ಬಹಳಷ್ಟು ಮಂದಿಗೆ, ʻಔಷಧಿ ಸೇವಿಸುತ್ತಿದ್ದೇವೆ, ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ, ಆದರೂ ಯಾಕೆ ಕೊಲೆಸ್ಟೆರಾಲ್ ಮಟ್ಟವೇಕೆ ಇಳಿಯುತ್ತಿಲ್ಲ?ʼ(Cholesterol reducing) ಎಂಬುದೇ ಸಮಸ್ಯೆಯೆನಿಸಬಹುದು. ಹೌದು. ಇದು ಸಮಸ್ಯೆ ನಿಜ. ಆದರೆ, ನಮಗೆ ಹೊಳೆಯದ ಕೆಲವು ಸಾಮಾನ್ಯ ತೊಂದರೆಗಳೇ ಕೊಲೆಸ್ಟೆರಾಲ್ ಇಳಿಕೆಯಾಗದೆ ಇರಲು ಕಾರಣವಾಗಿರಬಹುದು ಎಂದರೆ ಒಪ್ಪಲೇಬೇಕು. ಹಾಗಾದರೆ ನಿಮ್ಮ ಸಮಸ್ಯೆಗೆ ಈ ಕೆಳಗಿನ ೧೦ ಕಾರಣಗಳಲ್ಲಿ ನಿಮ್ಮದೂ ಒಂದಾಗಿರಬಹುದು. ಓದಿ!
೧. ನಿಮ್ಮ ಆಹಾರದಲ್ಲಿ ನಿಮಗೆ ಗೊತ್ತೇ ಆಗದಂತೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕೊಬ್ಬನಂಶವಿರಬಹುದು: ಆರೋಗ್ಯಕರ ಆಹಾರ ಕ್ರಮ ಎಲ್ಲ ಸಮಸ್ಯೆಗಳಿಗೂ ಮುಖ್ಯ ಪರಿಹಾರ. ಆದರೆ ಕೊಲೆಸ್ಟೆರಾಲ್ ವಿಚಾರಕ್ಕೆ ಬಂದರೆ ಕೆಲವೊಂದು ಅಂಶಗಳನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಕೊಲೆಸ್ಟೆರಾಲ್ ಅಂದ ಕೂಡಲೇ ನಾವು ಸಾಮಾನ್ಯವಾಗಿ ಊಹಿಸಿಕೊಳ್ಳುವಂತೆ ಎಲ್ಲ ಕೊಬ್ಬಿನಂಶವನ್ನೂ ನಾವು ಕೈಬಿಟ್ಟು ಕೊಬ್ಬಿಗೇ ಗುಡ್‌ಬೈ ಹೇಳುವುದೇ ಹೆಚ್ಚು. ಆದರೆ, ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಬ್ಬನ್ನು ಬಿಟ್ಟರೆ ದೇಹ ಸರಿಯಾಗಿ ಕೆಲಸ ಮಾಡಬಲ್ಲದೇ ಎಂದು ಯೋಚಿಸುವುದಿಲ್ಲ. ಹಾಗಾಗಿ ಅನ್‌ಸ್ಯಾಚುರೇಟೆಡ್ ಫ್ಯಾಟ್ ಇರುವ ಆಹಾರವನ್ನು ತಿನ್ನುವುದನ್ನು ಬಿಡದೆ, ಸ್ಯಾಚುರೇಟೆಡ್ ಫ್ಯಾಟ್ ಕಡಿಮೆ ಇರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟೇ ಅಲ್ಲ. ಇಂದಿನ ಸಾಕಷ್ಟು ಪ್ಯಾಕೇಜ್ಡ್ ಆಹಾರಗಳಲ್ಲಿರುವ ಟ್ರಾನ್ಸ್ ಫ್ಯಾಟ್ ಕೂಡಾ ಅತ್ಯಂತ ಕೆಟ್ಟದ್ದು ಹಾಗೂ ಇದೇ ಅವಿತಿರುವ ಕೊಬ್ಬು ಎಂಬುದನ್ನು ಅರಿತುಕೊಂಡು ಆಹಾರವನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.
೨. ನಿಮ್ಮ ಆಹಾರ ಕ್ರಮ ನಿಮಗೆ ಹೊಂದುತ್ತಿಲ್ಲವಾಗಿರಬಹುದು: ನೀವು ಸತ್ವಯುತ ಆರೋಗ್ಯಕರ ಆಹಾರ ಸೇವಿಸುತ್ತಿರಬಹುದು, ಆದರೆ, ಅದು ನಿಮಗೆ ಹೊಂದಿಕೆಯಾಗಲೇಬೇಕು ಎಂದೇನಿಲ್ಲವಲ್ಲ. ಆಹಾರ ಹಾಗೂ ಡಯಟ್ ತಜ್ಞರ ಪ್ರಕಾರ ಇತ್ತೀಚೆಗೆ ಟ್ರೆಂಡ್ ಆಗಿರುವ ಕೀಟೋ ಡಯಟ್ ಅನ್ನು ಕೊಲೆಸ್ಟೆರಾಲ್ ಅಧಿಕವಿರುವ ಮಂದಿ ಮಾಡಬಾರದು ಎನ್ನಲಾಗುತ್ತದೆ. ಹಾಗಾಗಿ, ನಿಮ್ಮ ದೇಹಕ್ಕೆ ಹೊಂದುವಂಥ ಆಹಾರ ಕ್ರಮದ ಪ್ಲಾನ್ ಮಾಡಲು ಡಯಟ್ ತಜ್ಞರ ಅಥವಾ ವೈದ್ಯರ ನೆರವನ್ನು ಪಡೆಯಿರಿ.
೩. ನಿಮ್ಮ ಕೊಲೆಸ್ಟೆರಾಲ್ ಮ್ಯಾನೇಜ್‌ಮೆಂಟ್ ಪ್ಲಾನ್ ಸಂಪೂರ್ಣವಾಗಿರಲಿಕ್ಕಿಲ್ಲ: ನೀವು ಝೀರೋ ಫ್ಯಾಟ್ ಡಯಟ್‌ನಲ್ಲಿದ್ದೇನೆ ಎಂದು ಅಂದುಕೊಂಡರೂ ಬಹುಶಃ ನಿಮ್ಮ ಎಣಿಕೆ ತಪ್ಪಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೊಲೆಸ್ಟೆರಾಲ್ ಮ್ಯಾನೇಜ್‌ಮೆಂಟ್ ಎಂಬುದಂದು ಸಂಪೂರ್ಣ ಪ್ಲಾನ್ ಆಗಿರುವುದರಿಂದ ಇಲ್ಲಿ ಪ್ರತಿಯೊಂದು ಆಹಾರದ ವಿವರವೂ ನಮಗೆ ಅಗತ್ಯ. ದೇಹ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವ ಆದರೆ, ಕೊಲೆಸ್ಟೆರಾಲ್ ಸ್ನೇಹಿ ಆಹಾರ ಪದ್ಧತಿಯ ಯೋಜನೆ ರೂಪಿಸಿಕೊಳ್ಳಬೇಕು.
೪. ದೈಹಿಕವಾಗಿ ಕಡಿಮೆ ಚಟುವಟಿಕೆಯಿಂದಿರುವುದು: ಪ್ರತಿಯೊಬ್ಬರ ದೈಹಿಕ ಚಟುವಟಿಕೆಯೂ ಒಂದೊಂದು ಬಗೆ. ಒಬ್ಬರಿಗೆ ದಿನಕ್ಕೆ ೩೦ ನಿಮಿಷಗಳ ನಡಿಗೆ ಉತ್ತಮ ದೈಹಿಕ ಚಟುವಟಿಕೆಯಾಗಿರಬಹುದು, ಹಾಗೂ ಇನ್ನೊಬ್ಬರಿಗೆ ಅದು ಬಹಳ ಸರಳವಾದದ್ದಿರಬಹುದು. ಅದಕ್ಕಾಗಿಯೇ ಅವರವರ ಅಗತ್ಯಗಳಿಗನುಗುಣವಾಗಿ ನಿತ್ಯದ ವ್ಯಾಯಾಮ ಅತ್ಯಗತ್ಯ.
೫. ಇತರ ಔಷಧಿಗಳೂ ಕೂಡಾ ಇದಕ್ಕೆ ಅಡ್ಡಗಾಲಾಗಿರಬಹುದು: ದೇಹದ ಇತರ ಅನಾರೋಗ್ಯ ಸಮಸ್ಯೆಗೆ ಸಂಬಂಧಿಸಿ ಔಷಧಿಗಳನ್ನು ಸೇವಿಸುತ್ತಿದ್ದರೆ, ಅದರಿಂದಾಗಿಯೂ ಕೊಲೆಸ್ಟೆರಾಲ್ ಮಟ್ಟ ತಗ್ಗದೇ ಇರಬಹುದು. ಹಾಗಾಗಿ ಕೊಲೆಸ್ಟೆರಾಲ್‌ಗೆ ಔಷಧಿ ಸೇವಿಸುವ ಮುನ್ನ ದೇಹದ ಇತರ ಸಮಸ್ಯೆಗಳಿಗೆ ಸೇವಿಸುತ್ತಿರುವ ಔಷಧಿಗಳ ವಿವರವನ್ನು ವೈದ್ಯರ ಗಮನಕ್ಕೆ ತರುವುದನ್ನು ಮರೆಯಬೇಡಿ.
೬. ನೀವು ಔಷಧಿಯ ಸರಿಯಾದ ಡೋಸ್ ತೆಗೆದುಕೊಳ್ಳದೆ ಇರಬಹುದು: ಕೆಲವರಲ್ಲಿ ಕೊಲೆಸ್ಟೆರಾಲ್ ಕಡಿಮೆಯೇ ಆಗದಿರಲು ಇದೂ ಕಾರಣವಾಗಿರಬಹುದು. ಈಗಿರುವ ಕೊಲೆಸ್ಟೆರಾಲ್ ಮಟ್ಟಕ್ಕೆ ಎಷ್ಟು ಡೋಸ್ ಔಷಧಿಯ ಅಗತ್ಯವಿದೆಯೋ ಅಷ್ಟು ಔಷಧಿಯ ಪೂರೈಕೆ ಆಗದೆ ಇರುವುದೂ ಕೂಡಾ ಸಮಸ್ಯೆ ಹಾಗೆಯೇ ಇರಲು ಕಾರಣವಾಗಿರಬಹುದು.
ಇದನ್ನೂ ಓದಿ: Visceral fat | ಒಳಾಂಗಗಳಲ್ಲಿ ಅಡಗುವ ಕೊಬ್ಬು ಕರಗಿಸುವುದು ಹೇಗೆ?
೭. ಕುಡಿತದ ಚಟವಿರಬಹುದು: ಮದ್ಯಪಾನ ಮಾಡುವುದು ನೇರವಾಗಿ ಕೊಲೆಸ್ಟೆರಾಲ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಕುಡಿತವೂ ನಿಮ್ಮ ಕೊಲೆಸ್ಟೆರಾಲ್ ಮಟ್ಟ ಹಾಗೇ ಇರುವುದಕ್ಕೆ ಪರೋಕ್ಷವಾಗಿ ಕಾರಣವಾಗಿರಬಹುದು.
೮. ಜೀವನಶೈಲಿಯೇ ಸಮಸ್ಯೆಯಾಗಿರಬಹುದು: ಕೊಲೆಸ್ಟೆರಾಲ್ ಕಡಿಮೆ ಮಾಡುವುದರ ಪ್ರಯತ್ನ ಒಂದೆರಡು ದಿನದ್ದಲ್ಲ. ಅದು ಜೀವನಶೈಲಿಯಲ್ಲೇ ಬದಲಾವಣೆ ಬದಸುತ್ತದೆ. ಶಿಸ್ತುಬದ್ಧ ಜೀವನದ ಅಗತ್ಯವಿರುತ್ತದೆ. ಅದರ ಕೊರತೆಯೂ ಕಾರಣವಿರಬಹುದು.
೯. ಒತ್ತಡ ಹೆಚ್ಚಿರಬಹುದು: ಕೊಲೆಸ್ಟೆರಾಲ್ ಹೆಚ್ಚಿರುವುದು ದೇಹಕ್ಕೆ ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಿರುವ ವಿಚಾರವೇ. ಆದರೆ ಒತ್ತಡದ ಕೆಲಸ, ವಿಶ್ರಾಂತಿಯಿಲ್ಲದ ವೃತ್ತಿ ಎಲ್ಲವೂ ಕೊಲೆಸ್ಟೆರಾಲ್‌ಗೆ ಮಾರಕವೇ. ಇದೂ ಕೂಡಾ ಕೊಲೆಸ್ಟೆರಾಲ್ ಇಳಿಕೆಗೆ ಸಹಕರಿಸುತ್ತಿಲ್ಲವಾಗಿರಬಹುದು.
೧೦. ಔಷಧಿ ಸೇವಿಸುತ್ತಿದ್ದೇನಲ್ಲ ಎಂಬ ಅತಿಯಾದ ನಂಬಿಕೆಯೇ ಮುಳುವಾಗಿರಬಹುದು: ಎಲ್ಲವಕ್ಕೂ ಔಷಧಿಯ ಮೇಲೆ ಭಾರ ಹಾಕಿ ಕೂರುವುದು ಮೂರ್ಖರ ಲಕ್ಷಣ. ಔಷಧಿಯ ಅಗತ್ಯದಂತೆಯೇ, ಬದುಕಿನ ಆಹಾರ ಶೈಲಿಯಿಂದ ಹಿಡಿದು ಆರೋಗ್ಯಕರ ಜೀವನಶೈಲಿಗೆ ಬೇಕಾದ ಎಲ್ಲವನ್ನೂ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂಬುದನ್ನು ಮಾತ್ರ ಎಂದಿಗೂ ಮರೆಯಬಾರದು.
ಇದನ್ನೂ ಓದಿ: How To Lose Thigh Fat | ತೊಡೆಯ ಕೊಬ್ಬು ಕರಗಿಸೋಕೆ ಏನು ಮಾಡ್ಬೇಕು? ಹೇಗೆ ಮಾಡ್ಬೇಕು?