬರುತ್ತದೆ. ಅಂಥ ಸಂದರ್ಭದಲ್ಲಿ ಮಕ್ಕಳ ಮೇಲೆ ಗದರುವುದು ಸಲ್ಲದು. ಇದು ಮಾನಸಿಕವಾಗಿ ಮಕ್ಕಳನ್ನು ಅಧೀರರನ್ನಾಗಿಸುತ್ತದೆ. ಆಗ ಸಮಸ್ಯೆ ಇನ್ನೂ ಉಲ್ಬಣಿಸುವ ಸಾಧ್ಯತೆಯೇ ಹೆಚ್ಚು. ಮಕ್ಕಳಿಗೂ ತಾನು ಹಾಸಿಗೆ ಒದ್ದೆ ಮಾಡುತ್ತಿರುವೆನೆಂಬ ಬಗ್ಗೆ ಸಂಕೋಚ ಇರುತ್ತದೆ. ಎಲ್ಲರೆದುರು ಈ ಬಗ್ಗೆ ತಮಾಷೆ ಮಾಡುವುದು, ಮೂದಲಿಸುವುದು, ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡುವುದು ಸಲ್ಲದು. ಇದರಿಂದ ಮಗುವಿಗೆ ಇನ್ನಷ್ಟು ಹಿಂಜರಿಕೆ ಉಂಟಾಗಿ ಗೆಳೆಯರ ಮನೆಗಳಲ್ಲಿ ರಾತ್ರಿ ಉಳಿದುಕೊಳ್ಳಲು ಹಿಂಜರಿಯಬಹುದು. ಮಕ್ಕಳ ಅರಿವಿಲ್ಲದೆ ಈ ಕ್ರಿಯೆ ಆಗುವುದರಿಂದ ಅದನ್ನು ತಡೆಯುವುದು ಹೇಗೆಂದು ತಿಳಿಯದೇ ಮಗು ಗೊಂದಲಕ್ಕೀಡಾಗಬಹುದು. ಇದು ಮಾನಸಿಕವಾಗಿ ಮಕ್ಕಳನ್ನು ಇನ್ನಷ್ಟು ಜರ್ಜರಿತರನ್ನಾಗಿ ಮಾಡಬಹುದು. ಅದಕ್ಕಾಗಿ ಮಗುವಿನ ಜೊತೆಗೆ ಚೆನ್ನಾಗಿ ಮಾತನಾಡಿ, ಹಾಸಿಗೆ ಒದ್ದೆ ಮಾಡುವುದು ದೊಡ್ಡ ಸಮಸ್ಯೆ ಅಲ್ಲವೆಂದು ಅವರಿಗೆ ಮನದಟ್ಟು ಮಾಡಿ. ನೀವೂ, ಅವರು ಹಾಸಿಗೆ ಒದ್ದೆ ಮಾಡಿದಾಗ ಅನಗತ್ಯವಾಗಿ ರೇಗುವುದನ್ನು ಬಿಡಿ.

ಸುಲಭವಾಗಿ ಏನು ಮಾಡಬಹುದು ಎಂದರೆ, ಈ ಸಮಸ್ಯೆ ಇರುವ ಮಕ್ಕಳು ಮಲಗಲು ಹೋಗುವ ಮೊದಲು ಕುಡಿಯುವ ಪೇಯ, ನೀರಿಗೆ ನಿಯಂತ್ರಣ ಇರಲಿ. ಜಾಸ್ತಿ ಕುಡಿಯುವುದು ಬೇಡ. ಮಲಗುವ ಮುಂಚೆ ಟಾಯ್ಲೆಟ್ಟಿಗೆ ಹೋಗಿ ಬರುವ ಅಭ್ಯಾಸ ಮಾಡಿ.

ಸಾಮಾನ್ಯವಾಗಿ ಈ ಸಮಸ್ಯೆ ಇರುವ ಮಂದಿ ರಾತ್ರಿ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಒದ್ದೆ ಮಾಡುತ್ತಾರೆ. ಹಾಗಾಗಿ ಅಂಥ ಸಮಯವನ್ನು ಗಮನಿಸಿ ಆ ಸಮಯಕ್ಕೆ ಸರಿಯಾಗಿ ಅಲರಾಂ ಇಟ್ಟು ಮಕ್ಕಳನ್ನು ಬಚ್ಚಲಿಗೆ ಕರೆದುಕೊಂಡು ಹೋಗಲು ಆರಂಭಿಸಿ. ಅಥವಾ ಇದೆಲ್ಲ ಸಾಧ್ಯವಾಗುವುದಿಲ್ಲ ಎಂದಾದರೆ ರಬ್ಬರ್‌, ಪ್ಲಾಸ್ಟಿಕ್‌ ಹಾಸಿಗೆಯಲ್ಲಿ ಬಳಸಿ, ಬಟ್ಟೆ ಬದಲಾಯಿಸುವ ಅಭ್ಯಾಸ ಮಾಡಿ.

ಇದನ್ನೂ ಓದಿ: ಮಕ್ಕಳ ಹೆತ್ತವರಿಗೆ ದಕ್ಕುವ ಉಚಿತ ಸಲಹೆಗಳು ಮತ್ತು ಕಟು ಸತ್ಯಗಳು!

Exit mobile version