ಒತ್ತಡದ ಜೀವನಶೈಲಿಯ ಪರಿಣಾಮಗಳು ನಾನಾ ರೀತಿಯಲ್ಲಿ ದೇಹದ ಮೇಲಾಗುತ್ತವೆ. ಅದರಲ್ಲೂ ಕೆಲವು ಆರೋಗ್ಯ ಸಮಸ್ಯೆಗಳು ಬೆನ್ನು ಬಿದ್ದವೆಂದರೆ ಬೇತಾಳದಂತೆಯೇ. ಮಧುಮೇಹ ಅಂಥದ್ದೇ ಕಾಯಿಲೆ. ಆರಂಭದಲ್ಲಿ ಅಷ್ಟೇನು ಸಮಸ್ಯೆ ಅನಿಸದಿದ್ದರೂ, ಕ್ರಮೇಣ ವಿಪರೀತ ಉಪದ್ರವಕಾರಿ ಎನಿಸುತ್ತದೆ ಈ ಸಮಸ್ಯೆ. ಆದರೆ ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡುವುದರಿಂದ (Diabetes Diet) ಮಧುಮೇಹವನ್ನು ಔಷಧಿಯಿಲ್ಲದೆಯೇ ದೀರ್ಘಕಾಲದವರೆಗೆ ಹತೋಟಿಯಲ್ಲಿ ಇಡಬಹುದು ಎನ್ನುತ್ತದೆ ಇತ್ತೀಚಿನ ಒಂದು ಅಧ್ಯಯನ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಆಶ್ರಯದಲ್ಲಿ ನಡೆಸಲಾದ ಈ ಮಧುಮೇಹ ಅಧ್ಯಯನದಲ್ಲಿ, ಹೊಸದಾಗಿ ಮಧುಮೇಹಕ್ಕೆ ತುತ್ತಾಗಿರುವವರ ದೈನಂದಿನ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಅಕ್ಕಿ ಮತ್ತು ಗೋಧಿಯನ್ನು ಕಡಿಮೆ ಮಾಡಿ, ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವವರನ್ನೂ ಸೇರಿ ಒಟ್ಟು ೧೮,೦೯೦ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಶೇ. ೬.೫ಕ್ಕೆ ಮೀರದಂತೆ ಮಾಡುವುದಕ್ಕಾಗಿ ಪಿಷ್ಟ ಪದಾರ್ಥಗಳನ್ನು ಶೇ. ೫೪ಕ್ಕೆ ಮೀರದಂತೆ ಇರಿಸಲಾಗಿತ್ತು.
ಉದಾ, ದಿನದ ಆಹಾರದಲ್ಲಿ ಬೆಳಗಿನ ತಿಂಡಿಗೆ ೨ ದೋಸೆ ಅಥವಾ ಇಡ್ಲಿ ಮತ್ತು ಒಂದು ಮಲ್ಟಿಗ್ರೇನ್ ಬ್ರೆಡ್‌ಗೆ ಕಾರ್ಬ್ ಪ್ರಮಾಣವನ್ನು ಸೀಮಿತಗೊಳಿಸಿದರೆ, ಪ್ರೊಟೀನ್ ಪ್ರಮಾಣವನ್ನು ಸೋಯಾ ಸಾಂಬಾರ್ ಮತ್ತು ಮೂರು ಮೊಟ್ಟೆಯ ಬಿಳಿ ಭಾಗಗಳು ಎಂದು ನಿರ್ಧರಿಸಲಾಗಿತ್ತು. ಅಂದರೆ, ಕಾರ್ಬ್ ಕಡಿತದಿಂದ ಉಂಟಾಗುವ ಕೊರತೆಯನ್ನು ಪ್ರೊಟೀನ್‌ನಿಂದ ತುಂಬಿಸಲು ಯೋಜಿಸಲಾಗಿತ್ತು. ಇದೇ ಮಾದರಿಯನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಯೋಜಿಸಲಾಗಿತ್ತು. ಊಟ-ತಿಂಡಿಗಳ ನಡುವೆ ಲಘುವಾಗಿ ಬಾಯಾಡುವುದಕ್ಕೆ ಹಣ್ಣು-ತರಕಾರಿಗಳನ್ನು ಸೂಚಿಸಲಾಗಿತ್ತು.
ಇದನ್ನೂ ಓದಿ | Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್ ನೈಟ್!
ಇದು ನೂತನ ಮಧುಮೇಹಿಗಳಿಗಾದರೆ, ಇನ್ನೂ ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವವರಿಗೆ ಎಚ್‌ಬಿಎ೧ಸಿ ಪ್ರಮಾಣವನ್ನು ಶೇ. ೫.೬ ಕ್ಕೆ ನಿಲ್ಲಿಸುವುದು ಸಂಶೋಧಕರ ಉದ್ದೇಶವಾಗಿತ್ತು. ಇವರಲ್ಲಿ ಪ್ರೊಟೀನ್ ಮತ್ತು ನಾರಿನ ಪ್ರಮಾಣವನ್ನು ಇನ್ನೂ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಈ ಎರಡೂ ಗುಂಪಿನಲ್ಲಿ ಶೇ. ೮೦ರಷ್ಟು ಮಂದಿಯಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶ ನಿರ್ದೇಶಿತ ರೀತಿಯಲ್ಲೇ ಹತೋಟಿಗೆ ಬಂದಿರುವುದನ್ನು ದಾಖಲಿಸಲಾಗಿದೆ. ಸ್ಥೂಲವಾಗಿ ಹೇಳುವುದಾದರೆ, ಮಧುಮೇಹಿಗಳಿಗೆ ಶೇ. ೪೯-೫೪ ಕಾರ್ಬ್, ಶೇ. ೧೯-೨೦ ಪ್ರೊಟೀನ್, ಶೇ. ೨೧-೨೬ ಕೊಬ್ಬಿನ ಅಂಶ ಮತ್ತು ಶೇ. ೫-೬ ನಾರಿನ ಅಂಶಗಳನ್ನು ಆಹಾರದಲ್ಲಿ ನಿರ್ವಹಿಸಲು ಸೂಚಿಸಲಾಗಿತ್ತು. ಮಧುಮೇಹ-ಪೂರ್ವದಲ್ಲಿರುವವರಿಗೆ ಈ ಪ್ರಮಾಣಗಳನ್ನು ಕ್ರಮವಾಗಿ ಶೇ. ೫೦-೫೬, ಶೇ. ೧೮-೨೦, ಶೇ. ೨೧-೨೭ ಮತ್ತು ಶೇ. ೩-೫ರಷ್ಟು ಇರಿಸಲು ತಿಳಿಸಲಾಗಿತ್ತು. ಯಾವುದೇ ಔಷಧವಿಲ್ಲದೆ ಆಹಾರಕ್ರಮದಲ್ಲಿಯೇ ಇದನ್ನು ಸಾಧಿಸಿರುವುದರಿಂದ, ಒಟ್ಟಾರೆಯಾಗಿ ಅಧ್ಯಯನ ಫಲಿತಾಂಶ ಆಶಾದಾಯಕವಾಗಿದೆ ಎನ್ನಲಾಗಿದೆ.
ಮಧುಮೇಹದ ಪ್ರಮಾಣದಲ್ಲಿ ಭಾರತದಲ್ಲಿ ತೀವ್ರ ಏರುಗತಿಯಲ್ಲಿದೆ. ೭.೪ ಕೋಟಿ ಜನ ಮಧುಮೇಹಿಗಳಿದ್ದು, ಸುಮಾರು ೮ ಕೋಟಿ ಜನ ಮಧುಮೇಹ-ಪೂರ್ವ ಸ್ಥಿತಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ICMR ನಡೆಸಿದ ಅಧ್ಯಯನಕ್ಕೆ ಮಹತ್ವ ಒದಗಿದೆ. ಇದಕ್ಕಾಗಿ ೨೯ ರಾಜ್ಯಗಳು ಮತ್ತು ೨ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಲಾಗಿದ್ದು, ಬೇರೆ ಬೇರೆ ಸಂಸ್ಕೃತಿ ಮತ್ತು ಆಹಾರ ಪದ್ಧತಿಗಳ ಜನರು ಇದರಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಭಾರತದ ಹೆಚ್ಚಿನ ಜನಸಂಖ್ಯೆಗೆ ಈ ಅಧ್ಯಯನದಲ್ಲಿ ಸೂಚಿತ ಆಹಾರಪದ್ಧತಿಯನ್ನು ಅನುಸರಿಸಲು ಸಾಧ್ಯವಿದೆ ಎಂಬುದು ಸಂಶೋಧಕರ ಅಭಿಮತ.
ಇದನ್ನೂ ಓದಿ | Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!