ಬಹಳ ಸಾರಿ, ಒಂದು ಬಣ್ಣಕ್ಕೆ ಹೊಂದುವಂತೆ ಅದರ ಜೊತೆ ಧರಿಸಿಕೊಳ್ಳಲು ಮ್ಯಾಚ್ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗುತ್ತದೆ. ಚೆನ್ನಾಗಿದೆ ಎಂದು ಕೊಂಡು ತಂದ ಟಾಪ್ ಅಥವಾ ಕುರ್ತಾಕ್ಕೆ ಹೊಂದುವ ಲೆಗ್ಗಿಂಗ್ ಅಥವಾ ಪಲಾಝೋ ಸಿಗಲಿಲ್ಲವೆಂದು ವರುಷಗಳ ಕಾಲ ಆ ದಿರಿಸನ್ನು ಧರಿಸದೇ ಕಾಲ ತಳ್ಳುವುದು, ಕೊನೆಗೊಂದು ದಿನ ಅಂಥದ್ದು ಸಿಕ್ಕಿದಾಗ, ಆ ದಿರಿಸಿನ ಮೇಲಿನ ಮಮಕಾರವೆಲ್ಲ ಕಳೆದು ಹೋಗಿಯೋ ಅಥವಾ ಇನ್ನಷ್ಟು ದಪ್ಪ ಆಗಿ ಅದು ಹಾಕಲಾಗದಂತೆ ಆಗಿ ಬಿಡುವುದನ್ನು ಬಹುತೇಕರು ಅನುಭವಿಸಿರುತ್ತಾರೆ. ಇದಕ್ಕಾಗಿ ಬಟ್ಟೆ ಅಂಗಡಿಗಳಲ್ಲಿ ಸಾಕಷ್ಟು ಸಮಯ ವ್ಯರ್ಥವೂ ಆಗಿಬಿಡುವುದುಂಟು.
ಹಾಗಾದರೆ, ಒಂದಕ್ಕೆ ಹೊಂದುವ ಇನ್ನೊಂದು ಬಣ್ಣವನ್ನು ಆರಿಸುವುದು ಹೇಗೆ? ಯಾವ ಬಣ್ಣದೊಂದಿಗೆ ಯಾವ ಬಣ್ಣ ಹೆಚ್ಚು ಹೊಂದಿಕೊಳ್ಳುತ್ತದೆ ಎಂಬುದನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಕೆಲ ಸಲಹೆಗಳು ಇಲ್ಲಿವೆ.
1. ಹಳದಿ ಮತ್ತು ಹಸಿರು:
ಹಳದಿಯೊಂದಿಗೆ ಹಸಿರು ಅದ್ಭುತವಾಗಿ ಕಾಣುತ್ತದೆ. ಒಂದು ಚಂದದ ಬೇಸಗೆಯಲ್ಲಿ ಹುಲುಸಾಗಿ ಬೆಳೆದ ಹುಲ್ಲಿನಲ್ಲೊಂದು ಪುಟ್ಟ ಹಳದಿ ಹೂ ಅರಳಿದರೆ ಹೇಗಿದ್ದೀತು ಎಂಬುದನ್ನು ಊಹಿಸಿಕೊಳ್ಳಿ. ಬಿಸಿಲಿನ ಧಗೆಯಲ್ಲೂ, ಹಿತವಾಗಿ ತಂಪೆರೆಯುವ ಬಣ್ಣಗಳ ಜೋಡಿ ಇದು. ಹಾಗಾಗಿ ಹಳದಿ ಮತ್ತು ಹಸಿರು ಒಂದಕ್ಕೊಂದು ಚೆನ್ನಾಗಿ ಬೆರೆತುಕೊಳ್ಳುವ ಬಣ್ಣಗಳು. ವಿಶೇಷವೆಂದರೆ, ಈ ಬಣ್ಣದ ಅಂಗಿಗಳು ಎಲ್ಲ ಬಗೆಯ ಚರ್ಮದ ಬಣ್ಣವುಳ್ಳವರಿಗೂ ಹೊಂದಿಕೆಯಾಗುತ್ತದೆ. ಬೆಳ್ಳಗಿರುವವರೂ, ಗೋಧಿ ಬಣ್ಣದವರೂ, ಕಪ್ಪಗಿದ್ದರೂ ಈ ಜೋಡಿ ಬಣ್ಣಗಳ ಅಂಗಿ ಮುದ್ದಾಗಿ, ರಿಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ | ಇತಿ ಆಚಾರ್ಯ ಕಂಡ ಕ್ಯಾನೆಸ್ ಫ್ಯಾಷನ್ ಲೋಕ
2. ತಿಳಿ ನೀಲಿ ಹಾಗೂ ಗುಲಾಬಿ ಬಣ್ಣ
ತಿಳಿ ಗುಲಾಬಿಯ ಜೊತೆಗೊಂದು ನೀಲಿ ಇದ್ದರೆ, ಅದು ಸುತ್ತಮುತ್ತಲಿನವರನ್ನೊಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ತಿಳಿಯಾದ ಈ ಎರಡೂ ಬಣ್ಣಗಳು, ಒಂದು ಚಂದದ ಚಳಿಗಾಲದ ಮಧ್ಯಾಹ್ನದಲ್ಲಿ ಜನಸ್ತೋಮದಡೆಯಲ್ಲೂ ನಿಮ್ಮನ್ನು ಪ್ರತ್ಯೇಕವಾಗಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
3. ಕೆಂಪು ಹಾಗೂ ನೀಲಿ
ಕೆಂಪು ಹಾಗೂ ನೀಲಿ ಬಣ್ಣಗಳು ಸಾರ್ವಕಾಲಿಕ ಕ್ಲಾಸಿಕ್ ಕಾಂಬಿನೇಷನ್! ಈ ಎರಡು ಬಣ್ಣಗಳು ಒಂದಕ್ಕೊಂದು ಮಿಳಿತಗೊಂಡು ಹೊಮ್ಮಿಸುವ ದೈವಿಕ ಕಳೆಯನ್ನು ಇನ್ನಾವ ಬಣ್ಣಗಳ ಕಾಂಬಿನೇಷನ್ ಕೂಡಾ ಕಿತ್ತುಕೊಳ್ಳಲಾಗದು! ಸಾಂಪ್ರದಾಯಿಕ ಶೈಲಿಯ ಉಡುಗೆಗಳೂ, ಮಾಡರ್ನ್ ಉಡುಗೆಗಳೂ ಕೂಡಾ ಈ ಬಣ್ಣದ ಹೊಂದಾಣಿಕೆಯಲ್ಲಿ ಆಕರ್ಷಕವಾಗಿ ಕಾಣುತ್ತವೆ. ಕೆಂಪು ಬಣ್ಣದ ಸಿಲ್ಕ್ ಸೀರೆಗೆ ನೀಲಿ ಬಣ್ಣದ ಬಾರ್ಡರ್ ಊಹಿಸಿಕೊಳ್ಳಿ, ಈ ಕಾಂಬಿನೇಷನ್ ಸೀರೆ ಉಟ್ಟ ನಾರಿ ಸಾಕ್ಷಾತ್ ದೇವಿಯೇ ಪ್ರತ್ಯಕ್ಷವಾದಂತೆ ಕಂಡರೂ ಅಚ್ಚರಿಯಿಲ್ಲ. ನೀಲಿ ಬಣ್ಣದ ಜೀನ್ಸ್ ತೊಟ್ಟು ಕೆಂಪು ಬಣ್ಣದ ಟಿ ಶರ್ಟ್ ಹಾಟ್ ಆಗಿ ಕಾಣಿಸುವುದೆಂದು ವಿಶೇಷವಾಗಿ ವಿವರಿಸಬೇಕಿಲ್ಲ.
ಇದನ್ನೂ ಓದಿ | ಸಿಂಗಾಪುರದ ಫ್ಯಾಷನ್ ಸ್ಟಾರ್ಟಪ್ ಝಿಲಿಂಗೊ ಸಿಇಒ ಅಂಕಿತಿ ಬೋಸ್ ವಜಾ
4.ನೇರಳೆ ಮತ್ತು ಪಿಂಕ್
ನೇರಳೆಯ ಜೊತೆ ಪಿಂಕ್ ಹಿತವಾಗಿ ಒಪ್ಪುತ್ತದೆ. ಇವೆರಡು ಬಣ್ಣಗಳು, ಒಂದು ಚಂದದ ಬೇಸಿಗೆಯ ಹಿತವಾದ ಮಧ್ಯಾಹ್ನಗಳಲ್ಲಿ ಧರಿಸಿದರೆ, ಮನಸ್ಸಿಗೂ ಅಷ್ಟೇ ಹಿತವನ್ನು ಪಸರಿಸುವ ಶಕ್ತಿ ಹೊಂದಿವೆ. ಇವು ಮಾಡರ್ನ್ ದಿರಿಸುಗಳ ಕಾಂಬಿನೇಷನ್‌ಗಳಲ್ಲಿ, ಭಾರತೀಯ ಸೆಲ್ವಾರ್ ಕಮೀಜ್‌ಗಳಲ್ಲಿ ಆಕರ್ಷಕವಾಗಿ ಹೊಂದಿಕೊಳ್ಳುತ್ತವೆ.
5. ಕೇಸರಿ ಮತ್ತು ಕಪ್ಪು
ಕಪ್ಪು ಹಾಗೂ ಬಿಳಿಯ ಬಣ್ಣಗಳ ಜತೆಗೆ ಸಾಧಾರಣವಾಗಿ ಎಲ್ಲ ಬಣ್ಣಗಳೂ ಸುಲಭವಾಗಿ ಹೊಂದಿಕೊಳ್ಳುತ್ತವೆ. ಆದರೂ ಕಪ್ಪು ಕೆಲವು ಬಣ್ಣಗಳ ಜತೆಗೆ ತನ್ನ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತದೆ. ಉದಾಹರಣೆಗೆ ಕಪ್ಪು ಬಣ್ಣದ ಟಾಪ್ ಧರಿಸಿದ್ದರೆ ಅದಕ್ಕೊಂದು ಕೇಸರಿ ಬಣ್ಣದ ಪ್ಯಾಂಟ್ ಧರಿಸಿಕೊಂಡರೆ, ಇದ್ದಕ್ಕಿದ್ದಂತೆ ಕಪ್ಪು ಇನ್ನೂ ಚಂದಕ್ಕೆ ಕಂಗೊಳಿಸತೊಡಗುತ್ತದೆ. ಪ್ಯಾಂಟ್ ಯಾವತ್ತೂ ಕಪ್ಪಾಗಬೇಕಿಲ್ಲ! ಬ್ರೈಟ್ ಹಾಗೂ ಡಾರ್ಕ್ ಬಣ್ಣಗಳ ಪ್ಯಾಂಟ್ ಕೂಡಾ ಚೆನ್ನಾಗಿಯೇ ಕಾಣುತ್ತದೆ. ಕೇಸರಿ ಹಾಗೂ ಕಪ್ಪು ಹೆಚ್ಚು ಪ್ರಸಿದ್ಧ ಕಾಂಬಿನೇಷನ್ ಅಲ್ಲದಿದ್ದರೂ, ಯುವಜನರು ಪ್ರಯತ್ನಿಸಬಹುದಾದ, ಹೊಸ ಟ್ರೆಂಡ್ ಸೆಟ್ಟರ್ ಬಣ್ಣಗಳ ಕಾಂಬಿನೇಶನ್‌ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ | ಫ್ರಿಲ್- ಫ್ಲೇರ್ ಗೌನ್‌ಗೆ ಫ್ಯಾಷನ್ ಪ್ರಿಯರು ಫಿದಾ!