ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ನಾನಾ ಬಗೆಯ ಕಲರ್‌ಫುಲ್ ಡಿಸೈನರ್ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಮಾನಿನಿಯರ ಸೌಂದರ್ಯಕ್ಕೆ ಸಾಥ್ ನೀಡುತ್ತಿವೆ. ಊಹೆಗೂ ಮೀರಿದ ಡಿಸೈನ್‌ಗಳನ್ನು ಹೊಂದಿರುವ ಡಿಸೈನರ್ ಸೀರೆಗಳು ನಾನಾ ವರ್ಣ ಹಾಗೂ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ.
“ಪ್ರತಿ ದೀಪಾವಳಿ ಹಬ್ಬದಲ್ಲೂ ನಾನಾ ವೆರೈಟಿ ಸೀರೆಗಳು ಬಿಡುಗಡೆಗೊಳ್ಳುತ್ತವೆ. ವಿಭಿನ್ನವಾಗಿರುವಂತಹ ಅದರಲ್ಲೂ ಸೆಲೆಬ್ರಿಟಿ ಲುಕ್ ನೀಡುವಂತಹ ಡಿಸೈನ್ ಇರುವಂತಹ ಸೀರೆಗಳು ಟ್ರೆಂಡಿಯಾಗುತ್ತವೆ. ಗೋಲ್ಡನ್ ಹಾಗೂ ಸಿಲ್ವರ್, ಇಲ್ಲವೇ ಸಿಕ್ವೀನ್ಸ್, ಎಂಬಾಲಿಶಿಂಗ್ ಸೇರಿದಂತೆ ನಾನಾ ಪ್ರಯೋಗಾತ್ಮಕ ವಿನ್ಯಾಸದ ಸೀರೆಗಳು ಈ ಸೀಸನ್‌ನಲ್ಲಿ ಪರಿಚಯಗೊಳ್ಳುತ್ತವೆ. ಇವು ಹಬ್ಬಕ್ಕೆ ಮಾತ್ರವಲ್ಲ, ಹಬ್ಬದ ನಂತರ ನಡೆಯುವ ಯಾವುದೇ ಪಾರ್ಟಿಗಳಲ್ಲೂ ಧರಿಸಬಹುದಾಗಿದ್ದು, ಹಾಗಾಗಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿವೆ” ಎನ್ನುತ್ತಾರೆ ಡಿಸೈನರ್ಸ್ ರಾಶಿ.
ಯಾವ್ಯಾವ ಡಿಸೈನರ್ ಸೀರೆಗಳಿಗೆ ಬೇಡಿಕೆ?
ಮೊದಲೆಲ್ಲ ಡಿಸೈನರ್ ಸೀರೆಗಳೆಂದಾಕ್ಷಣ ಕೇವಲ ನಾರ್ತ್ ಇಂಡಿಯನ್ಸ್ ಫೇವರೇಟ್ ಎಂದುಕೊಳ್ಳಲಾಗುತ್ತಿತ್ತು. ಈಗ ಹಾಗಿಲ್ಲ. ಇದೀಗ ದಕ್ಷಿಣ ಭಾರತದ ಮಹಿಳೆಯರೂ ಕೂಡ ಡಿಸೈನರ್ ಸೀರೆಗಳನ್ನು ಧರಿಸಲಾರಂಭಿಸಿದ್ದಾರೆ. ಪರಿಣಾಮವಾಗಿ ಖರೀದಿದಾರರು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ, ಇವು ರೇಷ್ಮೆ ಸೀರೆಗಿಂತ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತವೆ.
ಕ್ರೇಪ್, ಶಿಫಾನ್, ಸ್ಯಾಟೀನ್, ಜಾರ್ಜೆಟ್, ಸಿಕ್ವೀನ್, ಸಾಫ್ಟ್ ಬನಾರಸ್, ಸಾಫ್ಟ್ ಸಿಲ್ಕ್, ಸೆಮಿ ಸಿಲ್ಕ್ ಹೀಗೆ ಸಾಕಷ್ಟು ಫ್ಯಾಬ್ರಿಕ್‌ನ ಸೀರೆಗಳು ಇದೀಗ ನಾನಾ ಡಿಸೈನರ್ ಸೀರೆಗಳಾಗಿ ಬದಲಾಗಿವೆ. ಡಿಸೈನರ್ ಬಾರ್ಡರ್ ಹಾಗೂ ಪಲ್ಲುವಿನಿಂದಿಡಿದು, ಸೀರೆ ಮಧ್ಯೆ ಹರಡಿದ ಕ್ರಿಸ್ಟಲ್ ವರ್ಕ್ ಇಲ್ಲವೇ ಶೈನಿಂಗ್ ಬೂಟಾ ಅಥವಾ ಮೋಟಿಫ್ ಅಲಂಕಾರ ಹೀಗೆ ಊಹೆಗೂ ಮೀರಿದ ಡಿಸೈನ್‌ಗಳನ್ನೊಳಗೊಂಡಿರುತ್ತವೆ.
ಸೆಲೆಬ್ರಿಟಿಗಳ ಡಿಸೈನರ್ ಸೀರೆಗಳು
ಸೆಲೆಬ್ರೆಟಿಗಳು ಧರಿಸುವ ಡಿಸೈನರ್ ಸೀರೆಗಳ ಮಾದರಿಗಳು ದೀಪಾವಳಿಯಲ್ಲಿ ಬಿಡುಗಡೆಗೊಳ್ಳುತ್ತವೆ. ಟ್ರೆಂಡಿಯಾದ ಇವು ವೈಬ್ರೆಂಟ್ ಕಲರ್‌ಗಳಲ್ಲೂ ಲಭ್ಯ. ಅಲ್ಲದೇ ಇವು ಯಂಗ್ ಲುಕ್ ನೀಡುತ್ತವೆ. ಸಾಂಪ್ರದಾಯಿಕ ಶೈಲಿಯಲ್ಲಿ ಮಾತ್ರವಲ್ಲ, ಇಂಡೋ-ವೆಸ್ಟರ್ನ್ ಲುಕ್‌ಗೂ ಇವನ್ನು ಧರಿಸಬಹುದು. ಇದೀಗ ರೇಷ್ಮೆ ಸೀರೆಗಳಲ್ಲೂ ಸಾಫ್ಟ್ ಡಿಸೈನರ್ ಸೀರೆಗಳು ದೊರೆಯುತ್ತಿವೆ. ಇವುಗಳಲ್ಲಿ ಗೋಲ್ಡನ್ ವರ್ಕ್, ಹ್ಯಾಂಡ್ ವರ್ಕ್ ಇರುವಂತವು ಟ್ರೆಂಡಿಯಾಗಿವೆ. ಟ್ರೆಡಿಷನಲ್ ಸೀರೆ ಉಡಲು ಬಯಸುವವರು ಇವನ್ನು ಆಯ್ಕೆ ಮಾಡಬಹುದು ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ಲಾಸ್ಯ.
ಡಿಸೈನರ್ ಸೀರೆ ಪ್ರಿಯರಿಗೆ ಒಂದಿಷ್ಟು ಸಲಹೆಗಳು
· ಡಿಸೈನರ್ ಸೀರೆಗಳನ್ನು ನಾನಾ ವಿನ್ಯಾಸದ ಬ್ಲೌಸ್‌ಗಳೊಂದಿಗೂ ಧರಿಸಬಹುದು.
· ಪಾರ್ಟಿವೇರ್‌ಗಳಾಗಿಯೂ ಇವನ್ನು ಧರಿಸಬಹುದು.
· ಇವುಗಳನ್ನು ಧರಿಸಿದಾಗ ಹೆವಿ ಜುವೆಲರಿ ಧರಿಸುವ ಅಗತ್ಯವಿಲ್ಲ.
· ನೋಡಲು ಗ್ರ್ಯಾಂಡ್ ಲುಕ್ ನೀಡುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Deepawali party outfits | ದೀಪಾವಳಿ ಪಾರ್ಟಿಯ ರಂಗೇರಿಸಿದ ಸೆಲೆಬ್ರಿಟಿಗಳ ಡಿಸೈನರ್‌ವೇರ್ಸ್