Site icon Vistara News

Deepawali Jewels Shopping | ಧನ್‌ತೇರಾಸ್‌ಗೆ ಟ್ರೆಂಡಿ ಆಭರಣ ಖರೀದಿಸುವಾಗ ಗಮನಿಸಬೇಕಾದ 5 ಸಂಗತಿಗಳಿವು

Deepawali Jewels Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿಗೂ ಮುನ್ನವೇ ಆಗಮಿಸುವ ಧನ್‌ತೇರಾಸ್‌ಗೆ ನಾನಾ ವಿನ್ಯಾಸದ ಟ್ರೆಂಡಿ ಆಭರಣಗಳು ಬಿಡುಗಡೆಗೊಂಡಿವೆ. ಈ ಆಭರಣಗಳನ್ನು ಆಯ್ಕೆ ಮಾಡುವಾಗ ಕೊಳ್ಳುವ ಬಂಗಾರದ ಶುದ್ಧತೆ ಇತ್ಯಾದಿ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ಖರೀದಿಸುವುದು ಅಗತ್ಯ ಎಂದು ಹೇಳುತ್ತಾರೆ ಜ್ಯುವೆಲ್‌ ಡಿಸೈನರ್‌ ಅರ್ಚನಾ. ಅವರು ಹೇಳುವಂತೆ, ದಕ್ಷಿಣ ಭಾರತದವರು ಅಕ್ಷಯ ತೃತೀಯ ಆಚರಿಸುವಂತೆ ಇಲ್ಲಿಯೇ ಬೆರೆತು ಹೋದ ಉತ್ತರ ಭಾರತ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯದವರು ಧನ್‌ತೇರಾಸ್‌ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಅಂದು ಲಕ್ಷ್ಮಿಯ ವಿಶೇಷ ಪೂಜೆಯೊಂದಿಗೆ ವಜ್ರಾಭರಣಗಳ ಖರೀದಿ ಮಾಡುತ್ತಾರೆ. ಈ ದಿನದಂದು ಚಿನ್ನ ಖರೀದಿಸಿದರೆ ಶುಭವೆಂದು ಹೇಳಲಾಗುತ್ತದೆ. ಹಾಗಾಗಿ ಇತ್ತೀಚೆಗೆ ಆಭರಣ ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಖರೀದಿಸುವ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ ಎನ್ನುತ್ತಾರವರು.

೧. ಟ್ರೆಂಡಿ ಆಭರಣಗಳನ್ನು ಖರೀದಿಸಿ

ಖರೀದಿಸುವ ಮುನ್ನ ಟ್ರೆಂಡ್‌ನಲ್ಲಿ ಯಾವ್ಯಾವ ಆಭರಣಗಳು ಇವೆ? ಮಲ್ಟಿ ಪರ್ಪಸ್‌ ಆಭರಣಗಳು ಯಾವ್ಯಾವು ಇವೆ, ಹಬ್ಬವನ್ನು ಹೊರತುಪಡಿಸಿ ಇನ್ಯಾವ ಸಂದರ್ಭದಲ್ಲಿ ಧರಿಸಬಹುದು ಎಂಬುದನ್ನು ಪರಿಶೀಲಿಸಿ. ಆದಷ್ಟೂ ಮಲ್ಟಿ ಪರ್ಪಸ್‌ ಆಭರಣಗಳಿಗೆ ಆದ್ಯತೆ ನೀಡಿ.

೨. ಎಕ್ಸ್‌ಚೇಂಜ್‌ ಆಫರ್‌ ಸದುಪಯೋಗಪಡಿಸಿಕೊಳ್ಳಿ

ಹಳೆ ಬಂಗಾರದ ಆಭರಣವನ್ನು ಕೊಟ್ಟು ಹೊಸತನನ್ನು ಖರೀದಿಸುವ ಸೌಲಭ್ಯವನ್ನು ಹಬ್ಬದ ಸಮಯದಲ್ಲಿ ನೀವು ಸದುಪಯೋಗಪಡಿಸಿಕೊಳ್ಳಬಹುದು.

೩. ಹಾಲ್‌ ಮಾರ್ಕ್‌ ಗುರುತು

ಚಿನ್ನದ ಶುದ್ಧತೆಯನ್ನು ಅಳೆಯುವ ಗುರುತಿಗೆ ಬಿಐಎಸ್‌ ಹಾಲ್‌ ಮಾರ್ಕ್‌ ಎನ್ನುತ್ತಾರೆ. ಬಿಐಎಸ್‌ ಹಾಲ್‌ ಮಾರ್ಕ್‌ ಗುರುತಿನ ಬಂಗಾರದ ಆಭರಣವನ್ನೇ ಸದಾ ಖರೀದಿಸುವುದು ಉತ್ತಮ.

೪. ಗುಣಮಟ್ಟಕ್ಕೆ ಆದ್ಯತೆ

ಚಿನ್ನ ಖರೀದಿಸುವುದಕ್ಕೂ ಮುನ್ನ ಅದರ ಶುದ್ಧತೆ, ಗುಣಮಟ್ಟ , ವಿನ್ಯಾಸವನ್ನು ಪರಿಗಣಿಸಿ. ಆ ಚಿನ್ನದ ಅಂಗಡಿಯು ಎಷ್ಟು ಖ್ಯಾತಿ ಹೊಂದಿದೆ. ನಿಮಗಿರುವ ನಂಬಿಕೆ ಮತ್ತು ಆ ಶಾಪ್‌ನೊಂದಿಗೆ ಎಷ್ಟು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದೀರಿ ಎಂಬುದು ನಿಮಗೆ ತಿಳಿದಿರಲಿ. ಖರೀದಿಸುತ್ತಿರುವ ಬ್ರಾಂಡ್‌ ಸಮರ್ಪಕವಾಗಿದೆಯೇ, ಅಧಿಕೃತವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಹಾಗಾಗಿ ಚಿನ್ನದ ಅಂಗಡಿಗೆ ಹೋಗುವುದಕ್ಕೂ ಮೊದಲು ಪ್ಲಾನ್‌ ಮಾಡಿ. ಆಯ್ಕೆ ಸರಿಯಾಗಿರಲಿ.

೫. ಬಿಲ್‌ ಮರೆಯದಿರಿ

ಸ್ವರ್ಣಾಭರಣಗಳನ್ನು ಖರೀದಿಸುವ ಹಾಗೂ ಮಾರಾಟದ ವೇಳೆ ಬಿಲ್‌ಗಳನ್ನು ತಪ್ಪದೆ ಪಡೆಯಿರಿ. ಕೊಡು-ಕೊಳ್ಳುವಿಕೆಯ ದಾಖಲೆ ನಿಮ್ಮ ಬಳಿ ಇರಬೇಕಾದ್ದು ಅಗತ್ಯ. ಇವು ಆಭರಣಗಳ ರಿಪೇರಿ ಇಲ್ಲವೇ ಮಾರಾಟ ಅಥವಾ ಎಕ್ಸ್‌ಚೇಂಜ್‌ ಸಮಯಕ್ಕೆ ಬೇಕಾಗುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Deepawali Gift | ಹಾಲು ಉತ್ಪಾದಕರಿಗೆ ಚಾಮುಲ್‌ ದೀಪಾವಳಿ ಕೊಡುಗೆ; ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ

Exit mobile version