Site icon Vistara News

Diabetes prevention | ಮಧುಮೇಹ ಬರದಂತೆ ಮುಂಜಾಗರೂಕತೆ ಹೀಗೂ ವಹಿಸಬಹುದು!

walking after dinner

ಬದಲಾದ ಜೀವನಶೈಲಿ, ಹೆಚ್ಚಿದ ಕೆಲಸದೊತ್ತಡ, ಅನಾರೋಗ್ಯಕರ ಆಹಾರಕ್ರಮ ಇವುಗಳಿಂದಾಗಿ ಇಂದು ಮಧುಮೇಹ ಬಹಳ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಾದವರನ್ನಷ್ಟೇ ಕಾಡುವ ತೊಂದರೆ ಎಂಬಂತಿದ್ದ ಮಧುಮೇಹ ಈಗ ಯುವ ಹಾಗೂ ಮಧ್ಯವಯಸ್ಸಿಗರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಸಣ್ಣ ವಯಸ್ಸಿನವರೂ ತಮ್ಮನ್ನು ಬಿಡದೆ ಕಾಡುತ್ತಿರುವ ಈ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗುತ್ತಿರುವುದು ಸಿಹಿ ಹಾಗೂ ಎಣ್ಣೆ ತಿಂಡಿಗಳಿಂದ ದೂರವಿರಬೇಕಾದ ಅನಿವಾರ್ಯತೆ ಬಂದೊದಗಿದೆ.

ಟೈಪ್‌ ೨ ಮಧುಮೇಹ ಇಂದು ಬಹಳ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ತೊಂದರೆಯಾಗಿ ಬದಲಾಗಿದ್ದು ಇತ್ತೀಚೆಗಿನ ವರ್ಷಗಳಲ್ಲಿ. ಹಾಗಾಗಿ ಮಧುಮೇಹ ಬರದಂತೆ ಮೊದಲೇ ಜಾಗ್ರತೆ ವಹಿಸುವುದು ಬಹಳ ಮುಖ್ಯ. ಬದಲಾದ ಜೀವನಪದ್ಧತಿಯಿಂದ ಬೊಜ್ಜು, ಕೊಲೆಸ್ಟೆರಾಲ್‌ ಅಥವಾ ಮಧುಮೇಹದ ಕೌಟುಂಬಿಕ ಹಿನ್ನೆಲೆ ಇದ್ದರೆ ಅಂಥವರು ಮೊದಲೇ ಜಾಗರೂಕರಾಗಿರುವುದು ಉತ್ತಮ. ಹಾಗಾದರೆ, ಮಧುಮೇಹ ಬರದಂತೆ ಮೊದಲೇ ತಡೆಗಟ್ಟುವ ವಿಧಾನಗಳು ಇಲ್ಲಿವೆ. ನಿಮ್ಮಲ್ಲಿ ಮೊದಲೇ ರಕ್ತದಲ್ಲಿ ಸಕ್ಕರೆಯ ಅಂಶ ಸಾಮಾನ್ಯಕ್ಕಿಂತ ಹೆಚ್ಚೇ ಇದೆಯೆಂದಾದಲ್ಲಿ ನೀವು ಎಚ್ಚರಿಕೆ ವಹಿಸುವುದು ಅನಿವಾರ್ಯ. ತೂಕದ ಮೇಲೆ ನಿಯಂತ್ರಣ ಇಡುವುದು, ಸರಿಯಾದ ಪ್ರಮಾಣದ ಆಹಾರಕ್ರಮ, ನಿಯಮಿತ ವ್ಯಾಯಾಮ, ಹಿತಮಿತವಾದ ಸಕ್ಕರೆ ಹಾಗೂ ಕೊಬ್ಬಿನಂಶ ಸೇವನೆ ಇತ್ಯಾದಿಗಳಿಂದ ಮಧುಮೇಹವನ್ನು ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

೧. ತೂಕದ ಮೇಲೆ ನಿಗಾ ಇರಲಿ: ಆಹಾರಕ್ರಮ ಹಾಗೂ ವ್ಯಾಯಾಮದ ಮೂಲಕ ನಿಮ್ಮ ದೇಹದ ತೂಕದ ಶೇ.೭ರಷ್ಟು ಕಡಿಮೆ ಮಾಡಿದರೂ ಮಧುಮೇಹ ಬರುವ ಸಾಧ್ಯತೆ ಶೇ.೬೦ರಷ್ಟು ಕಡಿಮೆಯಾಗುತ್ತದೆ. ಹೆಚ್ಚು ತೂಕ ಕಡಿಮೆ ಮಾಡಿದಷ್ಟು ನಿಮ್ಮ ಮಧುಮೇಹ ಬರುವ ಸಾಧ್ಯತೆಯನ್ನು ಇನ್ನಷ್ಟು ಕಡಿಮೆಗೊಳಿಸಬಹುದು ಎನ್ನುತ್ತದೆ ಸಂಶೋಧನೆಗಳು. ಸದ್ಯಕ್ಕೆ ನೀವು ಎಷ್ಟು ತೂಕ ಹೊಂದಿದ್ದೀರಿ ಎಂಬುದರ ಮೇಲೆ ನೀವು ಎಷ್ಟು ತೂಕ ಇಳಿಸಿಕೊಳ್ಳಬೇಕು ಎಂಬುದನ್ನು ಲೆಕ್ಕ ಹಾಕಿ. ಆದಷ್ಟು ಬೇಗ ತೂಕ ಕಡಿಮೆ ಮಾಡುವ ತಂತ್ರಗಳಿಗಿಂತ ನಿಧಾನವಾಗಿ ವ್ಯಾಯಾಮ ಹಾಗೂ ಸರಿಯಾದ ಆಹಾರಕ್ರಮದ ಮೂಲಕ ತೂಕ ಕಡಿಮೆ ಮಾಡಿ.

೨. ದೈಹಿಕವಾಗಿ ಸಕ್ರಿಯರಾಗಿ: ದೈಹಿಕವಾಗಿ ಕ್ರಿಯಾಶೀಲರಾಗಿರುವುದನ್ನು ಅಭ್ಯಾಸ ಮಾಡಿ. ಪ್ರತಿನಿತ್ಯ ವ್ಯಾಯಾಮ ಮಾಡಿ. ಕೇವಲ ತೂಕ ಇಳಿಸುವುದಷ್ಟೇ ಮುಖ್ಯವಲ್ಲ, ತೂಕವನ್ನು ಹಾಗೆಯೇ ಉಳಿಸಿಕೊಳ್ಳುವುದೂ ಬಹಳ ಮುಖ್ಯ. ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನೂ ಒಂದು ಸಮತೋಲನದಲ್ಲಿ ಇಡುತ್ತದೆ.

೩. ಆರೋಗ್ಯಕರ ಆಹಾರ ಸೇವಿಸಿ: ಪೋಷಕಾಂಶಯುಕ್ತ ಆಹಾರ ಬಹಳ ಮುಖ್ಯ. ಕೇವಲ ಜಂಕ್‌, ಸಿಹಿತಿಂಡಿ, ಕರಿದ ಆಹಾರಗಳು ಇತ್ಯಾದಿಗಳ ಆಹಾರಪದ್ಧತಿಯೇ ಹೆಚ್ಚಾದರೆ ಖಂಡಿತವಾಗಿಯೂ ಅಡ್ಡ ಪರಿಣಾಮಗಳು ಇದ್ದೇ ಇರುತ್ತದೆ. ಹಾಗಾಗಿ, ಹಸಿರು ತರಕಾರಿ, ನಾರಿನಂಶಯುಕ್ತ ಆಹಾರ, ಪ್ರೊಟೀನ್‌, ಖನಿಜಾಂಶಗಳು ಎಲ್ಲವೂ ದಿನನಿತ್ಯದ ಆಹಾರದಲ್ಲಿರಲಿ. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ.

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

೪. ಉತ್ತಮ ಕೊಬ್ಬು ಇರಲಿ: ಕೊಬ್ಬನ್ನೇ ನಿರ್ಲಕ್ಷ್ಯ ಮಾಡುವುದು ಸಲ್ಲ. ದೇಹಕ್ಕೆ ಕೊಬ್ಬು ಅಗತ್ಯ. ಅತ್ಯಂತ ಹೆಚ್ಚು ಕೊಬ್ಬಿರುವ ಆಹಾರವನ್ನು ಕಡಿಮೆ ಮಾಡಿ, ಹಿತಮಿತವಾದ ಕೊಬ್ಬು ನಿತ್ಯದ ಆಹಾರದಲ್ಲಿರಬೇಕು. ಒಳ್ಳೆಯ ಕೊಬ್ಬು ಎಂದು ಕರೆಯಲಾಗುವ ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ದೇಹಕ್ಕೆ ಅತ್ಯಗತ್ಯ. ಇದು ಇರುವ ಆಲಿವ್‌ ಆಯಿಲ್‌, ಸೂರ್ಯಕಾಂತಿ, ಹತ್ತಿಬೀಜ, ಕ್ಯಾನೊಲಾ ಬೀಜದ ಎಣ್ಣೆಗಳು ಒಳ್ಳೆಯದು. ಬಾದಾಮಿ, ನೆಲಗಡಲೆ, ಫ್ಲ್ಯಾಕ್‌ ಸೀಡ್‌ ಇವುಗಳೂ ಉತ್ತಮವೇ.

೫. ೪೦ಕ್ಕಿಂತ ಹೆಚ್ಚು ವಯಸ್ಸಾದವರು ಆಗಾಗ ಮಧುಮೇಹ ತಪಾಸಣೆ ಮಾಡುತ್ತಿರಲಿ: ೪೦ ದಾಟಿದೆಯೆಂದಾದಲ್ಲಿ ಖಂಡಿತವಾಗಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ೪೦ರೊಳಗಿನ ಬೊಜ್ಜು ಇರುವ ಮಂದಿಯಾದರೆ ಮೊದಲೇ ಮಾಡಿಸಿಕೊಳ್ಳುವುದು ಒಳ್ಳೆಯದು. ಗರ್ಭಿಣಿಯರೂ ಕೂಡಾ ವೈದ್ಯರ ಸಲಹೆಯಂತೆ ರಕ್ತದಲ್ಲಿರುವ ಸಕ್ಕರೆಯ ಅಂಶದ ವಿವರ ಆಗಾಗ ಪರೀಕ್ಷೆಯ ಮೇಲೆ ಪಡೆಯುವುದು ಒಳ್ಳೆಯದು.

ಇದನ್ನೂ ಓದಿ | Type 2 Diabetes | ಆಹಾರದಲ್ಲಿ ಕೊಲೆಸ್ಟ್ರಾಲ್ ಕಡಿತದಿಂದ ಮಧುಮೇಹ ನಿಯಂತ್ರಣ

Exit mobile version