Site icon Vistara News

Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್‌ ಬರುತ್ತಾ?

Breast Cancer

ಬೆವರಿನ ದುರ್ಗಂಧ ತಡೆಯುವುದಕ್ಕೆ ಬಳಸುವ ರೋಲ್‌-ಆನ್‌ ಡಿಯೋಡರೆಂಟ್‌ಗಳು ಕೆಲವರಿಗೆ ಇಷ್ಟ, ಕೆಲವರಿಗೆ ಕಷ್ಟ. ಬೆವರಿನ ನಾತದಿಂದ ತಾವು ಮುಕ್ತರು ಎಂದು ಅದನ್ನು ಬಳಸುವವರು ಖುಷಿಯಿಂದಿದ್ದರೆ, ಅದನ್ನು ಬಳಸುವುದರಿಂದ ಸ್ತನ ಕ್ಯಾನ್ಸರ್‌ (Breast cancer) ಬರುತ್ತದಂತೆ ಎಂದು ಕೆಲವರು ಅಳುಕುತ್ತಾರೆ. ಯಾವುದು ನಿಜ ಎಂಬ ತಜ್ಞರ ಅಭಿಪ್ರಾಯ ಇಲ್ಲಿದೆ.

ಡಿಯೋಡರೆಂಟ್‌ ಬಳಕೆ ಮತ್ತು ಸ್ತನ ಕ್ಯಾನ್ಸರ್‌ ಬಗ್ಗೆ ಡಾ. ತನಯ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಇದೊಂದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ. ಡಿಯೋಡರೆಂಟ್‌ಗಳಲ್ಲಿ ಇರುವ ಅಲ್ಯುಮಿನಿಯಮ್‌ ಅಂಶ ಸ್ವೇದಗ್ರಂಥಿಗಳನ್ನು ಮುಚ್ಚಿ, ಅಲ್ಯುಮಿನಿಯಂ ದೇಹದಲ್ಲೇ ಉಳಿದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ʻಇಂಟರ್ನೆಟ್‌ನ ವದಂತಿʼಯಷ್ಟೇ ಎಂಬುದು ಅವರ ಅಭಿಪ್ರಾಯ.

“ಕೆಲವು ಅಧ್ಯಯನಗಳ ಪ್ರಕಾರ, ಶೇ.0.012 ರಷ್ಟು ಅಲ್ಯುಮಿನಿಯಂ ಅಂಶವಷ್ಟೇ ದೇಹಕ್ಕೆ ಸೇರುವುದು. ಇದರಿಂದ ಏನೂ ಆಗುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಬಳಸಲು ತೊಂದರೆಯಿಲ್ಲ” ಎಂದವರು ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ ತಜ್ಞ ವಲಯದಿಂದ ಸಮ್ಮತಿ ವ್ಯಕ್ತವಾಗಿದೆ. ಡಿಯೋಡರೆಂಟ್‌ ಬಳಕೆಯಿಂದ ಕೆಲವರಿಗೆ ಅಲರ್ಜಿಯಂಥ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದರೆ ಅವು ಕ್ಯಾನ್ಸರ್‌ಕಾರಕ ಎಂಬುದಕ್ಕೆ ಆಧಾರವಿಲ್ಲ ಎಂದು ಹೇಳಿದ್ದಾರೆ.

“ಸ್ತನ ಕ್ಯಾನ್ಸರ್‌ಗೆ ಮುಖ್ಯವಾಗಿ ಆನುವಂಶಿಕ ಕಾರಣಗಳು, ಜೀವನಶೈಲಿ, ವಯಸ್ಸು ಮುಂತಾದವು ಕಾರಣವಾಗುತ್ತವೆ. ಆನುವಂಶಿಕ ಕಾರಣಗಳನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಉಳಿದ ಕೆಲವು ವಿಷಯಗಳು ನಮ್ಮ ನಿಯಂತ್ರಣದಲ್ಲಿಯೇ ಇವೆ” ಎಂಬುದು ತಜ್ಞರ ಅಭಿಮತ.

ಏನು ಮಾಡಬಹುದು?
ತಿನ್ನುವ ಆಹಾರದ ಮೇಲೆ ನಿಗಾ ಇರಿಸಿ, ತೂಕ ಮಿತಿಯಲ್ಲಿಡಿ. ಜೊತೆಗೆ, ದೈಹಿಕ ಚಟುವಟಿಕೆ ಅಗತ್ಯವಾಗಿ ಬೇಕು. ಅತಿಯಾಗಿ ಅಲ್ಲದಿದ್ದರೂ, ದಿನಂಪ್ರತಿ ಬೆವರುವಷ್ಟು ಚಟುವಟಿಕೆ ಇರಲಿ. ಶಿಶುಗಳಿಗೆ ಹಾಲುಣಿಸುವುದರಿಂದ ಸ್ತನ ಕ್ಯಾನ್ಸರ್‌ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಹಸುಗೂಸುಗಳಿರುವವರು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿ.

ಮದ್ಯ ಸೇವನೆ ನಿಮ್ಮ ಜೀವನದ ಭಾಗವಾಗಿದ್ದರೆ, ತ್ಯಜಿಸುವುದು ಸೂಕ್ತ. ಋತುಬಂಧದ ನಂತರ ಹಾರ್ಮೋನ್‌ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ, ಈ ಬಗ್ಗೆ ನಿಮ್ಮ ವೈದ್ಯರಲ್ಲಿ ಮಾತನಾಡಿ. ಕೆಲವು ಹಾರ್ಮೋನು ಚಿಕಿತ್ಸೆಗಳು ಕ್ಯಾನ್ಸರ್‌ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಅವುಗಳ ಹೊರತಾಗಿ ನಿಮ್ಮ ಆರೋಗ್ಯ ಸುಧಾರಣೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ.

ಇದನ್ನೂ ಓದಿ | ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

Exit mobile version