- ರಾಧಿಕಾ ವಿಟ್ಲ
ಹಾಲಿವುಡ್ ನಟಿ ಕಿಮ್ ಕರ್ಡಾಶಿಯಾನ್(Kim Kardashian) ಈ ಸಾಲಿನ ಪ್ರತಿಷ್ಠಿತ ಮೆಟ್ ಗಾಲಾ 2022 ಪ್ರಯುಕ್ತ ಮರ್ಲಿನ್ ಮನ್ರೋ ಉಡುಗೆಯನ್ನು ಧರಿಸಿದ್ದೂ ಅಲ್ಲದೆ ಅದನ್ನು ಹಾಳು ಮಾಡಿದ್ದಾರೆ ಎಂದು ಟ್ವಿಟರ್‌ನಲ್ಲಿ ಆಕೆಯ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮನ್ರೋ ಹಾಗೂ ಕಿಮ್ ಅಭಿಮಾನಿಗಳ ನಡುವೆ ಪರ ವಿರೋಧ ಚರ್ಚೆಗಳೂ ನಡೆದಿವೆ.
ಕಿಮ್ ಈ ಬಾರಿಯ ಮೆಟ್ ಗಾಲಾದಲ್ಲಿ ತನ್ನ ಈ ದಿರಿಸಿನ ಆಯ್ಕೆಯ ವಿಚಾರವಾಗಿ ಭಾರೀ ಸುದ್ದಿ ಮಾಡಿದ್ದರು. ಮರ್ಲಿನ್ ಮನ್ರೋ 1962ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಹುಟ್ಟುಹಬ್ಬ ಸಮಾರಂಭಕ್ಕೆ ಧರಿಸಿದ್ದ ಹೊಳಪಿನ ಉಡುಪನ್ನು ಧರಿಸಿದ್ದರು. ಮರ್ಲಿನ್ ಮನ್ರೋ ಆಗ ಈ ದಿರಿಸಿನೊಂದಿಗೆ ʻಹ್ಪಾಪಿ ಬರ್ತ್‌ಡೇ ಮಿ.ಪ್ರೆಸಿಡೆಂಟ್ʼ ಎಂಬ ಪ್ರದರ್ಶನವನ್ನೂ ನೀಡಿದ್ದು, ಅದು ಆಕೆಯ ಜಗತ್ಪ್ರಸಿದ್ಧ ಪ್ರದರ್ಶನಗಳಲ್ಲೊಂದು. ಆಗ ಚರ್ಚೆಯಾಗಿದ್ದ, ಎಲ್ಲರ ಹಾಟ್ ಪೇವರಿಟ್ ಆಗಿದ್ದ ಮನ್ರೋ ದಿರಿಸು ಈಗ ಮತ್ತೆ ಹಲವು ಚರ್ಚೆ ವಾದ ವಿವಾದಗಳಿಗೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ಮನ್ರೋ ಅಭಿಮಾನಿಗಳು, ಆಕೆಯ ಈ ಐತಿಹಾಸಿಕ ಮಹತ್ವದ ದಿರಿಸನ್ನು ಕಿಮ್ ಧರಿಸಿದ್ದೂ ಅಲ್ಲದೆ ಹಾಳುಗೆಡವಿದ್ದಾಳೆ ಎಂದು ಕಿಮ್ ಮೇಲೆ ಮಾತಿನ ದಾಳಿ ನಡೆಸಿದ್ದಾರೆ.
ಕಿಮ್ ಈ ದಿರಿಸು ಧರಿಸಲು ಕಳೆದ ಮೂರು ವಾರಗಳಿಂದ ತೂಕ ಇಳಿಸಲು ಭಾರೀ ಕಸರತ್ತು ಮಾಡಿದ್ದು, 16 ಪೌಂಡ್‌ಗಳಷ್ಟು ತೂಕ ಇಳಿಸಿಕೊಂಡಿದ್ದು ಅದು ಸಾಕಷ್ಟು ಸುದ್ದಿ ಮಾಡಿತ್ತು. ಗಮನಾರ್ಹ ತೂಕ ಇಳಿಕೆಯ ಮೂಲಕ ದಿರಿಸಿಗೆ ಹೊಂದುವಂತೆ ಬದಲಾದರೂ, ಈಗ ಎಲ್ಲ ಕಡೆ ಹರಿದಾಡಿರುವ ಈಕೆಯ ವಿಡಿಯೋ ಒಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಮನ್ರೋ ಅವರ ದಿರಿಸಿನೊಳಗೆ ಕಿಮ್ ದೇಹ ಹೊಂದಿಸಲು ಆಕೆಯ ಸಹಾಯಕರು ಕಷ್ಟ ಪಡುತ್ತಿರುವ ವಿಡಿಯೋ ಇದಾಗಿದೆ. ಸರಿಯಾಗಿ ಫಿಟ್ ಆಗದ ದಿರಿಸಿನೊಳಗೆ ಬಹಳ ಕಷ್ಟಪಟ್ಟು ಆಕೆಯ ದೇಹವನ್ನು ತೂರಿಸಿದ್ದರಿಂದಲೇ ಈ ಐತಿಹಾಸಿಕ ದಿರಿಸು ಹಾಳಾಗಿದೆ. ಕೆಲವೆಡೆ ಹರಿದು ಹೋಗಿರುವಂತಾಗಿದೆ. ಇನ್ನೂ ಕೆಲವೆಡೆ, ಈ ದಿರಿಸಲ್ಲಿ ಬಳಸಿದ್ದ ಅಮೂಲ್ಯ ಹೊಳೆವ ಮಣಿಗಳೂ ಉದುರಿ ಹೋಗಿ ತನ್ನ ಅಂದವನ್ನು ಕಳೆದುಕೊಂಡಿದೆ ಎಂದು ಮನ್ರೋ ಅಭಿಮಾನಿಗಳು ಆಪಾದಿಸಿದ್ದಾರೆ. ಕಿಮ್ ಧರಿಸುವ ಮೊದಲು ಹಾಗೂ ನಂತರದ ಪರಿಸ್ಥಿತಿಯ ಉಡುಗೆಯ ಫೋಟೋಗಳೂ ವೈರಲ್ ಆಗಿವೆ.
ಇದರಲ್ಲಿ ಕಿಮ್ ತಪ್ಪಿಲ್ಲ, ಆಕೆಯನ್ನು ಆಕೆಗೆ ಸರಿಯಾಗಿ ಹೊಂದದ ದಿರಿಸನೊಳಗೆ ತುರುಕಿದವರದ್ದೇ ಇದು ತಪ್ಪು. ಇದಕ್ಕಾಗಿ ಕಿಮ್ ದೂರಬೇಡಿ ಎಂದು ಕಿಮ್ ಅಭಿಮಾನಿಗಳು ಪ್ರತಿದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಿಸಿಲಲ್ಲಿ ಮೇಕಪ್ ಕಾಪಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಕಿಮ್ ತನ್ನ ಪ್ರಿಯಕರ ಪೀಟ್ ಡೇವಿಡ್‌ಸನ್ ಜೊತೆಗೆ ಪ್ರತಿಷ್ಟಿತ ಮೆಟ್ ಗಾಲಾ 2022ರಲ್ಲಿ ರೆಡ್ ಕಾರ್ಪೆಟ್ ಮೇಲೆ ಇದೇ ಮರ್ಲಿನ್ ಮನ್ರೋ ದಿರಿಸಿನಲ್ಲಿ ಹೆಜ್ಜೆ ಹಾಕಿದ್ದರು. ಪೀಟ್ ಡೇವಿಡ್‌ಸನ್ ಆಕೆಯ ಈ ದಿರಿಸಿಗೆ ಹೊಂದಿಕೆಯಾಗುವಂತೆ ತನ್ನ ಕೂದಲನ್ನು ಪ್ಲಾಟಿನಂ ಬಣ್ಣಕ್ಕೆ ಬದಲಾಯಿಸಿದ್ದರು.
ಈ ಐತಿಹಾಸಿಕ ಉಡುಗೆ ತೊಟ್ಟ ಕಿಮ್ ಮಾಧ್ಯಮದೆದುರು, “ಅಮೆರಿಕಾದ ಇತಿಹಾಸದಲ್ಲಿ ಈ ಉಡುಗೆಯ ಸ್ಥಾನಮಾನದ ಬಗ್ಗೆ ಅರಿವಿರುವುದರಿಂದ ಈ ಉಡುಗೆಯ ಮೇಲೆ ನನಗೆ ಅತೀವ ಗೌರವವಿದೆ. ಇದು ನನ್ನ ಬದುಕಿನ ಖುಷಿಯ ಕ್ಷಣವೂ ಹೌದು. ಈ ಉಡುಗೆಗೆ ಯಾವುದೇ ರೀತಿಯಲ್ಲಿ ಹಾನಿಯಾಗಬಾರದೆಂದು ನಾನು ಸಾಮಾನ್ಯವಾಗಿ ಮಾಡಿಕೊಳ್ಳುವ ಮೇಕಪ್ ಕೂಡಾ ಮಾಡಿಕೊಂಡಿಲ್ಲ. ಇದನ್ನು ಹಾಕಿಕೊಂಡು ಕೂರುವುದು ತಿನ್ನುವುದು ಕೂಡಾ ನಾನು ಮಾಡಿಲ್ಲ” ಎಂದಿದ್ದರು. ಜೊತೆಗೆ, ಕಿಮ್ ಈ ಉಡುಗೆಯಲ್ಲಿ ಹೆಚ್ಚು ಹೊತ್ತು ಇರಲು, ನಡೆಯಲು ಸಾಧ್ಯವಾಗದೆ ಇದ್ದದ್ದರಿಂದ ಇದೇ ಉಡುಪನ್ನು ಹೋಲುವ ತನ್ನಳತೆಯ ಇಂಥದ್ದೇ ಇನ್ನೊಂದು ಉಡುಗೆ ಬದಲಾಯಿಸಿಕೊಂಡಿದ್ದರು.
ಇದನ್ನೂ ಓದಿ: Bridal Lehenga | ಲೆಹೆಂಗ ಪರ್ಚೇಸ್ ಮಾಡುವ ಮುನ್ನ ಇಲ್ಲಿದೆ 7 ಟಿಪ್ಸ್