Site icon Vistara News

ಮಕ್ಕಳ ಮೂಗಿನಲ್ಲಿ ರಕ್ತಸ್ರಾವ! ಇದಕ್ಕೆ ಕಾರಣವೇನು, ವೈದ್ಯರು ಹೇಳೋದೇನು?

Do you know what is the reason for the increasing cases of nosebleeds in children?

ಷ್ಟೇ ನಿಗಾವಹಿಸಿದರೂ ಕೂಡ ಮಕ್ಕಳ ಆರೋಗ್ಯದಲ್ಲಾಗುವ (Children Health) ಸಣ್ಣ ಬದಲಾವಣೆಗಳೂ ಕೂಡ ಪೋಷಕರನ್ನು ಆತಂಕಕ್ಕೀಡು ಮಾಡುತ್ತದೆ. ಹೀಗಿರುವಾಗ ಒಮ್ಮೆಲೆ ಮಕ್ಕಳ ಮೂಗಿನಲ್ಲಿ ರಕ್ತಸ್ರಾವ ಕಂಡುಬಂದರೆ ಪೋಷಕರಲ್ಲಿ ಕಳವಳ ಮೂಡುತ್ತದೆ(nosebleeds in children?). ಇದು ಇನ್ನಷ್ಟು ಆತಂಕಕ್ಕೆ ದಾರಿ ಮಾಡಿಕೊಡುತ್ತದೆ. ಈ ರೀತಿ ಮಕ್ಕಳ ಮೂಗಿನಲ್ಲಿ ಉಂಟಾಗುವ ರಕ್ತಸ್ರಾವಕ್ಕೆ ಕಾರಣಗಳೇನು ಮತ್ತು ಅಂತಹ ಸಂದರ್ಭದಲ್ಲಿ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದರ ಕುರಿತಾಗಿ ಕಿಂಡರ್ ಆಸ್ಪತ್ರೆಯ ಹಿರಿಯ ಇಎನ್ಟಿ ತಜ್ಞ ವೈದ್ಯೆ ಡಾ. ಸುನಿತಾ ಮಾಧವನ್ (Dr Sunita Madhavan)ಅವರು ಸಲಹೆಗಳನ್ನು ನೀಡಿದ್ದಾರೆ.

“ಇತ್ತೀಚೆಗೆ ಮಕ್ಕಳ ಮೂಗಿನಲ್ಲಿ ರಕ್ತಸ್ರಾವ ಕಂಡುಬರುವ ಪ್ರಕರಣಗಳು ವರದಿಯಾಗುತ್ತಿದೆ. ಮೂಗು ಸೂಕ್ಷ್ಮ ಅಂಗವಾಗಿದ್ದು, ಹೆಚ್ಚು ರಕ್ತನಾಳಗಳನ್ನು ಹೊಂದಿರುತ್ತದೆ. ಆ ಮೂಲಕ ಅಧಿಕ ರಕ್ತ ಪೂರೈಕೆಯನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ರಕಸ್ರಾವ ಕಂಡುಬರುವ ಸಾಧ್ಯತೆ ಇರುತ್ತದೆ” ಎನ್ನುತ್ತಾರೆ ವೈದ್ಯೆ ಸುನಿತಾ.

ಮಕ್ಕಳ ಮೂಗಿನಲ್ಲಿ ಕಂಡುಬರುವ ರಕ್ತಸ್ರಾವದ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಅವರು, ಸಾಮಾನ್ಯವಾಗಿ ೩ ರಿಂದ ೮ ವರ್ಷ ವಯೋಮಿತಿಯೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಮೂಗಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಈ ರೀತಿಯ ರಕ್ತಸ್ರಾವ ಕಂಡುಬರುವುದಲ್ಲದೆ, ಕೆಲವೊಮ್ಮೆ ಗಂಟಲ ಮೂಲಕವೂ ರಕ್ತ ಹರಿಯುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯಿಂದ ಕೆಲವು ಬಾರಿ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಈ ಸಮಸ್ಯೆಯಿರುವ ಶೇ. ೭೦ ರಿಂದ ೮೦ರಷ್ಟು ಪ್ರಕರಣಗಳಲ್ಲಿ ಯಾವುದೇ ನಿಖರ ಕಾರಣಗಳು ಇರುವುದಿಲ್ಲ, ಆದರೆ ಇದೊಂದು ಪ್ರಾಥಮಿಕ ಲಕ್ಷಣವಾಗಿದೆ. ಚಳಿಗಾಲದಲ್ಲಿನ ತಂಪಾದ ಒಣ ಗಾಳಿಯಿಂದಾಗಿ ಮೂಗಿನ ಒಳಭಾಗದಲ್ಲಿ ತೇವಾಂಶ ಕಡಿಮೆಯಾಗುತ್ತದೆ, ಇದರಿಂದ ಮೂಗು ಒಣಗಟ್ಟಿ ರಕ್ತಸ್ರಾವ ಉಂಟಾಗುತ್ತದೆ. ಅಲ್ಲದೆ ಚಳಿಗಾಲದಲ್ಲಿ ವೈರಲ್ ಸೋಂಕುಗಳು ಹರಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ಡಾ. ಸುನಿತಾ ತಿಳಿಸಿದ್ದಾರೆ.

ಮೂಗಿನಲ್ಲಿ ಪದೇ ಪದೇ ಕೈ ಹಾಕುವುದು, ಆಧುನಿಕ ತಂತ್ರಜ್ಞಾನಗಳ ಬಳಕೆ, ಅಲರ್ಜಿಯಿಂದಾಗಿ ಮೂಗನ್ನು ಉಜ್ಜುವುದು ಮತ್ತು ಇತರೆ ಕಾರಣಗಳಿಂದಲೂ ಮೂಗಿನಲ್ಲಿ ರಕ್ತಸ್ರಾವ ಕಂಡುಬರುವುದು ಸಾಮಾನ್ಯ. ಆದರೆ “ಉಸಿರಾಟದ ಸೋಂಕು, ಸೈನಸಿಟಸ್, ವ್ಯಾಸ್ಕುಲೈಟಿಸ್, ಅಸಹಜ ಮೂಗಿನ ಆಕಾರ ಹಾಗೂ ಪಾಲಿಪ್ಸ್ ಸೋಂಕಿನಿಂದಾಗಿ ಮೂಗಿನಲ್ಲಿ ರಕ್ತಸ್ರಾವ ಕಂಡುಬರುತ್ತದೆ” ಎಂದು ವೈದ್ಯೆ ಸುನಿತಾ ಉಲ್ಲೇಖಿಸಿದ್ದಾರೆ.

ಮೂಗಿನ ರಕ್ತಸ್ರಾವಕ್ಕೆ ಕಾರಣಗಳೇನು ಎಂಬುದರ ಕುರಿತಾಗಿ ವಿವರಿಸಿರುವ ವೈದ್ಯೆ ಸುನಿತಾ, ಮಕ್ಕಳು ತಮಗೆ ತಿಳಿದೋ ಅಥವಾ ತಿಳಿಯದೆಯೋ ಮೂಗಿನೊಳಗೆ ವಸ್ತುಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಮಕ್ಕಳು ಅದರ ಬಗ್ಗೆ ಯಾರಿಗೂ ಹೇಳಿಕೊಂಡಿರುವುದಿಲ್ಲ. ಅದರ ಪರಿಣಾಮವಾಗಿ ಕೆಲ ಸಮಯದ ಬಳಿಕ ಮೂಗಿನಲ್ಲಿ ಹಳದಿ ಸ್ರಾವ ಅಥವಾ ರಕ್ತಸ್ರಾವವಾಗಬಹುದು. ಮಕ್ಕಳು ತಮ್ಮ ಮೂಗಿನಲ್ಲಿ ಬ್ಯಾಟರಿಗಳಂತಹ ಹಾನಿಕಾರಕ ವಸ್ತುಗಳನ್ನು ಹಾಕಿಕೊಂಡಿರುವ ನಿದರ್ಶನಗಳು ಕಂಡುಬಂದಿದೆ. ಅದಲ್ಲದೆ ಆಂಜಿಯೋಮಾ ಮತ್ತು ಆಂಜಿಯೋಫೈಬ್ರೊಮಾದಂತಹ ಸಾಮಾನ್ಯವಲ್ಲದ ಗಾಯಗಳು ಉಂಟಾದ ಸಂದರ್ಭದಲ್ಲಿಯೂ ಮೂಗಿನಲ್ಲಿ ರಕ್ತಸ್ರಾವ ಕಂಡುಬರುತ್ತದೆ ಎಂದು ಹೇಳುತ್ತಾರೆ.

ದೀರ್ಘಾವಧಿಯಲ್ಲಿ ನಾಸಲ್ ಮೂಲಕ ಸ್ಟೀರಾಯ್ಡ್ಗಳ ಬಳಕೆಯಿಂದಲೂ ರಕ್ತಸ್ರಾವವಾಗಬಹುದು. ರಕ್ತಹೀನತೆ, ರಕ್ತಸ್ರಾವದ ಸಮಸ್ಯೆ, ಪ್ಲೇಟ್ಲೆಟ್ ಸಮಸ್ಯೆ, ಲ್ಯುಕೇಮಿಯಾ, ವ್ಯಾಸ್ಕುಲಾರ್ನಲ್ಲಿನ ಅಸಹಜತೆಗಳು, ಯಕೃತ್ತಿನ ಕಾಯಿಲೆ ಮತ್ತು ಹೆಮರಾಜಿಕ್ ಸೋಂಕುಗಳಂತಹ ಡೆಂಗ್ಯೂ ಕಾರಣಗಳಿಂದಾಗಿಯೂ ಮೂಗಿನಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಅದಲ್ಲದೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು ಪೋಷಕರಿಗೆ ವೈದ್ಯೆ ಸುನಿತಾ ಸಲಹೆಗಳನ್ನು ನೀಡಿದ್ದಾರೆ.

ಮೂಗಿನಲ್ಲಿ ರಕ್ತಸ್ರಾವ ಕಂಡುಬಂದಾಗ ಈ ಚಟುವಟಿಕೆಗಳನ್ನು ಅನುಸರಿಸಿ:

• ಮೂಗಿನಲ್ಲಿ ಸಣ್ಣಪ್ರಮಾಣದಲ್ಲಿ ರಕ್ತ ಕಂಡುಬಂದಾಗ ಕೂಡಲೇ ವಿಶ್ರಾಂತಿ ತೆಗೆದುಕೊಳ್ಳಿ.
• ಆರಾಮದಾಯಕವಾಗಿ ಕುಳಿತು ಯಾವುದೇ ಅಡಚಣೆಯಿಲ್ಲದೆ ಉಸಿರಾಡಿ.
• ಮೂಗಿನಲ್ಲಿ ಕಿರಿಕಿರಿಯಾದಾಗ ಮೂಗಿನ ಡ್ರಾಪ್ಸ್ ಮತ್ತು ನಂಜುನಿರೋಧಕ ಕ್ರೀಮ್ಗಳನ್ನು ಬಳಸಿ.
• ತೀವ್ರ ರಕ್ತಸ್ರಾವ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
• ಈ ಸಂದರ್ಭದಲ್ಲಿ ಮೂಗಿನ ಮೇಲೆ ಒತ್ತಡವನ್ನು ಹಾಕಿ ಮತ್ತು ಬಾಯಿಯ ಮೂಲಕ ಉಸಿರಾಡಿ.
• ಕಬ್ಬಿಣಾಂಶವುಳ್ಳ ಆಹಾರ ಸೇವನೆಯಿಂದ ರಕ್ತಹೀನತೆಯನ್ನು ಸರಿಪಡಿಸಿಕೊಳ್ಳಬಹುದು.

ಮೂಗಿನಲ್ಲಿ ರಕ್ತಸ್ರಾವ ಕಂಡುಬಂದಾಗ ಈ ಚಟುವಟಿಕೆಗಳನ್ನು ಮಾಡದಿರಿ:

• ಮೂಗಿನಲ್ಲಿ ಕೈ ಹಾಕುವುದನ್ನು ತಪ್ಪಿಸಿ.
• ಭಯ ಪಡದೆ ಆರಾಮದಾಯಕವಾಗಿರಿ
• ರಕ್ತಸ್ರಾವವು ದೇಹದ ಒಳಗೆ ಸೇರುವುದನ್ನು ತಪ್ಪಿಸಲು ಕೂಡಲೇ ಮಲಗದಿರಿ.
• ಇಂತಹ ಸಂದರ್ಭದಲ್ಲಿ ರಕ್ತವನ್ನು ನುಂಗಬೇಡಿ, ತೀವ್ರ ರಕ್ತಸ್ರಾವವಾದ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

Exit mobile version