ಬಿಸಿಲಿನ ತಾಪ ಮುಗಿಲು ಮುಟ್ಟುತ್ತಿದೆ. ಇತ್ತೀಚೆಗಷ್ಟೇ ಬಿಸಿಲ ಝಳಕ್ಕೆ (heat stroke) ಜೀವ ಕಳೆದುಕೊಂಡವರ ವರ್ತಮಾನ ಕೇಳಿದಾಗ ಗಾಬರಿಯಾದರೆ ಅಚ್ಚರಿಯಿಲ್ಲ. ಎಪ್ರಿಲ್ ತಿಂಗಳಲ್ಲಿ ಹೆಚ್ಚೇ ಎನಿಸುವಷ್ಟು ಸೂರ್ಯ ತನ್ನ ಝಳವನ್ನು ಝಳಪಿಸುತ್ತಿದ್ದಾನೆ. ದೇಹದ ತಾಪಮಾನವನ್ನು ಕಾಯ್ದುಕೊಳ್ಳುವ ಸಹಜ ತಂತ್ರಗಳು ಕೆಲವೊಮ್ಮೆ ದೇಹಕ್ಕೇ ಕೈಕೊಟ್ಟಾಗ ಆರೋಗ್ಯ ಏರುಪೇರಾಗುವುದು ನಿಶ್ಚಿತ. ಸುಸ್ತು, ಆಯಾಸ, ಡಯರಿಯಾ, ವಾಂತಿ, ನಿರ್ಜಲೀಕರಣ, ಮಾನಸಿಕ ಗೊಂದಲ, ಹೀಟ್ ಸ್ಟ್ರೋಕ್ ಮುಂತಾದ ಹಲವು ರೀತಿಯ ಸಮಸ್ಯೆಗಳು ಎರಗಬಹುದು. ಈಗಾಗಲೇ ಇರುವಂಥ ಆರೋಗ್ಯ ಸಮಸ್ಯೆಗಳು ಉಲ್ಭಣಿಸಬಹುದು. ಬಿಸಿಲಿನ ಆಘಾತದಿಂದ (heat stroke) ಕೆಲವೊಮ್ಮೆ ವ್ಯಕ್ತಿಗಳ ವರ್ತನೆಯಲ್ಲೂ ವ್ಯತ್ಯಾಸ ಕಾಣಬಹುದು.
ತೀಕ್ಷ್ಣ ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ, ಸಾಕಷ್ಟು ನೀರು ಕುಡಿಯದಿರುವುದರಿಂದ ಮೊದಲಿಗೆ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ ಹೀಟ್‌ಸ್ಟ್ರೋಕ್ ಉಂಟಾಗಬಹುದು. ಅಂದರೆ, ಜ್ವರದ ಯಾವುದೇ ಲಕ್ಷಣವಿಲ್ಲದಿದ್ದರೂ, ದೇಹದ ಉಷ್ಣತೆ ೧೦೪ ಡಿಗ್ರಿ ಫ್ಯಾರನ್‌ಹೀಟ್ ಅಥವಾ ಅದಕ್ಕಿಂತಲೂ ಹೆಚ್ಚು ತಲುಪಬಹುದು. ಇದಕ್ಕೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಬೇಕು. ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು. ಏನಿದರ ಲಕ್ಷಣಗಳು?
Heat stroke: ತೀಕ್ಷ್ಣವಾಗಿ ಏರುವ ದೇಹದ ಉಷ್ಣತೆ
ತೀವ್ರವಾದ ಜ್ವರದಲ್ಲಿ ಏರುವ ದೇಹದ ಉಷ್ಣತೆಯಂತೆಯೇ ೪೦ ಡಿ. ಸೆ. ಅಥವಾ ೧೦೪ ಡಿ. ಫ್ಯಾರನ್‌ಹೀಟ್ ತಲುಪುತ್ತದೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚೂ ಇರಬಹುದು. ಹೃದಯದ ಬಡಿತ ತೀವ್ರಗತಿಯಲ್ಲಿರುತ್ತದೆ. ಈ ಹಂತದಲ್ಲಿ ತಕ್ಷಣ ಎಚ್ಚೆತ್ತುಕೊಂಡು ಆಸ್ಪತ್ರೆಗೆ ಧಾವಿಸುವುದು ಕ್ಷೇಮ.
ಉಸಿರಾಟ
ಹೃದಯದ ಬಡಿತಕ್ಕೆ ಪೂರಕವಾಗಿ ಉಸಿರಾಟವೂ ತೀವ್ರವಾಗಿರುತ್ತದೆ. ಏರಿಕ ಬಡಿತ ಮತ್ತು ಉಸಿರಾಟದ ಮೂಲಕ ಹೆಚ್ಚಿನ ಆಮ್ಲಜನಕ ಒದಗಿಸಿ, ಶರೀರವನ್ನು ತಂಪಾಗಿಸುವ ಯತ್ನವನ್ನು ದೇಹ ತಂತಾನೇ ಮಾಡುತ್ತಿರುತ್ತದೆ. ಈ ಹಂತದಲ್ಲಿ ಉಸಿರಾಟದ ತೊಂದರೆ ಮತ್ತು ಅತೀವ ಬೆವರು ಸಹ ಗೋಚರಿಸಬಹುದು ಅಥವಾ ಬೆವರೇ ಬಾರದೆಯೂ ಇರಬಹುದು.
ಗೊಂದಲ
ದೇಹದಲ್ಲಿನ ಈ ಬದಲಾವಣೆಯಿಂದ ಮೆದುಳಿನಲ್ಲೂ ಸಮಸ್ಯೆಗಳು ಕಂಡು ಬರುತ್ತವೆ. ಬಿಸಿಲಿನ ಆಘಾತಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಗೊಂದಲ, ಕೋಪ, ದೇಹದ ಅಸಮತೋಲನ ಕೆಲವೊಮ್ಮೆ ಅಪಸ್ಮಾರವೂ ಕಂಡುಬಂದೀತು. ಇಂಥವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿ ಬೇಕು.
ತಲೆನೋವು
ತೀವ್ರವಾದ ತಲೆನೋವು, ತಲೆಸುತ್ತುವುದು, ಹೊಟ್ಟೆ ತೊಳೆಸುವುದು, ವಾಂತಿ- ಇವೆಲ್ಲವೂ ನಿರ್ಜಲೀಕರಣದ ಲಕ್ಷಣಗಳಾಗಿರಬಹುದು. ಮೈ ಮುಟ್ಟಿದರೆ ಬಿಸಿಯ ಅನುಭವ ಮತ್ತು ಚರ್ಮ ಒಣಗಿದಂಥ ಲಕ್ಷಣಗಳು ಕಾಣಬಹುದು. ಮೊದಲಿಗೆ ಸಿಕ್ಕಾಪಟ್ಟೆ ಬೆವರುವ ದೇಹದಿಂದ ಕ್ರಮೇಣ ಒಂದು ಹನಿ ಬೆವರೂ ಬಾರದಿರಬಹುದು. ಇಂಥ ಸಂದರ್ಭಗಳಲ್ಲೂ ಚಿಕಿತ್ಸೆ ಬೇಕಾಗುತ್ತದೆ.
ಇದನ್ನೂ ಓದಿ: Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ!
ಮಾಂಸಖಂಡಗಳಲ್ಲಿ ನೋವು
ಬಿಸಿಲಿನ ಆಘಾತದಿಂದ ಮಾಂಸಖಂಡಗಳಲ್ಲಿ ನೋವು, ಏಳಲಾರದಂಥ ಸುಸ್ತು ಆರಂಭವಾಗಿ ನಂತರ ಎಚ್ಚರ ತಪ್ಪಬಹುದು. ತೀವ್ರವಾದ ಸೆಖೆಯ ದಿನಗಳಲ್ಲಿ ಸಿಕ್ಕಾಪಟ್ಟೆ ವ್ಯಾಯಾಮ ಮಾಡಿದಾಗ ಮೊದಲಿಗೆ ಕಾಣುವ ಲಕ್ಷಣಗಳೆಂದರೆ ಕಾಲು, ತೋಳು ಅಥವಾ ಕಿಬ್ಬೊಟ್ಟೆಯಲ್ಲಿ ನೋವು. ಚೆನ್ನಾಗಿ ನೀರು, ಒಆರೆಸ್ ನಂಥ ಎಲೆಕ್ಟ್ರೋಲೈಟಿಕ್ ಪೇಯಗಳು ದೇಹಕ್ಕೆ ಜರೂರಾಗಿ ಬೇಕಾಗುತ್ತದೆ.
ಚರ್ಮ ಒಣಗುವುದು, ಕೆಂಪಾಗುವುದು ಇಂಥವೆಲ್ಲಾ ಈ ಲಕ್ಷಣಗಳ ಜೊತೆಜೊತೆಗೇ ಕಾಣಬಹುದು. ಇಂಥ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಧಾವಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ವ್ಯಕ್ತಿಯ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ವ್ಯಕ್ತಿಯನ್ನು ನೆರಳಿರುವ, ತಂಪಾದ, ತಾಜಾ ಗಾಳಿ ಬರುವ ಜಾಗಕ್ಕೆ ಸ್ಥಳಾಂತರಿಸಿ. ಒಆರೆಸ್‌ನಂಥ ಎಲೆಕ್ಟ್ರೋಲೈಟಿಕ್ ಪೇಯಗಳನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸುತ್ತಿರಿ. ಸಾಧ್ಯವಾದರೆ ಮೈಯನ್ನೆಲ್ಲಾ ತಂಪಾದ ಒದ್ದೆ ಬಟ್ಟೆಯಲ್ಲಿ ಒರೆಸಿ, ಚನ್ನಾಗಿ ಗಾಳಿ ಹಾಕಿ. ದೇಹದ ಬಿಸಿ ಹೆಚ್ಚುತ್ತ ಹೋದಂತೆ ಜೀವಾಪಾಯವೂ ಹೆಚ್ಚುತ್ತಲೇ ಹೋಗುತ್ತದೆ.