Site icon Vistara News

Bread recipes | ಬ್ರೆಡ್‌ನಲ್ಲೂ ಸಾಧ್ಯ ಬಗೆಬಗೆಯ ಫಟಾಫಟ್‌ ಸವಿರುಚಿಗಳು!

bread recipe

ನೀವು ಬ್ರೆಡ್‌ ಪ್ರಿಯರೇ? ಅದೇ ಟೋಸ್ಟ್‌, ಅದೇ ಆಮ್ಲೆಟ್‌ ತಿಂದು ತಿಂದು ಸಾಕಾಗಿ ಹೋಗಿದೆಯೇ? ಹಾಗಾದರೆ, ಥರಹೇವಾರಿ ಬ್ರೆಡ್‌ ಸವಿರುಚಿಗಳು ನಿಮಗಾಗಿ ಕಾದಿವೆ. ಒಂದಿಷ್ಟು ಸಮಯ, ತಿಳಿದುಕೊಳ್ಳುವ ಕುತೂಹಲ, ಹೊಸರುಚಿಯನ್ನು ಟ್ರೈ ಮಾಡುವ ಆಸಕ್ತಿ ಇವಿಸ್ಟಿದ್ದರೆ ಸಾಕು, ಒಂದಲ್ಲ, ಎರಡಲ್ಲ, ನಾನಾ ನಮೂನೆಯ ಬಾಯಲ್ಲಿ ನೀರೂರಿಸುವ ರೆಸ್ಟೋರೆಂಟಿನ ಯಾವ ತಿಂಡಿಗೂ ಕಡಿಮೆ ಇಲ್ಲದಂಥ ರೆಸಿಪಿಗಳು ನಿಮಗಾಗಿ ಕಾದಿವೆ.

ಸಂಜೆಯ ಸವಿರುಚಿಗೆ ತಿನ್ನಬಹುದಾದ ತಿಂಡಿಗಳು, ಬೆಳಗ್ಗೆ ಎದ್ದ ಕೂಡಲೇ ಹೊಟ್ಟೆ ತುಂಬಿಸಬಹುದಾದ ತಿಂಡಿಗಳು, ಮಧ್ಯಾಹ್ನಕ್ಕೂ ಹೊಟ್ಟೆಗಿಳಿದು ತೇಗಿಸಬಹುದಾದ ತಿನಿಸುಗಳು ಬ್ರೆಡ್‌ನಲ್ಲಿ ಸಾಧ್ಯವಿದೆ! ಗಾರ್ಲಿಕ್‌ ಬ್ರೆಡ್‌ನಿಂದ ಹಿಡಿದು ಸ್ಯಾಂಡ್‌ವಿಚ್‌, ಪಿಜ್ಜಾವರೆಗೆ ನಾನಾ ನಮೂನೆಯ ರೆಸಿಪಿಗಳು, ಅಡುಗೆ ಆಸಕ್ತರಿಗಾಗಿ ಕಾಯುತ್ತಿವೆ.‌ ಸದ್ಯಕ್ಕೆ ಎರಡು ವಿಭಿನ್ನ ದಿಢೀರ್‌ ಮಾಡಬಹುದಾದ ಬಾಯಲ್ಲಿ ನೀರೂರಿಸುವ ಬ್ರೆಡ್‌ ರೆಸಿಪಿಗಳನ್ನು ಇಲ್ಲಿ ತಿಳಿಯೋಣ.

ಬ್ರೆಡ್‌ ಉಪ್ಪಿಟ್ಟು: ಬೆಳಗ್ಗೆದ್ದು, ಮತ್ತೆ ಅದೇ ಬ್ರೆಡ್‌ ಟೋಸ್ಟ್‌ ಮಾಡಿ ತಿನ್ನಬೇಕಾ ಅಂತ ನಿರಾಸಕ್ತಿ ಬಂದರೆ, ಈ ರೆಸಿಪಿ ಉತ್ತಮ. ದಿಢೀರ್‌ ರೆಡಿಯಾಗುವ ಒಂದು ಉತ್ತಮ ಬ್ರೇಕ್‌ಫಾಸ್ಟ್‌ ಆಗುವ ಎಲ್ಲ ಅರ್ಹತೆಗಳನ್ನೂ ಇದು ಹೊಂದಿದೆ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಸಾಸಿವೆ ಸಿಡಿಸಿ. ಸ್ವಲ್ಪ ಜೀರಿಗೆ ಸೇರಿಸಿ. ಒಂದು ಈರುಳ್ಳಿ ಹೆಚ್ಚಿ ಹಾಕಿ. ಅದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಲು ಶುರುವಾದಾಗ ಹಸಿಮೆಣಸು ಕತ್ತರಿಸಿ ಹಾಕಿ. ಐದಾರು ಎಲೆ ಕರಿಬೇವು ಹಾಕಿ. ಸಣ್ಣದಾಗಿ ಹೆಚ್ಚಿದ ಶುಂಠಿ ಸೇರಿಸಿ ಸ್ವಲ್ಪ ಹೊತ್ತು ಬಿಡಿ. ಶುಂಠಿಯ ಹಸಿ ವಾಸನೆ ಹೋಗುವಾಗ ಸಣ್ಣದಾಗಿ ಹೆಚ್ಚಿದ ಟೊಮೇಟೋ ಸೇರಿಸಿ. ಚಿಟಿಕೆ ಇಂಗು, ಚಿಟಿಕೆ ಅರಿಶಿನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಕತ್ತರಿಸಿದ ಬ್ರೆಡ್‌ ತುಂಡುಗಳನ್ನು ಸೇರಿಸಿಹದ ಉರಿಯಲ್ಲಿ ಸ್ವಲ್ಪ ಹೊತ್ತು ಬಿಡಿ. ಬ್ರೆಡ್‌ ಉಪ್ಪಿಟ್ಟು ರೆಡಿ!

ಮಸಾಲಾ ಸ್ಯಾಂಡ್‌ವಿಚ್‌: ಭಾನುವಾರದ ಸಂಜೆ ಮನೆಯಲ್ಲಿ ಕೂತು ಏನಾದರೂ ದಿಢೀರ್‌ ರುಚಿ ಟ್ರೈ ಮಾಡಬೇಕೆಂದು ಮನಸ್ಸಾದರೆ ಇದು ಅತ್ಯುತ್ತಮ ಆಯ್ಕೆ. ಒಂದಿಷ್ಟು ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಚಾಟ್‌ ಮಸಾಲಾ, ಒಂದೆರಡು ಹಸಿಮೆಣಸು ಹಾಕಿ ರುಬ್ಬಿಕೊಂಡು, ಸ್ವಲ್ಪ ನೀರು ಸೇರಿಸಿ ಹಸಿರು ಚಟ್ನಿ ಮಾಡಿಡಿ. 3-4 ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಹಿಸುಕಿ ಪುಡಿ ಮಾಡಿ ಇಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ ಸ್ವಲ್ಪ ಜೀರಿಗೆ, ಇಂಗು ಸೇರಿಸಿ. ಸಣ್ಣದಾಗಿ ಹೆಚ್ಚಿದ ಹಸಿಮೆಣಸು, ಚಿಟಿಕೆ ಅರಿಶಿನ, ನಾಲ್ಕೈದು ಕರಿಬೇವಿನೆಲೆ ಸೇರಿಸಿ, ಸ್ವಲ್ಪ ಹೊತ್ತು ಬಿಟ್ಟು ಪುಡಿ ಮಾಡಿಟ್ಟ ಆಲೂಗಡ್ಡೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಚೆನ್ನಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ಈಗ ಮಸಾಲಾ ರೆಡಿ.

ಇದನ್ನೂ ಓದಿ | Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

ಬ್ರೆಡ್‌ಗೆ ಬೆಣ್ಣೆ ಸವರಿ, ಅದರ ಮೇಲೆ ಹಸಿರು ಚಟ್ನಿಯನ್ನು ಹಾಕಿ ಸ್ಪ್ರೆಡ್‌ ಮಾಡಿ. ಈಗ ನೀವು ಮಾಡಿಟ್ಟುಕೊಂಡ ಆಲೂಗಡ್ಡೆ ಮಸಾಲೆಯನ್ನು ಸ್ಪ್ರೆಡ್‌ ಮಾಡಿ. ಇದರ ಮೇಲೆ ವೃತ್ತಾಕಾರವಾಗಿ ಕತ್ತರಿಸಿದ ಟೊಮೇಟೋ, ಈರುಳ್ಳಿಯನ್ನೂ ಇಡಿ. ಇಷ್ಟವಿದ್ದರೆ, ಸೌತೆಕಾಯಿ ಸ್ಲೈಸನ್ನೂ ಇಡಬಹುದು. ಇವುಗಳ ಮೇಲೆ ಸ್ವಲ್ಪ ಚಾಟ್‌ ಮಸಾಲಾ ಚಿಮುಕಿಸಿ. ತುರಿಸ ಚೀಸ್‌ ಉದುರಿಸಿ. ಬೆಣ್ಣೆ ಹಚ್ಚಿಟ್ಟ ಬ್ರೆಡ್‌ ಇದರ ಮೇಲೆ ಇಟ್ಟು, ಸಣ್ಣ ಉರಿಯಲ್ಲಿ ತವಾದ ಮೇಲೆ ಟೋಸ್ಟ್‌ ಮಾಡಿ. ತ್ರಿಕೋನಾಕಾರದಲ್ಲಿ ಕತ್ತರಿಸಿ. ಬಿಸಿ ಬಿಸಿ ಮಸಾಲಾ ಸ್ಯಾಂಡ್‌ವಿಚ್‌ ಮೇಲೆ ಈಗ ಸೇವ್‌ ಉದುರಿಸಿ ತಿನ್ನಿ. ಬಿಸಿಬಿಸಿಯಾಗಿ ಆಹಾ ಎಂಬ ರುಚಿಯೊಂದಿಗೆ ಸಂಜೆಯ ಧೋ ಮಳೆಯಲ್ಲೂ, ಬೆಳಗಿನ ಬ್ರೇಕ್‌ಫಾಸ್ಟ್‌ ಆಗಿಯೂ, ಊಟ ಸಿಕ್ಕದಿದ್ದರೆ ಮಧ್ಯಾಹ್ನವೂ ನಿಮ್ಮ ಮೂಡ್‌ಗೆ ಹೊಂದುವಂತಿದ್ದರೆ ತಿನ್ನಬಹುದು. ಯಾವ ಹೊತ್ತಿನಲ್ಲೂ ಹೊಟ್ಟೆಯನ್ನು ತುಂಬಿಸಬಹುದಾದ ಆಪತ್ಬಾಂಧವ ಇದು!

ಇದನ್ನೂ ಓದಿ | Party time | ಪಾರ್ಟಿ ಮಾಡಿ ಸಂಭ್ರಮಿಸಿದರೆ ಆರೋಗ್ಯ ವೃದ್ಧಿ ಎನ್ನುತ್ತದೆ ಈ ಅಧ್ಯಯನ!

Exit mobile version