ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚುಮು ಚುಮು ಚಳಿಗೆ ಬೆಚ್ಚಗಿಡುವ ನವ ವಿನ್ಯಾಸದ ಡೆನಿಮ್ ಉಡುಪುಗಳು ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ನಾನಾ ಬಗೆಯ ಲೇಯರ್ ಲುಕ್ ಸಾಥ್ ನೀಡುವ ಉಡುಪುಗಳೊಂದಿಗೆ ಜೆನ್ ಝಿಗೆ ಒಪ್ಪುವ ಉಡುಗೆಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಡೆನಿಮ್‌ನಲ್ಲಿ ಪ್ರಚಲಿತದಲ್ಲಿರುವ ಉಡುಗೆಗಳು
ನಾನಾ ಶೈಲಿಯ ಡೆನಿಮ್ ಜಾಕೆಟ್‌ಗಳು ಕ್ರಾಪ್, ಫ್ರಿಂಝ್, ಲಾಂಗ್, ಕೋಟ್ ಶೈಲಿಯಲ್ಲಿ ಬಿಡುಗಡೆಗೊಂಡಿವೆ. ಇವು ಎಲ್ಲಾ ಬಗೆಯ ಉಡುಪಿಗೂ ಸೂಟ್ ಆಗುವಂತಹ ಡಿಸೈನ್‌ಗಳಲ್ಲಿ ಲಭ್ಯವಿದೆ. ಎಂದಿನಂತೆ ಮೆಟಲ್ ಬಟನ್‌ಗಳು ಇವುಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಡಾರ್ಕ್, ಲೈಟ್ ಹಾಗೂ ಬ್ಲೀಚ್ ಶೇಡ್‌ನವು ಸಾಕಷ್ಟು ಪ್ರಚಲಿತದಲ್ಲಿವೆ. ಇನ್ನು ಮೊದಲು ಚಾಲ್ತಿಯಲ್ಲಿದ್ದ ಹೆವಿ ಜಾಕೆಟ್‌ಗಳೊಂದಿಗೆ ಇದೀಗ ಲೈಟ್‌ವೇಟ್‌ನವು ಬಿಡುಗಡೆಗೊಂಡಿವೆ. ಆಯಾ ವ್ಯಕ್ತಿಯ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ಹಳೆಯ ವಿನ್ಯಾಸದಲ್ಲಿದ್ದ ಸ್ಕರ್ಟ್‌ಗಳು ಇದೀಗ ಮತ್ತಷ್ಟು ಹೊಸ ವಿನ್ಯಾಸದಲ್ಲಿ ಆಗಮಿಸಿದ್ದು, ಫ್ರಿಂಝ್ ವಿನ್ಯಾಸದವು ಟ್ರೆಂಡಿಯಾಗಿವೆ. ಇವನ್ನು ಚಳಿಯಾದಲ್ಲಿ ಟೈಟ್ ಪ್ಯಾಂಟ್‌ಗಳ ಮೇಲೂ ಧರಿಸಬಹುದು. ಮಿಕ್ಸ್ ಮ್ಯಾಚ್ ಮಾಡಬೇಕಷ್ಟೇ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಎವರ್‌ಗ್ರೀನ್ ಲಿಸ್ಟ್‌ನಲ್ಲಿ ಡೆನಿಮ್ ಪ್ಯಾಂಟ್
ಇನ್ನು ಡೆನಿಮ್ ಪ್ಯಾಂಟ್‌ಗಳು ಯಾವತ್ತೂ ಮರೆಯಾಗುವುದಿಲ್ಲ! ಬದಲಿಗೆ ವಿನ್ಯಾಸ ಬದಲಾಗುತ್ತವೆ ಅಷ್ಟೇ ಎನ್ನುತ್ತಾರೆ ಡಿಸೈನರ್ಸ್. ಹೌದು. ಆಯಾ ಸೀಸನ್‌ಗೆ ತಕ್ಕಂತೆ ಬದಲಾದ ಡಿಸೈನ್‌ಗಳಲ್ಲಿ ಬಿಡುಗಡೆಗೊಳ್ಳುತ್ತವೆ. ಮೊದಲಿದ್ದ ನ್ಯಾರೋ ಪ್ಯಾಂಟ್, ಹೈವೇಸ್ಟ್, ಲೋ ವೇಸ್ಟ್ ಜೀನ್ಸ್ ಪ್ಯಾಂಟ್‌ಗಳು ಸದ್ಯಕ್ಕೆ ಸೈಡಿಗೆ ಸರಿದಿದ್ದು ಫ್ಲೇರ್ ಇರುವಂತವು ಡಿಫರೆಂಟ್ ಲುಕ್‌ನಲ್ಲಿ ಬಂದಿವೆ.
ಆಕರ್ಷಕ ಡೆನಿಮ್ ಮ್ಯಾಕ್ಸಿ ಸ್ಕಟ್ರ್ಸ್
ಇದೀಗ ಮ್ಯಾಕ್ಸಿ ಶೈಲಿಯ ಡೆನಿಮ್ ಸ್ಕರ್ಟ್‌ಗಳು ಎಲ್ಲಾ ವರ್ಗದ ಹೆಣ್ಣು ಮಕ್ಕಳನ್ನು ಸೆಳೆಯುತ್ತಿವೆ. ಬಟನ್ ಸಮೇತ ಲಭ್ಯವಿರುವ ಡೆನಿಮ್ ಮ್ಯಾಕ್ಸಿ ಸ್ಕರ್ಟ್‌ಗಳು ನಾನಾ ಬಗೆಯ ಬ್ಲ್ಯೂ ಶೇಡ್‌ಗಳಲ್ಲಿ ಲಭ್ಯ. ಈ ಉಡುಪುಗಳು ಕೂಡ ಈ ಸೀಸನ್‌ಗೆ ಹೇಳಿ ಮಾಡಿಸಿದಂತಿರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕುರ್ತಾ ಶೈಲಿಯ ಡೆನಿಮ್ ಟಾಪ್
ಇತ್ತೀಚೆಗೆ ಕೊಂಚ ಸಂಪ್ರದಾಯಸ್ಥರೂ ಧರಿಸಬಹುದಾದ ಕುರ್ತಾ ಶೈಲಿಯ ಡೆನಿಮ್ ಟಾಪ್‌ಗಳು ದೊರೆಯುತ್ತಿವೆ. ಇವು ನೋಡಲು ಎಲಿಗೆಂಟ್ ಲುಕ್ ನೀಡುವುದರಿಂದ ಧರಿಸಿದಾಗ ಆಕರ್ಷಕವಾಗಿಯೂ ಕಾಣುತ್ತವೆ. ಸಿಂಪಲ್ ವಿನ್ಯಾಸದಲ್ಲಿ ಇವು ಲಭ್ಯ. ಜತೆಗೆ ಸ್ಟೋಲ್ ಧರಿಸಿದಲ್ಲಿ ನೋಡಲು ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ ಡಿಸೈನರ್ಸ್.
ಇನ್ನು, ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಡೆನಿಮ್ ಉಡುಗೆಗಳನ್ನು ಧರಿಸುವುದು ಸಾಮಾನ್ಯವಾಗುತ್ತಿದೆ. ಕಾರಣ ವಿಂಟರ್‌ನಲ್ಲಿ ಹೊಸ ಡಿಸೈನ್‌ಗಳು ಬಿಡುಗಡೆಯಾಗಿರುವುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Dupatta Fashion | ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವ ಬಾಂದನಿ ದುಪಟ್ಟಾ